ದಳಪತಿ ದೆಸೆಯಿಂದ ರದ್ದಾಯ್ತು ‘ಕಾಂತಾರ: ಚಾಪ್ಟರ್ 1’ ಅದ್ಧೂರಿ ಪ್ರೀ ರಿಲೀಸ್

Thalapthy Vijay-Kantara Chapter 1: ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2 ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಜೋರಾಗಿ ನಡೆದಿದೆ. ಹೈದರಾಬಾದ್​​ನಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಯಶಸ್ವಿಯಾಗಿದೆ. ಆದರೆ ಚೆನ್ನೈನಲ್ಲಿ ಆಯೋಜಿಸಿದ್ದ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

ದಳಪತಿ ದೆಸೆಯಿಂದ ರದ್ದಾಯ್ತು ‘ಕಾಂತಾರ: ಚಾಪ್ಟರ್ 1’ ಅದ್ಧೂರಿ ಪ್ರೀ ರಿಲೀಸ್
Thalapathy Vijay Kantara

Updated on: Sep 30, 2025 | 10:37 AM

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಚಿತ್ರತಂಡ ದೇಶದಾದ್ಯಂತ ಸಂಚರಿಸಿ ಅದ್ಧೂರಿಯಾಗಿ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದೆ. ಮೊನ್ನೆ (ಭಾನುವಾರ) ಹೈದರಾಬಾದ್​​ನಲ್ಲಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಜೂ ಎನ್​​ಟಿಆರ್ ಅತಿಥಿಯಾಗಿ ಭಾಗಿ ಆಗಿದ್ದರು. ನಟ ರಿಷಬ್ ಶೆಟ್ಟಿ ಹೈದರಾಬಾದ್ ಕಾರ್ಯಕ್ರಮದಲ್ಲಿ ಕನ್ನಡದಲ್ಲಿಯೇ ಮಾತನಾಡಿ ಗಮನ ಸೆಳೆದರು.

ಹೈದರಾಬಾದ್​​​ನ ಬಳಿಕ ಚೆನ್ನೈನಲ್ಲಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ತಮಿಳಿನ ಸ್ಟಾರ್ ನಟರೊಬ್ಬರನ್ನು ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೆ ಇದೀಗ ಹಠಾತ್ತನೆ ಪ್ರೀ ರಿಲೀಸ್ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಇದಕ್ಕೆ ಕಾರಣ ದಳಪತಿ ವಿಜಯ್!

ದಳಪತಿ ವಿಜಯ್ ಅವರ ರಾಜಕೀಯ ರ್ಯಾಲಿಯಲ್ಲಿ ನಡೆದ ನೂಕಾಟದಲ್ಲಿ 40 ಕ್ಕೂ ಹೆಚ್ಚು ಮಂದಿ ಕರೂರಿನಲ್ಲಿ ನಿಧನ ಹೊಂದಿದ್ದಾರೆ. ಇದು ದೇಶದಾದ್ಯಂತ ಸುದ್ದಿಯಾಗಿದೆ. ತಮಿಳುನಾಡು ಸರ್ಕಾರ, ಘಟನೆಯ ತನಿಖೆ ನಡೆಸುತ್ತಿದೆ. ಕರೂರಿನಲ್ಲಿ ಘಟನೆ ನಡೆದಿದ್ದು, ವಿಜಯ್ ಅವರ ಬಂಧನಕ್ಕೆ ಒತ್ತಾಯಗಳು ಸಹ ಕೇಳಿ ಬರುತ್ತಿದೆ. ಹೀಗಿರುವಾಗ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ ನಡೆಸುವುದು ಸೂಕ್ತವಲ್ಲ ಎಂಬ ನಿರ್ಣಯಕ್ಕೆ ಬಂದು ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

ಇದನ್ನೂ ಓದಿ:ಕಾಂತಾರ ಸುಂದರಿ ರುಕ್ಮಿಣಿ ವಸಂತ್ ತಮಾಷೆ ನೋಡಿ

ಈ ಬಗ್ಗೆ ಹೊಂಬಾಳೆ ಫಿಲಮ್ಸ್ ಪ್ರಕಟಣೆ ಹೊರಡಿಸಿದ್ದು, ‘ಇತ್ತೀಚೆಗೆ ನಡೆದ ದುರ್ಘಟನೆಯ ಕಾರಣದಿಂದಾಗಿ ಚೆನ್ನೈನಲ್ಲಿ ಆಯೋಜಿಸಿದ್ದ ‘ಕಾಂತಾರ: ಚಾಪ್ಟರ್ 1’ ಪ್ರೀ ರಿಲೀಸ್ ಇವೆಂಟ್ ಅನ್ನು ನಾವು ರದ್ದು ಮಾಡಿದ್ದೇವೆ. ಸಂತ್ರಸ್ತರ ನೋವಿನ ಜೊತೆಯಾಗಿ ನಿಲ್ಲುವ ಸಮಯ ಇದಾಗಿದೆ. ಘಟನೆಯಿಂದ ಹಾನಿಗೆ ಒಳಗಾದ ಕುಟುಂಬಗಳಿಗೆ ನಮ್ಮ ಸಂತಾಪಗಳು, ತಮಿಳುನಾಡಿನ ಜನರ ಪ್ರೀತಿ ಮತ್ತು ಅರ್ಥಮಾಡಿಕೊಳ್ಳುವಿಕೆಗೆ ನಾವು ಋಣಿಯಾಗಿದ್ದೇವೆ. ತಮಿಳುನಾಡಿನ ಜನರನ್ನು ಚಿತ್ರಮಂದಿರಗಳಲ್ಲಿ ಭೇಟಿ ಆಗಲು ನಾವು ಕಾತರರಾಗಿದ್ದೇವೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

2022ರ ‘ಕಾಂತಾರ’ ಸಿನಿಮಾ ತಮಿಳುನಾಡಿನಲ್ಲಿ ಅದ್ಭುತ ಪ್ರದರ್ಶನ ತೋರಿತ್ತು. ತಮಿಳುನಾಡಿನ ಜನರಿಗೆ ಸಿನಿಮಾ ಬಹಳ ಇಷ್ಟವಾಗಿತ್ತು. ಸ್ವತಃ ನಟ ರಜನೀಕಾಂತ್ ಅವರು ‘ಕಾಂತಾರ’ ಸಿನಿಮಾ ನೋಡಿ, ರಿಷಬ್ ಶೆಟ್ಟಿ ಅವರನ್ನು ಮನೆಗೆ ಆಹ್ವಾನಿಸಿ ಅವರೊಟ್ಟಿಗೆ ಮಾತುಕತೆ ನಡೆಸಿ, ರಿಷಬ್ ಶೆಟ್ಟಿ ಅವರಿಗೆ ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿದ್ದರು. ಈ ಬಾರಿಯೂ ಸಹ ತಮಿಳುನಾಡಿನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಚಿತ್ರತಂಡದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ