AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಅನುಪಸ್ಥಿತಿಯಲ್ಲಿ ಹೊಸ ಬಿರುಗಾಳಿ: ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಗೆ ಗ್ರಾಸವಾದ ಧನ್ವೀರ್-ವಿಜಯಲಕ್ಷ್ಮಿ ಹಗ್ಗಜಗ್ಗಾಟ

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತ ನಟ ಧನ್ವೀರ್ ನಡುವಿನ ಭಿನ್ನಾಭಿಪ್ರಾಯವು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಮೂಲಕ ಪ್ರಾರಂಭವಾಗಿತ್ತು. ಕೊನೆಗೆ ಪರಸ್ಪರ ಪೊಲೀಸ್ ಠಾಣೆ ಮೆಟ್ಟಿಲೇರುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದ ವಿವಾದವಾಗಿ ಹೊರಹೊಮ್ಮಿದೆ. ಆ ಬಗ್ಗೆ ಇಲ್ಲಿದೆ ವಿವರ.

ದರ್ಶನ್ ಅನುಪಸ್ಥಿತಿಯಲ್ಲಿ ಹೊಸ ಬಿರುಗಾಳಿ: ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಗೆ ಗ್ರಾಸವಾದ ಧನ್ವೀರ್-ವಿಜಯಲಕ್ಷ್ಮಿ ಹಗ್ಗಜಗ್ಗಾಟ
ದರ್ಶನ್​, ಧನ್ವೀರ್, ವಿಜಯಲಕ್ಷ್ಮಿ
ರಾಜೇಶ್ ದುಗ್ಗುಮನೆ
|

Updated on: Oct 24, 2026 | 3:10 PM

Share

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಧನ್ವೀರ್ ನಡುವೆ ಹೊಸ ಬಿರುಗಾಳಿ ಎದ್ದಿದೆ. ಇಷ್ಟು ದಿನ ಭೂದಿ ಮುಚ್ಚಿದ ಕೆಂಡದಂತಿದ್ದ ವಿಷಯ ಈಗ ಬಹಿರಂಗಗೊಂಡಿದ್ದು, ಪೊಲೀಸ್ ಠಾಣೆಯ ಮೆಟ್ಟಿಲೇರಿವೆ. ಒಂದು ಕಾಲದಲ್ಲಿ ದರ್ಶನ್ ಅವರ ಬೆನ್ನಿಗೆ ನಿಂತು ಪ್ರತಿಯೊಂದು ಸಂದರ್ಭದಲ್ಲೂ ಜೊತೆಯಾಗಿದ್ದ ಧನ್ವೀರ್ ಅವರನ್ನು ವಿಜಯಲಕ್ಷ್ಮಿ ಹೊರಕ್ಕೆ ಇಟ್ಟಿದ್ದಾರೆ.

ದರ್ಶನ್ ಜೈಲಿಗೆ ಹೋದಾಗ ವಿಜಯಲಕ್ಷ್ಮಿ ಅವರ ಜೊತೆ ನಿಂತಿದ್ದು ಧನ್ವೀರ್. ಪ್ರತಿ ಹಂತದಲ್ಲೂ ದರ್ಶನ್ ಜೊತೆ ತಮ್ಮನಾಗಿ ಅವರು ನಿಂತಿದ್ದರು. ಆದರೆ, ಇತ್ತೀಚೆಗೆ ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವಿನ ಬಾಂಧವ್ಯ ಹಳಸಿದೆ ಎಂದು ಹೇಳಲಾಗಿತ್ತು. ಈ ಮುಸಿಕನಗುದ್ದಾಟ ಈಗ ಹೊರ ಬಂದಿದೆ.

ಚಾಮರಾಜ ನಗರದಲ್ಲಿ ನಡೆದ ಯುವ ದಸರಾ ವೇದಿಕೆಯಲ್ಲಿ ಧನ್ವೀರ್ ಮಾತನಾಡುವಾಗ ದರ್ಶನ್ ಹೆಸರು ತೆಗೆದಿದ್ದರು. ‘ಏನೇ ಕುತಂತ್ರಗಳು ನಡೆದರೂ ಹಾಗೂ ನಾಯಿ-ನರಿಗಳು ಏನೇ ಮಾಡಿದರು ಆ ಯಪ್ಪನನ್ನು (ದರ್ಶನ್) ಏನು ಮಾಡಲು ಸಾಧ್ಯವಿಲ್ಲ. ದರ್ಶನ್ ಖಂಡಿತವಾಗಿ ಶೀಘ್ರದಲ್ಲೇ ಹೊರಗೆ ಬರಲಿದ್ದಾರೆ’ ಎಂದು ಧನ್ವೀರ್ ಹೇಳಿದ್ದರು. ಇದಕ್ಕೆ ವಿಜಯಲಕ್ಷ್ಮಿ ಕೌಂಟರ್ ಕೊಟ್ಟಿದ್ದರು. ‘ದರ್ಶನ್ ಅವರ ಹೆಸರನ್ನು ಅಥವಾ ಅವರ ವರ್ಚಸ್ಸನ್ನು ಕೆಲವರು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂಬರ್ಥದಲ್ಲಿ ವಿಜಯಲಕ್ಷ್ಮಿ ಅವರು ಪೋಸ್ಟ್ ಮಾಡಿದ್ದರು.

ಇದರ ಬೆನ್ನಲ್ಲೇ ನಟ ಧನ್ವೀರ್ ಕೂಡ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪರೋಕ್ಷವಾಗಿ ತಕ್ಕ ತಿರುಗೇಟು ನೀಡುವಂತಹ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ‘ಕೆಲವರಿರುತ್ತಾರೆ ಶಕುನಿ ಅಂತವರು ಕೊನೆವರೆಗೂ ಆಟವಾಡಿ ತಾವೇ ಸಂತ್ರಸ್ತರಂತೆ ನಟಿಸುತ್ತಾರೆ. ಸತ್ಯಕ್ಕೆ ಯಾವತ್ತೂ ಸಾಕ್ಷಿ ಬೇಕಾಗಿಲ್ಲ. ಕಾಲವೇ ಉತ್ತರ ಕೊಡುತ್ತದೆ’ ಎಂದು ಧನ್ವೀರ್ ಪೋಸ್ಟ್ ಮಾಡಿದ್ದರು.

ಸಾಮಾಜಿಕ ಜಾಲತಾಣದ ಈ ಮಾತಿನ ಯುದ್ಧವು ತೀವ್ರಗೊಂಡು ಕೊನೆಗೆ ವೈಯಕ್ತಿಕ ಸಂಘರ್ಷಕ್ಕೆ ತಿರುಗಿದೆ. ವಿಜಯಲಕ್ಷ್ಮಿ ಅವರ ಆಪ್ತ ಸಹಾಯಕ (ಮ್ಯಾನೇಜರ್) ನಾಗರಾಜ್ ಅವರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ತೆರಳಿ ನಟ ಧನ್ವೀರ್ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಫೋನ್ ಮೂಲಕ ಸಂಪರ್ಕಿಸಿದಾಗ ಧನ್ವೀರ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ. ಆಡಿಯೋ ಸಾಕ್ಷ್ಯವೊಂದನ್ನು ಸಹ ಪೊಲೀಸರಿಗೆ ಒದಗಿಸಲಾಗಿದೆ ಎಂದು ವರದಿಯಾಗಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ವಿವಾದ ಮತ್ತಷ್ಟು ತಿರುವು ಪಡೆದುಕೊಂಡಿದ್ದು, ಧನ್ವೀರ್ ಅವರ ತಂದೆ ತಿಮ್ಮೇಗೌಡ ಕೂಡ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ವಿಜಯಲಕ್ಷ್ಮಿ, ಮ್ಯಾನೇಜರ್ ನಾಗರಾಜ್ ಹಾಗೂ ಅವರ ತಂಡದವರು ತಮ್ಮ ಮನೆಗೆ ಅಕ್ರಮವಾಗಿ ನುಗ್ಗಿ ಗಲಾಟೆ ನಡೆಸಿ ಕುಟುಂಬದವರಿಗೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಧನ್ವೀರ್ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಬೆದರಿಕೆ ಹಾಕಲಾಗಿದೆ ಎಂಬುದು ಅವರ ಕುಟುಂಬದವರ ವಾದವಾಗಿದೆ.

ಇದನ್ನೂ ಓದಿ: ಧನ್ವೀರ್ ವಿರುದ್ಧ ಆರ್.ಆರ್. ನಗರ ಠಾಣೆಯಲ್ಲಿ ದೂರು: ದರ್ಶನ್ ಮ್ಯಾನೇಜರ್ ನಾಗರಾಜ್‌ ಗಂಭೀರ ಆರೋಪ

ಸದ್ಯ ಎರಡೂ ಕಡೆಯಿಂದ ಪೊಲೀಸ್ ಠಾಣೆಗೆ ದೂರುಗಳು ಸಲ್ಲಿಕೆಯಾಗಿದ್ದು, ಕಾನೂನು ಹೋರಾಟದ ಹಾದಿ ಹಿಡಿದಿದೆ. ಪೊಲೀಸರು ಪ್ರಾಥಮಿಕ ಹಂತದ ದೂರುಗಳನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ದರ್ಶನ್ ಅನುಪಸ್ಥಿತಿಯಲ್ಲಿ ಅವರ ಕುಟುಂಬದೊಂದಿಗೆ ಗುರುತಿಸಿಕೊಂಡಿದ್ದ ಪ್ರಮುಖರ ನಡುವಿನ ಈ ಹಗ್ಗಜಗ್ಗಾಟವು ಚಿತ್ರರಂಗದಲ್ಲಿ ಮತ್ತು ಅಭಿಮಾನಿಗಳಲ್ಲಿ ತೀವ್ರ ಕಳಕಳಿಗೆ ಕಾರಣವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More