ಭಾರತೀಯರು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ ಎಂದರೆ ಅದು ‘ಕೆಜಿಎಫ್’ (KGF) ಹಾಗೂ ‘ಕೆಜಿಎಫ್ 2’ ಚಿತ್ರ. ಅದಕ್ಕೆ ಮುಖ್ಯ ಕಾರಣ ನಿರ್ದೇಶಕ ಪ್ರಶಾಂತ್ ನೀಲ್. ‘ಕೆಜಿಎಫ್ ‘ ಸರಣಿಯ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಪ್ರಶಾಂತ್ ನೀಲ್ (Prashanth Neel) ಮನೆಮಾತಾದರು. ಹಲವು ನಟ, ನಟಿಯರು ಅವರೊಂದಿಗೆ ಕೆಲಸ ಮಾಡಬೇಕು ಎಂದು ಕಾಯುತ್ತಿದ್ದಾರೆ. ಸದ್ಯ ಪ್ರಶಾಂತ್ ನೀಲ್ ನಟ ಪ್ರಭಾಸ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಗ್ಯಾಂಗ್ಸ್ಟಾರ್ ಹಿನ್ನೆಲೆಯುಳ್ಳ ‘ಸಲಾರ್’ ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ನಟಿ ಶೃತಿ ಹಾಸನ್ ಕೂಡ ನಟಿಸುತ್ತಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ‘ಸಲಾರ್’ ಚಿತ್ರದ ಬಳಿಕ ಜೂನಿಯರ್ ಎನ್ಟಿಆರ್ಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಚಿತ್ರ ಮಾಡಲಿದ್ದಾರೆ. ಸದ್ಯ ಆ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ. 2023ರ ಮಧ್ಯದಲ್ಲಿ ಈ ಚಿತ್ರದ ಕೆಲಸ ಆರಂಭಗೊಳ್ಳುವ ಸಾಧ್ಯತೆ ಇದೆ. ಇದಾದ ನಂತರ ನಟ ರಾಮ್ ಚರಣ್ ಅವರೊಂದಿಗೂ ಒಂದು ಸಿನಿಮಾ ಮಾಡುವ ಯೋಜನೆ ಕೂಡ ಅವರಿಗೆ ಇದೆ. ಹೀಗೆ ಪ್ರಶಾಂತ್ ನೀಲ್ ತೆಲುಗಿನ ದೊಡ್ಡ ದೊಡ್ಡ ನಟರೊಂದಿಗೆ ಸಿನಿಮಾ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಇತ್ತ ಕೆಲ ಕರ್ನಾಟಕದ ಫ್ಯಾನ್ಸ್ ಮಾತ್ರ ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಕನ್ನಡದಲ್ಲಿ ಸಿನಿಮಾ ಮಾಡಿ ಗೆದ್ದು, ಸ್ಟಾರ್ ನಿರ್ದೇಶಕರಾದ ಮೇಲೆ ತೆಲುಗಿಗೆ ಹಾರಿದರು ಎಂದೆಲ್ಲಾ ಟ್ರೋಲ್ ಮಾಡಿದ್ದರು.
ಸದ್ಯ ಅದಕ್ಕೆಲ್ಲ ಪ್ರಶಾಂತ್ ನೀಲ್ ಉತ್ತರಿಸಿದ್ದು, ಅವರು ಏಕೆ ತೆಲುಗಿಗೆ ಹೋದೆ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. ಆಗ ಅವರಿಗೆ ಇದೇ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರ ನೀಡಿದ ಪ್ರಶಾಂತ್ ನೀಲ್, ‘ನಾನು ಯಾವ ತೆಲುಗು ನಟರನ್ನು ಸಂಪರ್ಕ ಮಾಡಿಲ್ಲ. ಕೆಲ ನಿರ್ಮಾಪಕರು ನನಗೆ ಕಾಲ್ ಮಾಡಿ ತೆಲಗು ನಟರೊಂದಿಗೆ ಪ್ಯಾನ್ ಇಂಡಿಯಾ ಚಿತ್ರ ಮಾಡೋಣ ಬನ್ನಿ ಎಂದು ಅವಕಾಶ ನೀಡಿದ್ದಾರೆ. ಈ ಚಿತ್ರಗಳು ಮುಗಿದ ನಂತರ ನಾನು ಮತ್ತೆ ಕನ್ನಡದಲ್ಲಿ ಚಿತ್ರಗಳನ್ನು ಮಾಡುತ್ತೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:29 pm, Thu, 17 November 22