ರಿಷಬ್ ಶೆಟ್ಟಿ-ರಾಜ್ ಬಿ ಶೆಟ್ಟಿ ನಡುವೆ ಮೂಡಿದೆಯಾ ಮನಸ್ತಾಪ?

Rishab Shetty-Raj B Shetty: ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಅವರುಗಳನ್ನು ಒಟ್ಟಾಗಿ ಶೆಟ್ಟಿ ಗ್ಯಾಂಗ್ ಎಂದು ಕರೆಯಲಾಗುತ್ತದೆ. ಆದರೆ ಈ ಗ್ಯಾಂಗ್​​ ಒಳಗೆ ಎಲ್ಲವೂ ಸರಿಯಿಲ್ಲ ಎನ್ನಲಾಗುತ್ತಿದೆ. ಇದೀಗ ರಿಷಬ್ ಶೆಟ್ಟಿ, ‘45’ ಸಿನಿಮಾಕ್ಕೆ ಶುಭ ಕೋರಿ ವಿಡಿಯೋ ಮಾಡಿದ್ದು, ಉದ್ದೇಶಪೂರ್ವಕವಾಗಿ ರಾಜ್ ಬಿ ಶೆಟ್ಟಿ ಹೆಸರನ್ನು ಹೇಳಿಲ್ಲ.

ರಿಷಬ್ ಶೆಟ್ಟಿ-ರಾಜ್ ಬಿ ಶೆಟ್ಟಿ ನಡುವೆ ಮೂಡಿದೆಯಾ ಮನಸ್ತಾಪ?
Raj Rishab

Updated on: Dec 14, 2025 | 7:21 PM

ಕನ್ನಡ ಚಿತ್ರರಂಗದಲ್ಲಿ ‘ಶೆಟ್ಟಿ ಗ್ಯಾಂಗ್’ (Shetty Gang) ಹೊಸ ಅಲೆಯನ್ನೇ ಎಬ್ಬಿಸಿದೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಅವರುಗಳು ತಮ್ಮ ಸಿನಿಮಾಗಳ ಮೂಲಕ ಹಿಟ್ ಮೇಲೆ ಹಿಟ್ ನೀಡುತ್ತಿದ್ದಾರೆ. ಹಿಟ್ ಆಗುವುದು ಮಾತ್ರವೇ ಅಲ್ಲದೆ ಪರ ರಾಜ್ಯಗಳಲ್ಲಿಯೂ ಕನ್ನಡ ಸಿನಿಮಾಗಳ ಬಗ್ಗೆ ಗೌರವದಿಂದ ಮಾತನಾಡುವಂಥಹಾ ಕೆಲವು ಬಹಳ ಒಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ. ರಕ್ಷಿತ್, ರಿಷಬ್, ರಾಜ್ ಮತ್ತು ಪ್ರಮೋದ್ ಶೆಟ್ಟಿ ಇಷ್ಟೂ ಮಂದಿ ಒಳ್ಳೆಯ ಗೆಳೆಯರಾಗಿದ್ದು, ಇವರನ್ನು ಒಟ್ಟಿಗೆ ‘ಶೆಟ್ಟಿ ಗ್ಯಾಂಗ್’ ಎಂದೇ ಸಂಭೋಧಿಸುವುದುಂಟು. ಆದರೆ ಈ ಶೆಟ್ಟಿ ಗ್ಯಾಂಗ್​​ನಲ್ಲಿ ಈಗ ಬಿರುಕು ಉಂಟಾಗಿದೆಯೇ ಎಂಬ ಅನುಮಾನ ಮೂಡಿದೆ.

ರಿಷಬ್ ಶೆಟ್ಟಿಯವರ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಗ್ಗೆ ರಾಜ್ ಬಿ ಶೆಟ್ಟಿಯಾಗಲಿ, ರಕ್ಷಿತ್ ಆಗಲಿ ಪೋಸ್ಟ್ ಹಂಚಿಕೊಂಡಿಲ್ಲ. ಕಳೆದ ಬಾರಿ ‘ಕಾಂತಾರ’ ಸಿನಿಮಾಕ್ಕೆ ಈ ಇಬ್ಬರೂ ಸಹ ರಿಷಬ್ ಶೆಟ್ಟಿಗೆ ಸಹಾಯ ಮಾಡಿದ್ದರು. ಆದರೆ ಈ ಬಾರಿ ಇಬ್ಬರೂ ಸಹ ‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣದಿಂದ ದೂರವೇ ಉಳಿದಿದ್ದರು. ಆಗಲೇ ಈ ಮೂವರ ಮಧ್ಯೆ ಬಿರುಕು ಮೂಡಿರುವ ಅನುಮಾನ ಉಂಟಾಗಿತ್ತು.

ಇದೀಗ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ‘45’ ಸಿನಿಮಾ ಬಿಡುಗಡೆ ಆಗುತ್ತಿದೆ. ರಿಷಬ್ ಶೆಟ್ಟಿ ಅವರು ಸಿನಿಮಾಕ್ಕೆ ಶುಭ ಹಾರೈಸಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಆದರೆ ಈ ವಿಡಿಯೋನಲ್ಲಿ ಅವರು ರಾಜ್ ಬಿ ಶೆಟ್ಟಿ ಅವರ ಹೆಸರು ಹೇಳಿಲ್ಲ. ರಾಜ್ ಹಾಗೂ ರಿಷಬ್ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಸುದ್ದಿಗೆ ರಿಷಬ್​​ ಅವರ ಈ ನಡೆ ಇನ್ನಷ್ಟು ಪುಷ್ಠಿ ನೀಡಿದೆ.

ಇದನ್ನೂ ಓದಿ:ದೈವಕ್ಕೆ ಅಪಮಾನ, ಆಕ್ಷೇಪ ವ್ಯಕ್ತಪಡಿಸಿದ ರಿಷಬ್ ಶೆಟ್ಟಿ

ವಿಡಿಯೋನಲ್ಲಿ ಮಾತನಾಡಿರುವ ರಿಷಬ್ ಶೆಟ್ಟಿ, ‘ನನ್ನ ಮೊದಲ ನಿರ್ದೇಶನದ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿರುವ ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನದ ಸಿನಿಮಾ ‘45’. ಮೊದಲ ಸಿನಿಮಾ ಮಾಡುವಾಗ ಸಾಕಷ್ಟು ವಿಷಯಗಳ ಬಗ್ಗೆ ಗೊಂದಲಗಳು, ಭಯ ಇರುತ್ತದೆ. ಆದರೆ ಅರ್ಜುನ್ ಜನ್ಯ ಅವರು ತಮ್ಮ ಮೊದಲ ಸಿನಿಮಾನಲ್ಲಿಯೇ ಸಾಕಷ್ಟು ಆತ್ಮವಿಶ್ವಾಸದಿಂದ ವಿಷಯಗಳನ್ನು ಆಯ್ಕೆ ಮಾಡಿರುವುದು, ಇಷ್ಟು ದೊಡ್ಡ ಪ್ರಮಾಣದಲ್ಲಿ, ದೊಡ್ಡ ಬಜೆಟ್​​ನಲ್ಲಿ ಅದ್ಭುತವಾಗಿ ಸಿನಿಮಾವನ್ನು ತಂದಿದ್ದಾರೆ. ಸಿನಿಮಾದ ಟ್ರೈಲರ್ ನೋಡಿ ಖುಷಿ ಆಯ್ತು’ ಎಂದಿದ್ದಾರೆ.

‘ನನ್ನ ಇಷ್ಟದ ನಟರುಗಳಾದ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅವರು ಈ ಸಿನಿಮಾನಲ್ಲಿ ನಟಿಸಿದ್ದಾರೆ. ಇಬ್ಬರ ಪಾತ್ರವೂ ಸಹ ಅದ್ಭುತವಾಗಿ ಮೂಡಿ ಬಂದಿದೆ. ಇಬ್ಬರನ್ನು ತೆರೆಯ ಮೇಲೆ ನೋಡುವುದು ಬಹಳ ಖುಷಿಯ ವಿಷಯ. ಸಿನಿಮಾ ಸಹ ಅಷ್ಟೇ ಕುತೂಹಲಕಾರಿಯಾಗಿ ಮೂಡಿ ಬಂದಿದೆ ಎಂಬುದು ನನ್ನ ನಂಬಿಕೆ. ಇಡೀ ಸಿನಿಮಾಕ್ಕೆ ಒಳ್ಳೆಯದಾಗಲಿ’ ಎಂದಿದ್ದಾರೆ ನಟ ರಿಷಬ್ ಶೆಟ್ಟಿ. ‘45’ ಸಿನಿಮಾನಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದರೂ ಸಹ ರಿಷಬ್ ಅವರು ರಾಜ್ ಬಿ ಶೆಟ್ಟಿಯ ಹೆಸರು ಹೇಳಿಲ್ಲ. ಅಲ್ಲದೆ, ‘45’ ಸಿನಿಮಾ ಶಿವಣ್ಣ ಹಾಗೂ ಉಪೇಂದ್ರ ನಟನೆಯ ಸಿನಿಮಾ ಎಂದು ವಿಡಿಯೋನಲ್ಲಿ ಹೇಳಿದ್ದಾರೆ. ಆ ಮೂಲಕ ಉದ್ದೇಶಪೂರ್ವಕವಾಗಿ ರಾಜ್ ಬಿ ಶೆಟ್ಟಿ ಹೆಸರನ್ನು ರಿಷಬ್ ಉಲ್ಲೇಖಿಸಿಲ್ಲ ಎಂದು ಸ್ಪಷ್ಟವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Sun, 14 December 25