ಮಾರ್ಕ್ ಟ್ರೇಲರ್ ವೀವ್ಸ್ ಪೇಯ್ಡ್ ಎಂದವರಿಗೆ ಮುಟ್ಟಿನೋಡಿಕೊಳ್ಳೋ ಉತ್ತರ ಕೊಟ್ಟ ಸುದೀಪ್
ಕಿಚ್ಚ ಸುದೀಪ್ ಅವರ 'ಮಾರ್ಕ್' ಸಿನಿಮಾ ಟ್ರೇಲರ್ 15 ಮಿಲಿಯನ್ ವೀಕ್ಷಣೆ ಕಂಡಿದೆ. ಆದರೆ, 'ಪೇಯ್ಡ್ ವೀವ್ಸ್' ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸುದೀಪ್ ಸ್ಪಷ್ಟನೆ ನೀಡಿದ್ದು, ಇದು ಜನರ ಬೆಂಬಲದಿಂದಲೇ ಸಾಧ್ಯ ಎಂದಿದ್ದಾರೆ. ದಾಖಲೆಗಾಗಿ ಹಣ ಖರ್ಚು ಮಾಡುವ ಅಗತ್ಯವಿಲ್ಲ, ಜನರಿಗೆ ಇಷ್ಟವಾದರೆ ನೋಡುತ್ತಾರೆ, ಇಲ್ಲದಿದ್ದರೆ ಬಿಡುತ್ತಾರೆ ಎಂಬುದು ಅವರ ಅಭಿಪ್ರಾಯ.

ಕಿಚ್ಚ ಸುದೀಪ್ (Sudeep) ಅವರ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗಲಿದೆ. ಕ್ರಿಸ್ಮಸ್ ಪ್ರಯುಕ್ತ ಸಿನಿಮಾ ತೆರೆಗೆ ಬರುತ್ತಿದೆ. ಇತ್ತೀಚೆಗೆ ರಿಲೀಸ್ ಆದ ಸಿನಿಮಾದ ಟ್ರೇಲರ್ 15 ಮಿಲಿಯನ್ ವೀಕ್ಷಣೆ ಕಂಡಿದೆ. ಕೆಲವೇ ಗಂಟೆಗಳಲ್ಲಿ ಈ ಚಿತ್ರದ ಟ್ರೇಲರ್ ‘ಡೆವಿಲ್’ ಟ್ರೇಲರ್ ವೀಕ್ಷಣೆಯನ್ನು ಹಿಂದಿಕ್ಕಿದೆ. ಈ ಬಗ್ಗೆ ಚರ್ಚೆಗಳ ನಡೆಯುತ್ತಿವೆ. ಈ ಚರ್ಚೆಗಳಿಗೆ ಸುದೀಪ್ ಅವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
ಸುದೀಪ್ ಅವರ ‘ಮಾರ್ಕ್’ ಸಿನಿಮಾದ ಟ್ರೇಲರ್ಗೆ ಅಭೂತಪೂರ್ವ ಪ್ರಶಂಸೆ ಸಿಕ್ಕಿದೆ. ವೀವ್ಸ್ನಲ್ಲೂ ಈ ಟ್ರೇಲರ್ ದಾಖಲೆ ಬರೆದಿದೆ. ಕೆಲವೇ ಗಂಟೆಗಳಲ್ಲಿ ಈ ಟ್ರೇಲರ್ ಕೋಟಿ ವೀಕ್ಷಣೆ ಕಂಡಿತ್ತು. ಇದಕ್ಕೆ ಕೆಲವರು ಕೊಂಕು ತೆಗೆದಿದ್ದರು. ‘ಹಣ ಕೊಟ್ಟು ಮಾರ್ಕ್ ಟ್ರೇಲರ್ ವೀಕ್ಷಣೆ ಹೆಚ್ಚಿಸಲಾಗಿದೆ’ ಎಂಬ ಮಾತು ಕೇಳಿ ಬಂದವು. ಇದಕ್ಕೆ ಸುದೀಪ್ ಅವರು ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
ಟ್ರೇಲರ್ ಪೇಯ್ಡ್ ವೀಕ್ಷಣೆ ಎಂಬ ಅಭಿಪ್ರಾಯ ಇದ್ದರೆ ‘ಹಾಗೆ ಅನಿಸಲಿ ಬಿಡಿ’ ಎಂಬುದು ಸುದೀಪ್ ಮಾತು. ದಾಖಲೆ ಮಾಡೋದೇ ಉದ್ದೇಶ ಆಗಿದ್ದರೆ ಸುದೀಪ್ ಇನ್ನೂ ಹೆಚ್ಚು ದುಡ್ಡು ಕೊಟ್ಟು 30 ಮಿಲಿಯನ್ ಆಗೋ ರೀತಿ ಮಾಡುತ್ತಿದ್ದರಂತೆ. ‘15 ಮಿಲಿಯನ್ ಬೇಗ ಏಕೆ ಆಯಿತು ಎಂದರೆ ಅಷ್ಟು ಜನರು ಇದ್ದಾರೆ. ಅದಕ್ಕಾಗಿ ಅಷ್ಟು ವೀವ್ಸ್ ಆಗಿದೆ. ಉಣ ಬಡಿಸೋದು ಮಾತ್ರ ನಮ್ಮ ಕೆಲಸ. ಇಷ್ಟ ಇದ್ರೆ ಊಟ ಮಾಡಲಿ, ಇಲ್ಲದಿದ್ದರೆ ಎದ್ದು ಹೋಗಲಿ’ ಎಂಬುದು ಕಿಚ್ಚನ್ ಅಭಿಪ್ರಾಯ.
ಈ ರೀತಿ ಪ್ರಶ್ನೆ ಮಾಡುವವರು ಈ ಮೊದಲು ಆ ರೀತಿಯ ಕೆಲಸವನ್ನು ಮಾಡಿರಬೇಕು ಎಂದು ಸುದೀಪ್ ತಿರುಗೇಟು ಕೊಟ್ಟಿದ್ದಾರೆ. ಅವರು ಆ ರೀತಿ ಮಾಡಿದ್ದರಿಂದಲೇ ಎಲ್ಲರೂ ಕಳ್ಳರ ರೀತಿಯೇ ಕಾಣಿಸುತ್ತಿದ್ದಾರೆ ಎಂದು ಕಿಚ್ಚ ಉತ್ತರಿಸಿದ್ದಾರೆ. ಸಿನಿಮಾ ಯಶಸ್ಸು ಕಾಣಬೇಕು ಎಂಬುದಷ್ಟೇ ಸುದೀಪ್ ಆಶಯ.
ಇದನ್ನೂ ಓದಿ: ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಕಳೆದ ವರ್ಷ ಡಿಸೆಂಬರ್ನಲ್ಲಿ ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಯಿತು. ಈಗ ‘ಮಾರ್ಕ್’ ಸಿನಿಮಾ ತೆರೆಗೆ ಬರುತ್ತಿದೆ. ಸುದೀಪ್ ಅವರು ಎಲ್ಲ ಮಾಧ್ಯಮಗಳಿಗೂ ಸಂದರ್ಶನ ನೀಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




