
ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಗೆ ಬಂದ ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್’ ಸಿನಿಮಾ (James Movie) ಬಾಕ್ಸ್ ಆಫೀಸ್ನಲ್ಲಿ ಅಕ್ಷರಶಃ ಅಬ್ಬರಿಸಿದೆ. ಈ ಚಿತ್ರ ನಾಲ್ಕೇ ದಿನಕ್ಕೆ ವಿಶ್ವ ಮಟ್ಟದ ಕಲೆಕ್ಷನ್ನಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಮೂಲಕ ಅಪ್ಪು ಶತಕದ ಸರದಾರರಾಗಿದ್ದಾರೆ. ಪುನೀತ್ ಹೀರೋ ಆಗಿ ಕಾಣಿಸಿಕೊಂಡ ಕೊನೆಯ ಸಿನಿಮಾ ಇಷ್ಟು ದೊಡ್ಡ ಕಲೆಕ್ಷನ್ (James Box Office Collection) ಮಾಡಿರುವುದು ಸಹಜವಾಗಿಯೇ ಅವರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಈ ಚಿತ್ರ ಮತ್ತಷ್ಟು ಹಣ ಬಾಚುವ ಸಾಧ್ಯತೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಪರಭಾಷೆಯವರೂ ಕೂಡ ಚಿತ್ರದ ಗಳಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಜನ್ಮದಿನದ ಪ್ರಯುಕ್ತ ‘ಜೇಮ್ಸ್’ ಸಿನಿಮಾ ಗುರುವಾರ ಅಂದರೆ ಮಾರ್ಚ್ 17ರಂದು ತೆರೆಗೆ ಬಂತು. ಅಂದು ಮುಂಜಾನೆ ನಾಲ್ಕು ಗಂಟೆಯಿಂದಲೇ ಸಿನಿಮಾ ಶೋ ಆರಂಭಗೊಂಡಿತ್ತು. ಬೆಂಗಳೂರಿನಲ್ಲಿ ನೂರಾರು ಫ್ಯಾನ್ ಶೋಗಳು ನಡೆದವು. ಹೀಗಾಗಿ, ಫಸ್ಟ್ಡೇ ಸಿನಿಮಾ 30 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆ ಬಳಿಕವೂ ಬಾಕ್ಸ್ ಆಫೀಸ್ನಲ್ಲಿ ಪುನೀತ್ ಸಿನಿಮಾದ ಅಬ್ಬರ ಮುಂದುವರಿದಿದೆ. ಭಾನುವಾರದ ಕಲೆಕ್ಷನ್ ಸೇರಿದರೆ ಸಿನಿಮಾ 100 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ‘ಜೇಮ್ಸ್’ ಕನ್ನಡದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಯಾವ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವ ಬಗ್ಗೆ ಚಿತ್ರತಂಡ ಮಾಹಿತಿ ನೀಡಿಲ್ಲ.
ಸ್ಯಾಂಡಲ್ವುಡ್ನಲ್ಲಿ ಯಾವ ಚಿತ್ರವೂ 100 ಕೋಟಿಯನ್ನು ನಾಲ್ಕು ದಿನಕ್ಕೆ ಮಾಡಿರಲಿಲ್ಲ. ಈಗ ‘ಜೇಮ್ಸ್’ ಸಿನಿಮಾ ಖಾತೆಗೆ ಈ ಹೊಸ ದಾಖಲೆ ಸೇರಿದಂತೆ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಒಂದು ಹರಿದಾಡುತ್ತಿದ್ದು, ಇದು ತಂಡದ ಕಡೆಯಿಂದಲೇ ರಿಲೀಸ್ ಆಗಿದೆ ಎನ್ನಲಾಗಿದೆ.
‘ಜೇಮ್ಸ್’ ಸಿನಿಮಾ ಮೊದಲ ನಾಲ್ಕು ದಿನ ಅಬ್ಬರಿಸಿ ಕಲೆಕ್ಷನ್ ಮಾಡಿದೆ. ಈ ವಾರವೂ ಚಿತ್ರವನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು, ಸಿನಿಪ್ರಿಯರು ಚಿತ್ರಮಂದಿರದತ್ತ ಹೆಜ್ಜೆ ಹಾಕಬಹುದು. ಹೀಗಾಗಿ, ಸಿನಿಮಾದ ಕಲೆಕ್ಷನ್ ಈ ವಾರ ಮತ್ತಷ್ಟು ಹೆಚ್ಚಬಹುದು. ‘ಜೇಮ್ಸ್’ ಚಿತ್ರಕ್ಕೆ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರಿಯಾ ಆನಂದ್ ಚಿತ್ರದ ನಾಯಕಿ. ಸೈನಿಕನ ಪಾತ್ರದಲ್ಲಿ ಪುನೀತ್ ಮಿಂಚಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗ ಇದೆ.
ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ಗಿಂತಲೂ ಹೆಚ್ಚು IMDb ರೇಟಿಂಗ್ ಪಡೆದ ‘ಜೇಮ್ಸ್’; 10ಕ್ಕೆ 9.9 ನೀಡಿದ ಪ್ರೇಕ್ಷಕರು
‘ಜೇಮ್ಸ್’ ಸಿನಿಮಾ ನೋಡಲು ಬಂದ ಅಭಿಮಾನಿಗಳಿಗೆ ಭರ್ಜರಿ ಬಾಡೂಟ; ಇಲ್ಲಿದೆ ವಿಡಿಯೋ