ಕೊವಿಡ್ ಸಂಕಷ್ಟದ ಸಂದರ್ಭದಿಂದ ಸಾಕಷ್ಟು ಜನರಿಗೆ ತೊಂದರೆ ಎದುರಾಗಿದೆ. ಇದಕ್ಕೆ ಕಲಾವಿದರು ಕೂಡ ಹೊರತಾಗಿಲ್ಲ. ಸಾಕಷ್ಟು ಕಲಾವಿದರು ಶೂಟಿಂಗ್ ಇಲ್ಲದೆ, ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ಸಹಾಯಕ್ಕೆ ಗಾಯಕ ವಿಜಯ್ ಪ್ರಕಾಶ್ ನೇತೃತ್ವದ ತಂಡ ಮುಂದೆ ಬಂದಿದೆ. ‘ಕಲಾನಿಧಿ’ ಕಾರ್ಯಕ್ರಮದ ಮೂಲಕ ಅವರು ಕಲಾವಿದರ ಸಹಾಯಕ್ಕೆ ನಿಂತಿದ್ದಾರೆ.
ಗಾಯಕ ವಿಜಯ್‌ಪ್ರಕಾಶ್ ಈ ಕಾರ್ಯಕ್ರಮದ ನೇತೃತ್ವ ಹೊತ್ತುಕೊಂಡಿದ್ದಾರೆ. ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹಾಗೂ ಸಂಸದ ತೇಜಸ್ವಿ ಸೂರ್ಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆದಿದೆ. ಜೂನ್ 25-27 ಅವಧಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ವಿಜಯ್ ಪ್ರಕಾಶ್, ‘ಈ ಕಲಾನಿಧಿಯ ನಿಧಿ ಕಲಾವಿದರಿಗೆ ಸಲ್ಲಲಿದೆ. ಸಮಾಜದಲ್ಲಿ ಹಲವರು ಕಷ್ಟ ಅನುಭವಿಸುತ್ತಿದ್ದಾರೆ. ಇವರ ಜೊತೆ ಕಲಾವಿದರು ಕಷ್ಟದಲ್ಲಿದ್ದಾರೆ. ಇದಕ್ಕೆ ಪರಿಹಾರವಾಗಿ ಸಿಕ್ಕಿದ್ದೇ ಕಲಾನಿಧಿ ಕಾರ್ಯಕ್ರಮ. ಕಲಾವಿದರು ಪ್ರತಿನಿತ್ಯ ಕನಸಿನಲ್ಲೇ ಇರುತ್ತಾರೆ. ಈ ಕಾರ್ಯಕ್ರಮಕ್ಕಾಗಿ ಕಲಾವಿದರು ಸಂಭಾವನೆ ಪಡೆಯದೆ ಹಾಡಿದ್ದಾರೆ. ಇದರಿಂದ ಸಂಗ್ರಹವಾಗುವ ನಿಧಿ ಕಲಾವಿದರಿಗೆ ಹಂಚುತ್ತೇವೆ. ಜನರು 5 ರೂಪಾಯಿ ಕೊಟ್ಟರು ಅದು ಮಹಾ ದೇಣಿಗೆಯಾಗಲಿದೆ’ ಎಂದಿದ್ದಾರೆ.
ವಿಜಯ್ ಪ್ರಕಾಶ್, ಸೋನು ನಿಗಮ್, ರಘು ದೀಕ್ಷಿತ್, ಗುರುಕಿರಣ್, ವಿದ್ಯಾಭೂಷಣ್, ಅರ್ಜುನ್ ಜನ್ಯ, ಸಂಜಿತ್ ಹೆಗ್ಡೆ ಸೇರಿ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಕೊವಿಡ್ ಸಂಕಷ್ಟದ ಸಂದರ್ಭದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ನಟ ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್ ಹತ್ತು ಲಕ್ಷ ರೂ. ಧನಸಹಾಯ ಮಾಡಿದ್ದರು. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ವಿಜಯ್ ಕಿರಗಂದೂರು ಅವರು ಕನ್ನಡ ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರ ಒಕ್ಕೂಟದ ಸುಮಾರು 3200ಕ್ಕೂ ಅಧಿಕ ಮಂದಿಗೆ ಧನಸಹಾಯ ಮಾಡಿದ್ದರು. ಉಪೇಂದ್ರ, ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಸೇರಿದಂತೆ ಹಲವರು ಜನಪರ ಕಾರ್ಯ ಮಾಡುತ್ತಿದ್ದಾರೆ. ನಟ ಯಶ್ ಕೂಡ ಚಿತ್ರೋದ್ಯಮದ ಕಾರ್ಮಿಕರು, ತಂತ್ರಜ್ಞರಿಗೆ ತಲಾ 5 ಸಾವಿರ ರೂಪಾಯಿ ನೀಡುವ ಮೂಲಕ ಸಹಾಯ ಮಾಡಿದ್ದರು. ಈಗ ವಿಜಯ್ ಪ್ರಕಾಶ್ ಭಿನ್ನ ರೂಪದಲ್ಲಿ ಸಹಾಯ ಮಾಡೋಕೆ ಮುಂದಾಗಿದ್ದಾರೆ.
ಇದನ್ನೂ ಓದಿ:
ಕನ್ನಡ ಚಿತ್ರರಂಗದ ಜೋಡೆತ್ತು ಡಿ ಬಾಸ್; ಯಶ್ ಬಾಸ್ ಸಹಾಯಕ್ಕೆ ಅಭಿಮಾನಿಗಳ ಸಲ್ಯೂಟ್