2023ನೇ ವರ್ಷ ಪೂರ್ಣಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಚಿತ್ರರಂಗದಲ್ಲಿ ಸಾಕಷ್ಟು ಬೆಳವಣಿಗೆ ನಡೆದಿದೆ. ಇದರ ಜೊತೆಗೆ ಅನೇಕ ಸೆಲೆಬ್ರಿಟಿಗಳು ಹೊಸ ಬದುಕು ಆರಂಭಿಸಿದ್ದಾರೆ. ಕನ್ನಡ ಚಿತ್ರರಂಗದ (Kannada Film Industry) ಅನೇಕರು ಮದುವೆ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಕನ್ನಡ ಚಿತ್ರರಂಗದ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಆಗಸ್ಟ್ ತಿಂಗಳಲ್ಲಿ ಮದುವೆ ಆದರು. ಇಬ್ಬರೂ ಬಹುಕಾಲದಿಂದ ಪ್ರೀತಿಸುತ್ತಿದ್ದರು. ಚಿತ್ರರಂಗದ ಅನೇಕ ಗಣ್ಯರು ಕೊಡಗಿಗೆ ತೆರಳಿ ಈ ಸೆಲೆಬ್ರಿಟಿ ವಿವಾಹದಲ್ಲಿ ಭಾಗಿ ಆಗಿದ್ದರು. ಅದ್ದೂರಿಯಾಗಿ ಮದುವೆ ಆಗದೆ ಸಿಂಪಲ್ ಆಗಿ ಈ ಜೋಡಿ ಹಸೆಮಣೆ ಏರಿತ್ತು. 2012ರಿಂದಲೂ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರು ಪ್ರೀತಿಸುತ್ತಿದ್ದರು.
ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಈ ವರ್ಷ ಮದುವೆ ಆಗಿದ್ದಾರೆ. ಜನವರಿ 6ರಂದು ಈ ದಂಪತಿ ಮದುವೆ ಆಗಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಜೋಡಿ ಸಪ್ತಪದಿ ತುಳಿದಿತ್ತು. ಇಲ್ಲಿ ವಿವಾಹ ನೆರವೇರಬೇಕು ಎಂಬುದು ವಸಿಷ್ಠ ಸಿಂಹ ಅವರ ಆಸೆ ಆಗಿತ್ತು. ಅದರಂತೆ ಈ ವಿವಾಹ ನಡೆದಿತ್ತು.
‘ಮುಂಗಾರು ಮಳೆ’ ಹುಡುಗಿ ಪೂಜಾ ಗಾಂಧಿ ಹಾಗೂ ಉದ್ಯಮಿ ವಿಜಯ್ ಅವರು ಇತ್ತೀಚೆಗೆ ಮದುವೆ ಆದರು. ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಇವರು ಮದುವೆ ಆದರು. ಮದುವೆ ಆದ ಬಳಿಕ ಇವರು ಕವಿಶೈಲಕ್ಕೆ ಭೇಟಿ ನೀಡಿದ್ದರು. ಪೂಜಾ ಗಾಂಧಿ ಕನ್ನಡ ಕಲಿಯುವ ಪ್ರಯತ್ನದಲ್ಲಿದ್ದಾರೆ.
ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿಡಪ ಅವರು ಈ ವರ್ಷ ಮದುವೆ ಆದರು. ಜೂನ್ ತಿಂಗಳಲ್ಲಿ ಇವರ ವಿವಾಹ ಅದ್ದೂರಿಯಾಗಿ ನಡೆಯಿತು. ರಜನಿಕಾಂತ್ ಸೇರಿ ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಿ ಹಾಕಿದ್ದರು. ಯಶ್, ಸುದೀಪ್ ಮೊದಲಾದ ಸ್ಟಾರ್ ನಟರು ಆಗಮಿಸಿ ನವ ದಂಪತಿಗೆ ಶುಭಕೋರಿದರು.
ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕಿಯರು ಕಡಿಮೆ. ಈ ಸಾಲಿನಲ್ಲಿ ರಿಷಿಕಾ ಶರ್ಮಾ ಇದ್ದಾರೆ. ಅವರು ನಟ ನಿಹಾಲ್ ಜೊತೆ ಮದುವೆ ಆಗಿದ್ದಾರೆ. ಇಬ್ಬರೂ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ.
ಈ ವರ್ಷ ನಟಿ ಶುಭ್ರ ಅಯ್ಯಪ್ಪ ಅವರು ಉದ್ಯಮಿ ವಿಶಾಲ್ ಶಿವಪ್ಪ ಅವರನ್ನು ಮದುವೆ ಆಗಿದ್ದಾರೆ. ಹಲವು ವರ್ಷಗಳ ಕಾಲ ಶುಭ್ರ ಹಾಗೂ ವಿಶಾಲ್ ಪ್ರೀತಿಸುತ್ತಿದ್ದರು.
ಸಂಗೀತ ನಿರ್ದೇಶಕನಾಗಿ, ನಟನಾಗಿ ವಾಸುಕಿ ವೈಭವ್ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಬೃಂದಾ ಜೊತೆ ಮದುವೆ ಆಗಿದ್ದಾರೆ. ಬೆಂಗಳೂರಿನಲ್ಲಿ ಸಿಂಪಲ್ ಆಗಿ ಇವರ ಮದವೆ ಕಾರ್ಯ ನಡೆದಿದೆ.
Published On - 1:11 pm, Wed, 27 December 23