Udupi: 3 ತೃತೀಯ ಲಿಂಗಿಯರಿಂದ ಪ್ರಾರಂಭವಾಗಿದೆ ರಾತ್ರಿ ಹೊಟೇಲ್​​: ಹೊಸ ಬದುಕು ಕಟ್ಟಿಕೊಂಡ ಮಂಗಳಮುಖಿಯರು

ಉಡುಪಿ ಬಸ್​ ನಿಲ್ದಾಣದ ಪಕ್ಕದಲ್ಲಿ ಮೂವರು ತೃತೀಯ ಲಿಂಗಿಯರು ಸೇರಿ ಹೊಟೇಲ್​ ಪ್ರಾರಂಭಿಸುವ ಮೂಲಕ, ರಾತ್ರಿ ಪ್ರಯಾಣಿಕರಿಗೆ ಮತ್ತು ಕೆಲಸಗಾರರ ಪಾಲಿಗೆ ಅನ್ನದಾತರಾಗಿದ್ದಾರೆ.

Udupi: 3 ತೃತೀಯ ಲಿಂಗಿಯರಿಂದ ಪ್ರಾರಂಭವಾಗಿದೆ ರಾತ್ರಿ ಹೊಟೇಲ್​​: ಹೊಸ ಬದುಕು ಕಟ್ಟಿಕೊಂಡ ಮಂಗಳಮುಖಿಯರು
ಹೊಟೇಲ್​ ಪ್ರಾರಂಭಿಸಿದ ತೃತೀಯ ಲಿಂಗಿಗಳು
Follow us
ವಿವೇಕ ಬಿರಾದಾರ
|

Updated on:Feb 13, 2023 | 9:00 AM

ಉಡುಪಿ: ನಮ್ಮ ಸಮಾಜದಲ್ಲಿ ಇಂದಿಗೂ ಮಂಗಳಮುಖಿಯರನ್ನು ಕೀಳಿರಮೆಯಿಂದ ಕಾಣುವ ಮನೋಭಾವ ಇದೆ. ತೃತೀಯ ಲಿಂಗಿಯರನ್ನು ನಾವು ಬಸ್​ಸ್ಟ್ಯಾಂಡ್​, ರೇಲ್ವೆ ನಿಲ್ದಾಣ ಅಥವಾ ಮಾರುಕಟ್ಟೆಗಳಲ್ಲಿ ಚಪ್ಪಾಳೆ ತಟ್ಟಿ ಹಣ ಬೇಡುವುದನ್ನು ಕಂಡಿದ್ದೇವೆ. ಇವರನ್ನು ಕಂಡಾಕ್ಷಣ ಅಸಹ್ಯ ಪಡುತ್ತೇವೆ, ದೂರ ಸರಿಯುತ್ತೇವೆ. ಇನ್ನು ತೃತೀಯ ಲಿಂಗಿಯರು ಕೂಡ ಸಮಾಜದ ಮುನ್ನಲೆಗೆ ಬಂದು ಸಾಧನೆ ಮಾಡುವಲ್ಲಿ ಹಿಂಜರಿಯುತ್ತಿದ್ದು, ಇದಕ್ಕೆ ಕಾರಣ ನಾವು, ನೀವೆಲ್ಲ ಎಂದರೇ ತಪ್ಪಾಗಲಿಕ್ಕಿಲ್ಲ. ಆದರೆ ಇದು ಈಗ ಬದಲಾಗಿದೆ. ತೃತೀಯ ಲಿಂಗಿ ಜೋಗತಿ ಮಂಜಮ್ಮ ಅವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಈ ಮೂಲಕ ಮಂಗಳಮುಖಿಯರ ಮೇಲಿದ್ದ ಕೆಟ್ಟ ಭಾವನೆ ಮರೆಯಾಗುತ್ತಿದೆ. ಇದರಂತೆ ಉಡುಪಿಯಲ್ಲಿ ಮೂವರು ತೃತೀಯ ಲಿಂಗಿಯರು ದುಡಿದು ತಿನ್ನುವ ಛಲದಿಂದ ಹೋಟೆಲ್​ವೊಂದನ್ನು ತೆರೆದಿದ್ದಾರೆ.

ಹೌದು ಪೂರ್ವಿ, ವೈಷ್ಣವಿ ಮತ್ತು ಚಂದನಾ ಎಂಬ ಹೆಸರಿನ ಮೂವರು ತೃತೀಯ ಲಿಂಗಿಗಳು ಉಡುಪಿ ಬಸ್​ ನಿಲ್ದಾಣದ ಪಕ್ಕದಲ್ಲಿ ಹೊಸದಾಗಿ ಹೋಟೆಲ್​ ತೆಗೆದಿದ್ದಾರೆ. ಮೂಲತಃ ಈ ಮೂವರು ಬೇರೆ ಬೇರೆ ಜಿಲ್ಲೆಯವರಾಗಿದ್ದು, ಒಟ್ಟಾಗಿ ಹೋಟೆಲ್​ ತೆರೆದಿರುವುದು ವಿಶೇಷವಾಗಿದೆ. ಈ ಹೋಟೆಲ್ ರಾತ್ರಿ ಮಾತ್ರ ತೆರೆದಿರುತ್ತದೆ. ಹೌದು ರಾತ್ರಿ ಪಾಳಯದಲ್ಲಿ ಕೆಲಸ ಮಾಡುವವರಿಗೆ, ರಾತ್ರಿ ಆಹಾರ ಸಿಗದೆ ಪರದಾಡುತ್ತಿರುತ್ತಾರೆ. ಹೀಗಾಗಿ ಇವರಿಗೆ ಅನುಕೂಲವಾಗಲೆಂದು ಮಧ್ಯರಾತ್ರಿ 1 ಗಂಟೆಯಿಂದ ಬೆಳಿಗ್ಗೆ 7ಗಂಟೆಯವರೆಗೆ ಹೋಟೆಲ್​ ತೆರಯಲಾಗುತ್ತದೆ. ಇದು ದೂರದ ಊರಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಿದೆ.

ರಾತ್ರಿ ಸಮಯದಲ್ಲಿ ಉಡುಪಿಯಲ್ಲಿ ಭಾಗಶಃ ಎಲ್ಲ ಹೋಟೆಲ್​ಗಳು ಬಂದಾಗಿರುತ್ತವೆ. ಈ ಸಮಯದಲ್ಲಿ ರಾತ್ರಿ ಪ್ರಯಾಣಿಕರಿಗೆ ಮತ್ತು ರಾತ್ರಿ ಪಾಳಯದಲ್ಲಿ ಕೆಲಸ ಆಡುವ ಜನರಿಗೆ ಆಹಾರ ಸಿಗುವುದಿಲ್ಲ. ಹೀಗಾಗಿ ಮೂವರು ತೃತೀಯ ಲಿಂಗಿಗಳು ಪ್ರಾರಂಭಿಸಿದ ಈ ಹೋಟೆಲ್​ ಜನರಿಗೆ ತುಂಬಾ ಅನುಕೂಲಕರವಾಗಿದೆ. ಇನ್ನೂ ಈ ಹೋಟೆಲ್​ನಲ್ಲಿ ಲಘು ಉಪಹಾರ ಸಿಗುತ್ತಿದ್ದು, ಸಾಕಷ್ಟು ಜನರು ಬಂದು ಸವಿಯುತ್ತಿದ್ದಾರೆ.

ಈ ಬಗ್ಗೆ ಓರ್ವ ತೃತೀಯ ಲಿಂಗಿ ಮಾತನಾಡಿ ಹೋಟೆಲ್​ ಪ್ರಾರಂಭಿಸಿದಾಗಿನಿಂದ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಮತ್ತು ನಮ್ಮ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹಾಗೇ ಈ ವೃತ್ತಿ ನಮಗೆ ಹೊಸ ಬದುಕು ನೀಡಿದೆ ಮತ್ತು ಖುಷಿ ತಂದಿದೆ ಎಂದು ಹೇಳಿದ್ದಾರೆ.

ಈ ಹೋಟೆಲ್​ನ್ನು ಪ್ರಾರಂಭಿಸಲು ರಾಜ್ಯದಲ್ಲೇ ಎಂಬಿಎ ಪದವಿ ಪಡೆದ ಮೊದಲ ತೃತೀಯ ಲಿಂಗಿ ಸಮಿಕ್ಷಾ ಕುಂದರ್ ಧನ ಸಹಾಯ ಮಾಡಿದ್ದಾರೆ. ಈ ಮೂಲಕ ತೃತೀಯ ಲಿಂಗಿ ಮೇಲೆ ಇದ್ದ ಸಮಾಜದ ಕೆಟ್ಟ ಭಾವನೆ ಹೋಗಲಾಡಿಸಲು ಸಹಾಯವಾಗಲಿದೆ. ಹಾಗೇ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲು ಅನುಕೂಲಕರವಾಗಲಿದೆ.

ಈ ಮೂವರು ತಮ್ಮ ಮನೆಯಲ್ಲೇ ಆಹಾರ ತಯಾರಿಸುತ್ತಾರೆ. ಇವರು ಸಣ್ಣದಾಗಿ ಪ್ರಾರಂಭಿಸಿದ ಉದ್ಯಮ ಎತ್ತರಕ್ಕೆ ಬೆಳೆಯಲಿ. ಮತ್ತು ಇವರ ಈ ಹೊಸ ಪ್ರಯತ್ನವನ್ನು ಜನರು ಸ್ವಾಗತಿಸಿದ್ದು ಸಂತಸ ತಂದಿದೆ. ಮತ್ತು ಅವರು ಸಖಾರಾತ್ಮಕವಾಗಿ ಕೆಲಸವನ್ನು ಪ್ರಾರಂಭಿಸಿದ್ದಾರೆ. ಈ ಕಾರ್ಯದಲ್ಲಿ ಅವರು ಯಶಸ್ಸು ಕಾಣಲಿ ಎಂದು ಸಮಿಕ್ಷಾ ಕುಂದರ್ ಹಾರೈಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:23 am, Mon, 13 February 23