
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿ ಐದು ದಿನಗಳಾಗಿವೆ. ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಕೇವಲ ಐದು ದಿನಕ್ಕೆ ಸಿನಿಮಾ 300 ಕೋಟಿ ಕಲೆಕ್ಷನ್ ದಾಟಿದೆ. ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ಬಂಡವಾಳ ತೊಡಗಿಸಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ನೂರಾರು ಕೋಟಿ ರೂಪಾಯಿ ಬಂಡವಾಳ ತೊಡಗಿಸಿದೆ. ಅಷ್ಟಕ್ಕೂ ರಿಷಬ್ ಶೆಟ್ಟಿಯ ಮೇಲೆ ಹೊಂಬಾಳೆ ಇಷ್ಟೋಂದು ನಂಬಿಕೆ ಇರಿಸಲು ಕಾರಣ ಏನು?
2022 ರಲ್ಲಿ ಬಿಡುಗಡೆ ಆದ ‘ಕಾಂತಾರ’ ಸಿನಿಮಾಕ್ಕೆ ಕೇವಲ 25 ಕೋಟಿ ಬಂಡವಾಳವನ್ನು ಹೊಂಬಾಳೆ ಹೂಡಿತ್ತು. ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿ ಬಂಡವಾಳದ ನೂರಾರು ಪಟ್ಟು ಲಾಭವನ್ನು ಮಾಡಿಕೊಟ್ಟಿತು. ಆಗಲೇ ‘ಕಾಂತಾರ’ ಸಿನಿಮಾದ ಮತ್ತೊಂದು ಭಾಗ ಘೋಷಣೆ ಮಾಡಲಾಗಿತ್ತು. ಆದರೆ ಹೊಂಬಾಳೆ, ಎರಡನೇ ಸಿನಿಮಾಕ್ಕೂ 25-30 ಕೋಟಿ ಬಂಡವಾಳ ಹೂಡಿ ಲಾಭ ಮಾಡಿಕೊಂಡು ಕೈತೊಳೆದುಕೊಳ್ಳಲಿಲ್ಲ. ಆದರೆ ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ವಿಶ್ವಗುಣಮಟ್ಟದ ಸಿನಿಮಾ ಆಗಿ ರೂಪಿಸಲು ಟೊಂಕಕಟ್ಟಿತು.
ಇದಕ್ಕೆ ಮುನ್ನ ದೊಡ್ಡ ಬಜೆಟ್ ಅನ್ನು ಹ್ಯಾಂಡಲ್ ಮಾಡಿ ಗೊತ್ತಿಲ್ಲದ ರಿಷಬ್ ಶೆಟ್ಟಿ ಮೇಲೆ ಹೊಂಬಾಳೆ ಭಾರಿ ನಂಬಿಕೆಯನ್ನೇ ಇರಿಸಿತು. ಇದಕ್ಕೆ ಮುಖ್ಯ ಕಾರಣ, ರಿಷಬ್ ಶೆಟ್ಟಿ ಹೇಳಿದ ಕತೆಯಂತೆ. ರಿಷಬ್ ಅವರೇ ಹೇಳಿಕೊಂಡಿರುವಂತೆ ಎಷ್ಟೋ ಮಂದಿ ನಿರ್ಮಾಪಕರು ಕತೆಯನ್ನೇ ಕೇಳುವುದಿಲ್ಲ ಆದರೆ ನಾನು ವಿಜಯ್ ಕಿರಗಂದೂರು ಅವರಿಗೆ 15 ಬಾರಿ ಕತೆ ಹೇಳಿದ್ದೇನೆ ಎಂದಿದ್ದರು. ಕತೆಯ ಮೇಲೆ ಪೂರ್ಣ ನಂಬಿಕೆ ಬಂದ ಬಳಿಕ, ಹೊಂಬಾಳೆ, ಕತೆಯನ್ನು ನಂಬಿ ನೂರಾರು ಕೋಟಿ ಬಂಡವಾಳ ತೊಡಗಿಸಿತು.
ಇದನ್ನೂ ಓದಿ:ಕಿಚ್ಚನಿಂದ ಸ್ಫೂರ್ತಿ ಪಡೆದು ಈ ನಿರ್ಧಾರ ತೆಗೆದುಕೊಂಡರು ರಿಷಬ್ ಶೆಟ್ಟಿ
ಸಿನಿಮಾದ ಪ್ರತಿ ವಿಭಾಗದಲ್ಲೂ ಹೊಂಬಾಳೆಯ ತಂಡ ತೊಡಗಿಕೊಳ್ಳುತ್ತಿತ್ತಂತೆ. ಎಲ್ಲ ಕೆಲಸಗಳನ್ನು ಹತ್ತಿರದಿಂದ ಗಮನಿಸುವ ಜೊತೆಗೆ ಸಂಪೂರ್ಣ ಕ್ರಿಯೇಟಿವ್ ಸ್ವಾತಂತ್ರ್ಯವನ್ನು ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ತಂಡಕ್ಕೆ ನೀಡಿತ್ತಂತೆ. ಕೇವಲ ಸಿನಿಮಾ ಮಾತ್ರ ಅಲ್ಲದೆ ಅತ್ಯುತ್ತಮ ಗುಣಮಟ್ಟದ ಸಿನಿಮಾ ನಿರ್ಮಾಣ ಆಗಬೇಕು ಎಂಬುದೇ ಹೊಂಬಾಳೆಯ ಉದ್ದೇಶವಾಗಿತ್ತಂತೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ಸುಮಾರು 200 ಕೋಟಿ ರೂಪಾಯಿ ಬಂಡವಾಳ ತೊಡಗಿಸಿದೆ. ಇದರಲ್ಲಿ ಸಿನಿಮಾದ ಪ್ರಚಾರದ ಖರ್ಚು ಸಹ ಸೇರಿದೆ ಎನ್ನಲಾಗಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಈಗಾಗಲೇ 300 ಕೋಟಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿದೆ. ಸಿನಿಮಾದ ಕಲೆಕ್ಷನ್ 1000 ಕೋಟಿಯ ಹತ್ತಿರಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:40 am, Tue, 7 October 25