
ದೇಶಾದ್ಯಂತ ಇರುವ ಸಿನಿಪ್ರಿಯರು ‘ಕಾಂತಾರ’ ಸಿನಿಮಾ (Kantara) ಬಗ್ಗೆ ಮಾತನಾಡುತ್ತಿದ್ದಾರೆ. ಈ ಚಿತ್ರ ಸೃಷ್ಟಿ ಮಾಡಿರುವ ಹೈಪ್ ಅಷ್ಟಿಷ್ಟಲ್ಲ. ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಈ ಚಿತ್ರ ಧೂಳೆಬ್ಬಿಸುತ್ತಿದೆ. ರಿಷಬ್ ಶೆಟ್ಟಿ (Rishab Shetty) ನಟನೆಯನ್ನು ಎಲ್ಲರೂ ಹೊಗಳುತ್ತಿದ್ದಾರೆ. ಸೆ.30ರಂದು ಕನ್ನಡದಲ್ಲಿ ಮಾತ್ರ ‘ಕಾಂತಾರ’ ಬಿಡುಗಡೆ ಆಗಿತ್ತು. ಎಲ್ಲೆಡೆಯಿಂದ ಉತ್ತಮ ವಿಮರ್ಶೆ ಸಿಕ್ಕಿದ್ದರಿಂದ ಬೇರೆ ಭಾಷೆಗಳಿಗೂ ಡಬ್ ಮಾಡಿ ಅ.14ರಂದು ರಿಲೀಸ್ ಮಾಡಲಾಯ್ತು. ಮುಂಬೈನಲ್ಲಿ ಸತತ ಮೂರು ದಿನ ಅನೇಕ ಶೋಗಳು ಹೌಸ್ಫುಲ್ ಆಗಿವೆ. 3ನೇ ದಿನವಾದ ಭಾನುವಾರ (ಅ.16) ಜನರು ಈ ಚಿತ್ರವನ್ನು ಮುಗಿಬಿದ್ದು ನೋಡಿದ್ದಾರೆ. ‘ಕಾಂತಾರ’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ (Kantara Box Office Collection) ನೋಡಿ ಬಾಲಿವುಡ್ ಮಂದಿ ಕೂಡ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ನಲ್ಲಿ ‘ಕಾಂತಾರ’ ಸಿನಿಮಾ ಮೂಡಿಬಂದಿದೆ. ಆರಂಭದಲ್ಲಿ ಈ ಚಿತ್ರವನ್ನು ಹಲವು ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡುವ ಆಲೋಚನೆ ಇರಲಿಲ್ಲ. ಆದರೆ, ಕರ್ನಾಟಕದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದರಿಂದ ಬೇರೆ ಭಾಷೆಗಳಿಂದಲೂ ಡಿಮ್ಯಾಂಡ್ ಬಂತು. ಅದರಲ್ಲೂ ಹಿಂದಿ ಪ್ರೇಕ್ಷಕರು ಈ ಸಿನಿಮಾ ಮೇಲೆ ಹೆಚ್ಚು ಆಸಕ್ತಿ ತೋರಿಸಿದರು.
ಹಿಂದಿಯಲ್ಲಿ ಮೊದಲ ದಿನ ಕಲೆಕ್ಷನ್ ಆಗಿದ್ದು 1.27 ಕೋಟಿ ರೂಪಾಯಿ. ಎರಡನೇ ದಿನ 2.75 ಕೋಟಿ ರೂಪಾಯಿಗೆ ಏರಿಕೆ ಆಯಿತು. ಭಾನುವಾರ ಕೂಡ ಭರ್ಜರಿ ಕಲೆಕ್ಷನ್ ಆಗಿದ್ದು, ಅಧಿಕೃತ ಲೆಕ್ಕ ಎಷ್ಟು ಎಂಬುದು ಸದ್ಯದಲ್ಲೇ ರಿವೀಲ್ ಆಗಲಿದೆ. ಸಲ್ಮಾನ್ ಖಾನ್ ಮತ್ತು ಚಿರಂಜೀವಿ ನಟಿಸಿದ್ದ ‘ಗಾಡ್ ಫಾದರ್’ ಚಿತ್ರ ಕೂಡ ಹಿಂದಿಗೆ ಡಬ್ ಆಗಿತ್ತು. ಹಿಂದಿ ವರ್ಷನ್ನಲ್ಲಿ ಆ ಸಿನಿಮಾ ಒಟ್ಟಾರೆ ಗಳಿಸಿದ್ದು 9.03 ಕೋಟಿ ರೂಪಾಯಿ ಮಾತ್ರ. ಆ ಕಲೆಕ್ಷನ್ ಅನ್ನು ‘ಕಾಂತಾರ’ ಸಿನಿಮಾ ಅನಾಯಾಸವಾಗಿ ಹಿಂದಿಕ್ಕಲಿದೆ.
ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ ಅಬ್ಬರ ಮುಂದುವರಿದಿದೆ. ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿಟ್ಟರೂ ಕೂಡ ಹಲವು ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಎಷ್ಟೋ ಜನರು ಟಿಕೆಟ್ ಸಿಕ್ಕಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ. ಈ ಪರಿ ಯಶಸ್ಸು ಸಿಕ್ಕಿರುವುದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ.
ಈ ಸಿನಿಮಾದಿಂದ ರಿಷಬ್ ಶೆಟ್ಟಿ ಅವರಿಗೆ ದೇಶಾದ್ಯಂತ ಡಿಮ್ಯಾಂಡ್ ಹೆಚ್ಚಿದೆ. ಅಚ್ಯುತ್ ಕುಮಾರ್, ಕಿಶೋರ್, ಸಪ್ತಮಿ ಗೌಡ, ಮಾನಸಿ ಸುಧೀರ್ ಮುಂತಾದವರ ನಟನೆಗೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ. ‘ಹೊಂಬಾಳೆ ಫಿಲ್ಮ್ಸ್’ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದುಬಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:39 am, Mon, 17 October 22