
‘ಕಾಂತಾರ’ ಸಿನಿಮಾ (Kantara Movie) ಕನ್ನಡದಲ್ಲಿ ರಿಲೀಸ್ ಆಗಿ 40 ದಿನಗಳ ಮೇಲಾಗಿದೆ. ಆದಾಗ್ಯೂ ಸಿನಿಮಾದ ಅಬ್ಬರ ಕಡಿಮೆ ಆಗಿಲ್ಲ. ಈಗಲೂ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಮಾಡಿದ ದಾಖಲೆಗಳಿಗೆ ಲೆಕ್ಕವೇ ಇಲ್ಲ. ಈಗ ಬಾಲಿವುಡ್ನಲ್ಲೂ ಈ ಚಿತ್ರ ಅಬ್ಬರಿಸುತ್ತಿದೆ. ಹಿಂದಿಯಲ್ಲಿ ಈ ಚಿತ್ರದ ಗಳಿಕೆ 70 ಕೋಟಿ ರೂಪಾಯಿ ಸಮೀಪಿಸಿದೆ. ಹಾಗಾದರೆ, ‘ಕಾಂತಾರ’ ಸಿನಿಮಾ ಕರ್ನಾಟಕದಲ್ಲಿ ಗಳಿಕೆ ಮಾಡಿದ್ದು ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.
‘ಕಾಂತಾರ’ ಸಿನಿಮಾ ಕರ್ನಾಟಕದಲ್ಲಿ ಎಷ್ಟು ಗಳಿಕೆ ಮಾಡಿದೆ ಎನ್ನುವ ಬಗ್ಗೆ ಈವರೆಗೆ ಅಧಿಕೃತವಾಗಿ ಲೆಕ್ಕಾಚಾರ ಸಿಕ್ಕಿಲ್ಲ. ಆದರೆ, 1 ಕೋಟಿ ಟಿಕೆಟ್ಗಳು ಮಾರಾಟ ಆಗಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಪ್ರತಿ ಟಿಕೆಟ್ಗೆ ಸರಾಸರಿ 130-150 ರೂಪಾಯಿ ಹಿಡಿದರೂ ಈ ಚಿತ್ರದ ಒಟ್ಟೂ ಗಳಿಕೆ 150 ಕೋಟಿ ರೂಪಾಯಿ ಆಸುಪಾಸಿನಲ್ಲಿರಲಿದೆ. ಬಾಲಿವುಡ್ ಗಳಿಕೆಯನ್ನು ಸೇರಿದೆ ಸಿನಿಮಾದ ಕಲೆಕ್ಷನ್ 200 ಕೋಟಿ ರೂಪಾಯಿ ಮೇಲಾಗಲಿದೆ. ತಮಿಳು , ತೆಲುಗು ಹಾಗೂ ಮಲಯಾಳಂ ಕಲೆಕ್ಷನ್ ಸೇರಿದರೆ ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ 300 ಕೋಟಿ ರೂ. ದಾಟಿದೆ.
‘ಹೊಂಬಾಳೆ ಫಿಲ್ಮ್ಸ್’ ಕಾಂತಾರ ಚಿತ್ರವನ್ನು ನಿರ್ಮಾಣ ಮಾಡಿದೆ. ಕಡಿಮೆ ಬಜೆಟ್ನಲ್ಲಿ ಸಿದ್ಧವಾದ ಈ ಚಿತ್ರದಿಂದ ತಂಡಕ್ಕೆ ಸಖತ್ ಲಾಭ ಆಗಿದೆ. ವಿಜಯ್ ಕಿರಗಂದೂರು ಅವರು ಈ ಚಿತ್ರದಿಂದ ಬಂಗಾರದ ಬೆಳೆ ತೆಗೆದಿದ್ದಾರೆ. ಅದೇ ರೀತಿ ರಿಷಬ್ ಶೆಟ್ಟಿ ಅವರ ಖ್ಯಾತಿ ದ್ವಿಗುಣಗೊಂಡಿದೆ. ರಿಷಬ್ ಅವರಿಗೆ ಪರಭಾಷೆಗಳಿಂದ ಸಾಕಷ್ಟು ಆಫರ್ಗಳು ಬರೋಕೆ ಆರಂಭ ಆಗಿದೆ.
ಇದನ್ನೂ ಓದಿ: Manasi Sudhir: ‘ಕಾಂತಾರ’ ಚಿತ್ರದ ಶಿವನ ತಾಯಿ ಕಮಲಾ ಅಲಿಯಾಸ್ ಮಾನಸಿ ಸುಧೀರ್ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ
‘ಕಾಂತಾರ’ ಚಿತ್ರದಲ್ಲಿ ಕಾಡಿನ ಕಥೆ ಇದೆ. ಕಾಡನ್ನು ಹಾಗೂ ಕಾಡಿನ ಪ್ರಾಣಿಗಳನ್ನು ಉಳಿಸಬೇಕು ಎನ್ನುವ ಸಂದೇಶ ಈ ಚಿತ್ರದಿಂದ ಸಿಕ್ಕಿದೆ. ಭೂತ ಕೋಲದ ವಿಚಾರದಿಂದ ಚಿತ್ರದ ಮೆರುಗು ಹೆಚ್ಚಿದೆ. ಈ ಚಿತ್ರ ನವೆಂಬರ್ ಅಂತ್ಯಕ್ಕೆ ಒಟಿಟಿಗೆ ಕಾಲಿಡಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.
Published On - 2:35 pm, Thu, 10 November 22