ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಗೆದ್ದವರ ಪಟ್ಟಿ ಇಲ್ಲಿದೆ

Karnataka film chamber of commerce: ಕನ್ನಡ ಚಿತ್ರರಂಗದ ಅವಿಭಾಜ್ಯ ಅಂಗವಾಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹಲವು ಸ್ಥಾನಗಳಿಗೆ ಇಂದು (ಜನವರಿ 31) ಚುನಾವಣೆ ನಡೆದಿದ್ದು, ಇಂದೇ ಮತ ಎಣಿಕೆಯೂ ನಡೆದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿರಿಯ ನಟಿ ಜಯಮಾಲ ಅವರು ದೊಡ್ಡ ಸಂಖ್ಯೆಯ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಗೆದ್ದವರ ಪಟ್ಟಿ ಇಲ್ಲಿದೆ
Jayamala

Updated on: Jan 31, 2026 | 9:23 PM

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (karnataka film chamber of commerce) ಚುನಾವಣೆ ಇಂದು (ಜನವರಿ 31) ನಡೆದಿದ್ದು, ಭಾಮಾ ಹರೀಶ್ ವಿರುದ್ಧ ಜಯಮಾಲ ಅವರು ವಿಜೇತರಾಗಿದ್ದು, ವಾಣಿಜ್ಯ ಮಂಡಳಿಯ ಮುಂದಿನ ಅಧ್ಯಕ್ಷರಾಗುವುದು ಬಹುತೇಕ ಖಾತ್ರಿ ಆಗಿದೆ. ಇಂದು ಬೆಳಿಗ್ಗೆ ಆರಂಭವಾದ ಮತದಾನದಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗಿ ಆಗಿದ್ದರು. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಅಶ್ವಿನಿ ಪುನೀತ್ ರಾಜ್​​ಕುಮಾರ್ ಸೇರಿದಂತೆ ಹಲವಾರು ನಟ, ನಟಿಯರು, ತಂತ್ರಜ್ಞರುಗಳು ಆಗಮಿಸಿ ವಿವಿಧ ಸ್ಥಾನಗಳಿಗೆ ಚುನಾವಣೆ ಎದುರಿಸಿದ್ದ ಸ್ಪರ್ಧಿಗಳಿಗೆ ತಮಗೆ ಸೂಕ್ತ ಎನಿಸಿದವರಿಗೆ ಮತ ಚಲಾಯಿಸಿದರು.

ಇಂದೇ ಮತ ಎಣಿಕೆಯೂ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆಂದು ಭಾಮಾ ಹರೀಶ್ ಮತ್ತು ಜಯಮಾಲ ಅವರ ನಡುವೆ ತುರುಸಿನ ಪೈಫೊಟಿ ಇತ್ತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 813 ಮತಗಳು ಈ ಬಾರಿ ಚಲಾವಣೆ ಆಗಿದ್ದು, ಅವುಗಳಲ್ಲಿ 512 ಮತಗಳನ್ನು ಜಯಮಾಲ ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ. ಆ ಮೂಲಕ ಮುಂದಿನ ಅವಧಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿ ಜಯಮಾಲ ಅವರು ಅಧಿಕಾರ ವಹಿಸಿಕೊಳ್ಳುವುದು ಬಹತೇಕ ಖಾತ್ರಿ ಆಗಿದೆ. ಜಯಮಾಲ ಅವರು ಎರಡನೇ ಬಾರಿ ಫಿಲಂ ಚೇಂಬರ್​​ನ ಅಧ್ಯಕ್ಷೆ ಆಗಲಿದ್ದಾರೆ. 2008ರಲ್ಲಿ ಹಿರಿಯ ನಟಿ ಜಯಮಾಲ ಅವರು ಮಂಡಳಿಯ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಈಗ ಮತ್ತೊಮ್ಮೆ ಅಧ್ಯಕ್ಷೆ ಆಗಲಿದ್ದಾರೆ.

ಇದನ್ನೂ ಓದಿ:ಜಿದ್ದಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಚುನಾವಣೆ ಮುಂದೂಡಿಕೆ

ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ, ಕಜಾಂಚಿ, ಕಾರ್ಯದರ್ಶಿ, ಗೌರವ ಕಾರ್ಯದರ್ಶಿ (ವಿತರಕರ ವಲಯ), ಗೌರವ ಕಾರ್ಯದರ್ಶಿ (ಪ್ರದರ್ಶಕರ ವಲಯ) ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದೆ. ಫಿಲಂ ಚೇಂಬರ್ ಪಕ್ಕದಲ್ಲೇ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಮತದಾನ ನಡೆದಿದೆ. ಮತದಾನಕ್ಕೆ ಮುಂಚೆ ನಡೆದ ಸಭೆಯಲ್ಲಿಯೂ ಗಲಾಟೆಗಳು ನಡೆದಿದ್ದವು. ಮೈಕ್ ಕಿತ್ತು ಪರಸ್ಪರ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದರು. ಭಾರಿ ಕುತೂಹಲವನ್ನು ಮೂಡಿಸಿದ್ದ ಅಧ್ಯಕ್ಷ ಸ್ಥಾನ ಇದೀಗ ಜಯಮಾಲ ಅವರ ಪಾಲಾಗಿದೆ.

ಗೌರವ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುಂದರ್ ರಾಜು (ನಿರ್ಮಾಪಕರು), ಕೆ.ಮಂಜು (ಡಿಸ್ಟ್ರಿಬ್ಯೂಟರ್), ಕಿಶೋರ್ (ಎಕ್ಸಿಬ್ಯೂಟರ್) ಅವರುಗಳು ಗೆಲುವು ಸಾಧಿಸಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಮತದಾನದಲ್ಲಿ ಎ.ಗಣೇಶ್ (ನಿರ್ಮಾಪಕ), ರಮೇಶ್ (ವಿತರಕ) ಅಶೋಕ್ (ಪ್ರದರ್ಶಕ) ಅವರುಗಳು ಗೆದ್ದಿದ್ದಾರೆ. ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಯಸಿಂಹ ಮುಸುರಿ ಗೆಲುವು ಸಾಧಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:12 pm, Sat, 31 January 26