ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚನೆಗೆ ವಿರೋಧ: ನೀಡುತ್ತಿರುವ ಸಂದೇಶವೇನು?

|

Updated on: Sep 21, 2024 | 7:13 PM

Karnataka Film Chamber: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಲು ಇರುವ ಪೋಶ್ (PoSH) ಕಾಯ್ದೆಯಡಿ ಸಮತಿ ಸ್ಥಾಪನೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ವಿರೋಧ ವ್ಯಕ್ತಪಡಿಸಿದೆ.

ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚನೆಗೆ ವಿರೋಧ: ನೀಡುತ್ತಿರುವ ಸಂದೇಶವೇನು?
ಎನ್​ಎಂ ಸುರೇಶ್
Follow us on

ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚು ಎನ್ನಲಾಗುತ್ತದೆ. ಒಂದಾದ ಮೇಲೊಂದು ಚಿತ್ರರಂಗದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೊರಗೆ ಬರುತ್ತಲೇ ಇವೆ. ಹೊರಗೆ ಬರದೇ ಇರುವ ಅದೆಷ್ಟೋ ಪ್ರಕರಣಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ಗುಟ್ಟು. ಹೀಗಿದ್ದರೂ ಸಹ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಯಲು ಪ್ರತ್ಯೇಕ ದೂರು ಸಮಿತಿಯಾಗಲಿ, ಮಹಿಳೆಯರದ್ದೇ ಪ್ರಾತಿನಿಧ್ಯ ಇರುವ ಸಮಿತಿಯಾಗಲಿ ಇಲ್ಲ. ಚಿತ್ರರಂಗದ ಮೇಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉತ್ತರಾಧಿಕಾರ ಹೊಂದಿದೆ ಎಂಬಂಥಾ ಧೋರಣೆಯನ್ನು ಸಮಿತಿಯ ಸದಸ್ಯರು ಹೊಂದಿದ್ದಾರೆ. ಲೈಂಗಿಕ ದೌರ್ಜನ್ಯ ತಡೆ ಬಗ್ಗೆ ಮಾತನಾಡುತ್ತಿರುವ ಫೈರ್ ಅಂಥಹಾ ಸಂಸ್ಥೆಗಳ ವಿರುದ್ಧ ನಿಂತಿರುವ ವಾಣಿಜ್ಯ ಮಂಡಳಿ ಈಗ ಪಾಶ್ (PoSH) ಸಮಿತಿ ರಚನೆಗೂ ನೋ ಎನ್ನುವ ಹುನ್ನಾರದಲ್ಲಿದೆ.

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ತಡೆಗೆ 2013 ರಲ್ಲಿ ಮಾಡಲಾಗಿರುವ ಪಾಶ್ ಕಾಯ್ದೆಯ ಪ್ರಕಾರ ಆಂತರಿಕ ದೂರು ಸಮಿತಿಯನ್ನು ಸ್ಥಾಪನೆ ಮಾಡಬೇಕೆಂದು ಫೈರ್ ಒತ್ತಾಯಿಸಿತ್ತು. ಆದರೆ ಪಾಶ್ ರಚನೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರೋಧವಿದೆ ಎನ್ನುವುದು ಸ್ಪಷ್ಟವಾಗಿದೆ. ಇದರ ನಡುವೆ ನಟಿ ಭಾವನಾ, ನಿರ್ದೆಶಕ ಟೆಸಿ ವೆಂಕಟೇಶ್ ಇನ್ನಿತರರು ಇರುವ ‘ಕರ್ನಾಟಕ ಚಲನಚಿತ್ರ ಸಂರಕ್ಷಣಾ ಸಂಘ’ದ ವತಿಯಿಂದ ಪಾಶ್ ಕಾಯ್ದೆ ವಿರೋಧಿಸಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಸಹ ಬರೆಯಲಾಗಿದೆ.

ಇದನ್ನೂ ಓದಿ:ಗೋವಾದಲ್ಲಿ ರಕ್ತದ ಕೋಡಿಯೇ ಹರಿಯಿತು: ನಿರ್ಮಾಪಕರ ಗಲಾಟೆ ಬಗ್ಗೆ ಎನ್​ಎಂ ಸುರೇಶ್ ವಿವರಣೆ

ಪಾಶ್ ಕಾಯ್ದೆ ತಂದರೆ ಚಿತ್ರರಂಗ ನಾಶವಾಗುತ್ತದೆ ಎಂಬ ಬಾಲಿಶ ಅಂಶವನ್ನು ‘ಕರ್ನಾಟಕ ಚಲನಚಿತ್ರ ಸಂರಕ್ಷಣಾ ಸಂಘ’ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ. ಇನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್​ಎಂ ಸುರೇಶ್ ಈ ಬಗ್ಗೆ ಮಾತನಾಡಿ, ‘ಪಾಶ್ ಕಮಿಟಿ ಸ್ಥಾಪನೆ ಬಗ್ಗೆ ಕಾನೂನು ಸಲಹೆ ಪಡೆದು ಮುಂದುವರೆಯಲಾಗುತ್ತದೆ’ ಎಂದಿದ್ದಾರೆ. ಇದೇ ಸಮಯದಲ್ಲಿ ‘ಫೈರ್’ ಬಗ್ಗೆ ಮಾತನಾಡಿ ಚೇತನ್ ಅಹಿಂಸ ಅನ್ನು ನಿಂದಿಸಿದರು. ಚಿತ್ರರಂಗವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

‘ನಟಿ ರಮ್ಯಾ, ನಟ ಸುದೀಪ್, ರಮೇಶ್ ಅರವಿಂದ್ ಇನ್ನಿತರರು ‘ಫೈರ್​’ಗೆ ಬೆಂಬಲವನ್ನೇ ನೀಡಿಲ್ಲ. ಸುಮ್ಮನೆ ಅವರು ಸುದೀಪ್, ರಮ್ಯಾ ಅವರೆಲ್ಲ ನಮಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನಮಗೂ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಇದೆ. ಏನೇ ಸಮಸ್ಯೆ ಇದ್ದರೆ ನಮಗೆ ನೇರವಾಗಿ ದೂರು ಕೊಡಿ. ಸುಮ್ಮನೆ ಗೊಂದಲ ಸೃಷ್ಟಿಸುವ ಕಾರ್ಯವನ್ನು ಚೇತನ್ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಯಾರಿಗೂ ತೊಂದರೆ ಇಲ್ಲ, ತೊಂದರೆ ಇದ್ದರೆ ಅದನ್ನು ನಿವಾರಿಸುವ ಜವಾಬ್ದಾರಿ ನಮಗಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ