ಕಲಾವಿದರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ, ಮಾಸಾಶನ ಹೆಚ್ಚಳ

Karnataka Government: ಕರ್ನಾಟಕ ಸರ್ಕಾರವು ಕಲಾವಿದರ ಬಹು ವರ್ಷಗಳ ಬೇಡಿಕೆಯನ್ನು ಮನ್ನಿಸಿದ್ದು, ಕಲಾವಿದರ ಮಾಸಾಶನವನ್ನು ಹೆಚ್ಚಿಸಿದೆ. 60 ವರ್ಷ ಮೀರಿದ 12 ಸಾವಿರಕ್ಕೂ ಹೆಚ್ಚಿನ ಮಂದಿ ಕಲಾವಿದರು ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಮಾಸಾಶನವನ್ನು ಪಡೆಯುತ್ತಿದ್ದರು. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರ ಮಾಸಾಶನವನ್ನು ಹೆಚ್ಚಿಸಿ ಅನುದಾನ ಸಹ ಬಿಡುಗಡೆ ಮಾಡಿದೆ.

ಕಲಾವಿದರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ, ಮಾಸಾಶನ ಹೆಚ್ಚಳ
Cm Siddaramaiah

Updated on: Jun 25, 2025 | 6:22 PM

ಕಲಾವಿದರ ಮಾಸಾಶನ ಹೆಚ್ಚಸುವಂತೆ ಹಲವು ವರ್ಷಗಳಿಂದಲೂ ಸರ್ಕಾರವನ್ನು (Karnataka Government) ಒತ್ತಾಯಿಸಲಾಗಿತ್ತು. ಇದೀಗ ಕೊನೆಗೂ ಸರ್ಕಾರ, ಕಲಾವಿದರ ಮಾಸಾಶನ ಹೆಚ್ಚಿಸಿ ಅನುದಾನ ಬಿಡುಗಡೆ ಮಾಡಿದೆ. ಈ ಹಿಂದೆ ಕಲಾವಿದರ ಮಾಸಾಶನ 2000 ರೂಪಾಯಿಗಳಿದ್ದು, ಅದನ್ನು ಹೆಚ್ಚಿಸಿ 2500 ಮಾಡಲಾಗಿದ್ದು, ಇದಕ್ಕಾಗಿ 32.94 ಕೋಟಿ ಹಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ.

ಕಳೆದ ವರ್ಷ ನಾಟಕ ಅಕಾಡೆಮಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಕಲಾವಿದರ ಮಾಸಾಶನವನ್ನು ಎರಡು ಸಾವಿರದಿಂದ ಮೂರು ಸಾವಿರಕ್ಕೆ ಏರಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ 2500 ರೂಪಾಯಿ ಏರಿಕೆ ಮಾಡಲಾಗಿದೆ. ಅಸಲಿಗೆ ಕಲಾವಿದರಿಗೆ ತಿಂಗಳ ಮಾಸಾಶನವಾಗಿ ಐದು ಸಾವಿರ ರೂಪಾಯಿ ನೀಡಬೇಕು ಎಂಬುದು ಸಂಘದ ಬೇಡಿಕೆ ಆಗಿತ್ತು. ಈಗ 500 ರೂಪಾಯಿಗಳನ್ನು ಮಾತ್ರವೇ ಏರಿಕೆ ಮಾಡಲಾಗಿದೆ.

ಕಳೆದ ವರ್ಷದ ಲೆಕ್ಕಾಚಾರದಂತೆ 60 ವರ್ಷ ಮೀರಿದ 12,543 ಮಂದಿ ಕಲಾವಿದರು ರಾಜ್ಯದಾದ್ಯಂತ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಮಾಸಾಶನ ಪಡೆಯುತ್ತಿದ್ದರು. ಇನ್ನು ಮುಂದೆ ಇಷ್ಟೂ ಮಂದಿಗೆ 2500 ರೂಪಾಯಿ ಮಾಸಾಶನ ದೊರೆಯಲಿದೆ. ಅಲ್ಲದೆ ಗ್ರಾಮಗಳಲ್ಲಿ ಕಲಾವಿದರನ್ನು ಗುರುತಿಸಿ ಅವರಿಗೆ ಮಾಸಾಶನ ಕೊಡಿಸುವ ಕ್ರಮವನ್ನು ಕೈಗೊಳ್ಳುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಳೆದ ವರ್ಷ ಹೇಳಿತ್ತು.

ಇದನ್ನೂ ಓದಿ:ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್​ರನ್ನು ಭೇಟಿಯಾದ ಸಿದ್ದರಾಮಯ್ಯ

2023 ರಿಂದಲೂ ಈ ಮಾಸಾಶನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಭೆಗಳು, ಅನುಮೋದನೆಗಳು, ಬೇಡಿಕೆ ಸಲ್ಲಿಕೆ ಇನ್ನಿತರೆಗಳು ನಡೆಯುತ್ತಲೇ ಇದ್ದವು. ಕಳೆದ ವರ್ಷ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ ಬಳಿಕ ಪ್ರಕ್ರಿಯೆಗೆ ಇನ್ನಷ್ಟು ಚುರುಕು ದೊರಕಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರೂ ಸಹ ಈ ಬಗ್ಗೆ ಭರವಸೆ ನೀಡಿದ್ದರು. ಕೊನೆಗೆ ಇಂದು ಮಾಸಾಶನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅನುದಾನವನ್ನು ಇಲಾಖೆ ಬಿಡುಗಡೆ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ