‘ಮಹಾವತಾರ ಯೂನಿವರ್ಸ್’: ಒಟ್ಟಿಗೆ ಏಳು ಪೌರಾಣಿಕ ಸಿನಿಮಾ ಘೋಷಿಸಿದ ಹೊಂಬಾಳೆ
Hombale Films: ಕೆಲ ತಿಂಗಳ ಹಿಂದಷ್ಟೆ ನಟ ಪ್ರಭಾಸ್ ಜೊತೆಗೆ ಒಟ್ಟಿಗೆ ಮೂರು ಸಿನಿಮಾಗಳನ್ನು ಹೊಂಬಾಳೆ ಫಿಲಮ್ಸ್ ಘೋಷಿಸಿತ್ತು. ಇದೀಗ ಒಟ್ಟಿಗೆ ಬರೋಬ್ಬರಿ ಏಳು ಸಿನಿಮಾಗಳನ್ನು ಹೊಂಬಾಳೆ ಘೋಷಿಸಿದ್ದು, ಏಳು ಸಿನಿಮಾಗಳು ಪೌರಾಣಿಕ ಕತೆ ಆಧರಿತ ಸಿನಿಮಾಗಳೇ ಆಗಿವೆ. ಏಳು ಸಿನಿಮಾಗಳು ಪೌರಾಣಿಕ ಕತೆಗಳನ್ನು ಹೊಂದಿದ್ದು ‘ಮಹಾವತಾರ ಯೂನಿವರ್ಸ್’ ಎಂದು ಇದಕ್ಕೆ ಹೆಸರಿಟ್ಟಿದೆ.

ಹೊಂಬಾಳೆ ಫಿಲಮ್ಸ್ (Hombale Films) ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತದ ಟಾಪ್ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರಿ ಬಜೆಟ್ ಸಿನಿಮಾಗಳ ಜೊತೆಗೆ ಸಂಸ್ಕೃತಿ, ಪೌರಾಣಿಕ ಕತೆಗಳನ್ನು ಸಹ ಅದ್ಧೂರಿತನದೊಂದಿಗೆ ತೆರೆಗೆ ತರುತ್ತಿದೆ ಹೊಂಬಾಳೆ. ಸಿನಿಮಾ ನಿರ್ಮಾಣದಲ್ಲಿ ಹೊಸ ಸಾಹಸಗಳನ್ನು ಹೊಂಬಾಳೆ ಮಾಡುತ್ತಿದೆ. ಕೆಲ ತಿಂಗಳ ಹಿಂದಷ್ಟೆ ನಟ ಪ್ರಭಾಸ್ ಜೊತೆಗೆ ಒಟ್ಟಿಗೆ ಮೂರು ಸಿನಿಮಾಗಳನ್ನು ಹೊಂಬಾಳೆ ಫಿಲಮ್ಸ್ ಘೋಷಿಸಿತ್ತು. ಇದೀಗ ಒಟ್ಟಿಗೆ ಬರೋಬ್ಬರಿ ಏಳು ಸಿನಿಮಾಗಳನ್ನು ಹೊಂಬಾಳೆ ಘೋಷಿಸಿದ್ದು, ಏಳು ಸಿನಿಮಾಗಳು ಪೌರಾಣಿಕ ಕತೆ ಆಧರಿತ ಸಿನಿಮಾಗಳೇ ಆಗಿವೆ.
ಹೊಂಬಾಳೆ ಫಿಲಮ್ಸ್ ‘ಮಹಾವತಾರ ಯೂನಿವರ್ಸ್’ ಸೃಷ್ಟಿಸಲು ಮುಂದಾಗಿದೆ. ಭಾರತದ ಪೌರಾಣಿಕ ಕತೆಗಳಲ್ಲಿರುವಂತೆ ವಿಷ್ಣುವಿನ ಏಳು ಮಹಾವತಾರಗಳ ಬಗ್ಗೆ ಸಿನಿಮಾ ಮಾಡಲು ಹೊಂಬಾಳೆ ಮುಂದಾಗಿದೆ. ಈಗಾಗಲೇ ‘ಮಹಾವತಾರ ನರಸಿಂಹ’ ಸಿನಿಮಾದ ಎಲ್ಲ ಕಾರ್ಯಗಳು ಮುಗಿದಿದ್ದು ಮುಂದಿನ ತಿಂಗಳು ಅಂದರೆ ಜುಲೈ 25ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದ ಟೈಟಲ್ ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಈ ಸಿನಿಮಾ ಅನಿಮೇಷನ್ ಸಿನಿಮಾ ಎನ್ನಲಾಗುತ್ತಿದೆ.
ಇಂದು (ಜೂನ್ 25) ಹೊಂಬಾಳೆಯು, ತನ್ನ ಮಹಾವತಾರ ಯೂನಿವರ್ಸ್ನ ಏಳು ಸಿನಿಮಾಗಳ ಹೆಸರು ಮತ್ತು ಬಿಡುಗಡೆ ವರ್ಷದ ಸಹಿತ ಮಾಹಿತಿ ಒಳಗೊಂಡ ವಿಡಿಯೋ ಅನ್ನು ಹಂಚಿಕೊಂಡಿದೆ. ಅದರಂತೆ ಮೊದಲಿಗೆ ಅಂದರೆ ಜುಲೈ 25, 2025 ರಂದು ಮಹಾವತಾರ ಯೂನಿವರ್ಸ್ನ ಮೊದಲ ಸಿನಿಮಾ ‘ಮಹಾವತಾರ ನರಸಿಂಹ’ ಬಿಡುಗಡೆ ಆಗಲಿದೆ. ಅದಾದ ಬಳಿಕ ‘ಮಹಾವತಾರ ಪರಷುರಾಮ’ ಸಿನಿಮಾ 2027 ಕ್ಕೆ ತೆರೆಗೆ ಬರಲಿದೆ. ಅದಾದ ಬಳಿಕ ‘ಮಹಾವತಾರ ರಘುನಂದನ’ ಸಿನಿಮಾ ಶ್ರೀರಾಮನ ಕುರಿತಾಗಿದ್ದು ಈ ಸಿನಿಮಾ 2029 ಕ್ಕೆ ತೆರೆಗೆ ಬರಲಿದೆ. ಅದಾದ ಬಳಿಕ ‘ಮಹಾವತಾರ ದ್ವಾರಕಾದೀಶ’ ಸಿನಿಮಾ 2031 ಕ್ಕೆ ತೆರೆಗೆ ಬರಲಿದೆ. ಅದೇ ಸಿನಿಮಾದ ಮುಂದುವರೆದ ಭಾಗ ‘ಮಹಾವತಾರ ಗೋಕುಲನಂದ’ 2033 ಕ್ಕೆ ತೆರೆಗೆ ಬರಲಿದೆ. ಅದಾದ ಬಳಿಕ ‘ಮಹಾವತಾರ ಕಲ್ಕಿ 1 2035ಕ್ಕೆ, ‘ಮಹಾವತಾರ ಕಲ್ಕಿ 2’ ಸಿನಿಮಾ 2037 ಕ್ಕೆ ತೆರೆಗೆ ಬರಲಿದೆ.
ಇದನ್ನೂ ಓದಿ:‘ಕಾಂತಾರ’ ದೋಣಿ ಅವಘಡ, ಹೊಂಬಾಳೆ ಕಾರ್ಯಕಾರಿ ನಿರ್ಮಾಪಕ ಸ್ಪಷ್ಟನೆ
ವಿಷ್ಣುವಿನ ಅವತಾರಗಳನ್ನು ಆಧರಿಸಿದ ಸಿನಿಮಾಗಳನ್ನು ‘ಮಹಾವತಾರ ಯೂನಿವರ್ಸ್’ನಲ್ಲಿ ಹೊಂಬಾಳೆ ನಿರ್ಮಾಣ ಮಾಡಲು ಮುಂದಾಗಿದ್ದು, ಈ ಎಲ್ಲ ಸಿನಿಮಾಗಳು ಅನಿಮೇಷನ್ ಸಿನಿಮಾಗಳು ಆಗಿರುತ್ತವೆಯೇ ಅಥವಾ ಫೀಚರ್ ಫಿಲಮ್ಗಳಾಗಿರುತ್ತವೆಯೇ ಎಂಬುದು ಕಾದು ನೋಡಬೇಕಿದೆ. ‘ಮಹಾವತಾರ ಯೂನಿವರ್ಸ್’ ಘೋಷಣೆ ಮಾಡಿರುವ ಹೊಂಬಾಳೆ, ‘ಸಾಧ್ಯತೆಗಳಿಗೆ ಕೊನೆಯೇ ಇಲ್ಲ. ನಮ್ಮ ಪಾತ್ರಗಳು ತೆರೆಯ ಮೇಲೆ ಘರ್ಜಿಸುವುದನ್ನು ನೋಡಲು ನಾವು ಉತ್ಸಾಹಭರಿತವಾಗಿದ್ದೇವೆ. ಅದ್ಭುತವಾದ ಸಿನಿಮಾ ಜರ್ನಿಗೆ ತಯಾರಾಗಿರಿ’ ಎಂದಿದ್ದಾರೆ.
ಪ್ರಭಾಸ್ ಜೊತೆಗೆ ಈಗಾಗಲೇ ಮೂರು ಸಿನಿಮಾಗಳನ್ನು ಹೊಂಬಾಳೆ ಘೋಷಣೆ ಮಾಡಿದೆ. ಅದರಲ್ಲಿ ಒಂದು ‘ಸಲಾರ್ 2’ ಸಿನಿಮಾ ಆಗಿರಲಿದೆ. ಇನ್ನು ಈ ಮಹಾವತಾರ ಯೂನಿವರ್ಸ್ನಲ್ಲಿ ಒಂದು ಸಿನಿಮಾನಲ್ಲಿ ಪ್ರಭಾಸ್ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನಷ್ಟೆ ಸುದ್ದಿ ಹೊರಬೀಳಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




