600 ಕೋಟಿ ಆಸ್ತಿ, ತಿಂಗಳಿಗೆ ಕೋಟ್ಯಂತರ ರೂಪಾಯಿ ಬಾಡಿಗೆ: ಕೆಸಿಎನ್ ಮೋಹನ್ ಬಿಚ್ಚಿಟ್ಟಿದ್ದ ಆಸ್ತಿ ವಿವರ

|

Updated on: Jul 02, 2023 | 4:35 PM

KCN Mohan: ಇಂದು ನಿಧನರಾದ ಪ್ರದರ್ಶಕ, ವಿತರಕ ಕೆಸಿಎನ್ ಮೋಹನ್, ತಮ್ಮ ಕುಟುಂಬದ ಆಸ್ತಿ ವಿವರದ ಬಗ್ಗೆ, ಪ್ರತಿ ತಿಂಗಳು ಬಾಡಿಗೆಯಿಂದಲೇ ಬರುತ್ತಿರುವ ಕೋಟ್ಯಂತರ ರೂಪಾಯಿ ಮೊತ್ತದ ಬಗ್ಗೆ ಮಾತನಾಡಿದ್ದರು.

600 ಕೋಟಿ ಆಸ್ತಿ, ತಿಂಗಳಿಗೆ ಕೋಟ್ಯಂತರ ರೂಪಾಯಿ ಬಾಡಿಗೆ: ಕೆಸಿಎನ್ ಮೋಹನ್ ಬಿಚ್ಚಿಟ್ಟಿದ್ದ ಆಸ್ತಿ ವಿವರ
ಕೆಸಿಎನ್ ಮೋಹನ್
Follow us on

ಜನಪ್ರಿಯ ನಿರ್ಮಾಪಕ, ಸಿನಿಮಾ ವಿತರಕ, ಪ್ರದರ್ಶಕ ಕೆಸಿಎನ್ ಮೋಹನ್ (KCN Mohan) ಇಂದು (ಜುಲೈ 2) ನಿಧನ ಹೊಂದಿದ್ದಾರೆ. ನವರಂಗ್ (Navarang), ಊರ್ವಶಿ (Urvasi) ದೊಡ್ಡಬಳ್ಳಾಪುರದ ರಾಜ್​ಕಮಲ್ ಚಿತ್ರಮಂದಿರದ ಮಾಲೀಕರಾಗಿದ್ದ ಕೆಸಿಎನ್ ಮೋಹನ್ ಈ ಹಿಂದೆ ಹಲವಾರು ಕನ್ನಡ ಸಿನಿಮಾಗಳ ವಿತರಣೆ ಮಾಡಿದ್ದರು. ಮೋಹನ್ ಅವರ ತಂದೆ ಕೆಸಿಎನ್ ಅವರು ಸಹ ಜನಪ್ರಿಯ ಸಿನಿಮಾ ನಿರ್ಮಾಪಕರು ಹಾಗೂ ವಿತರಕರಾಗಿದ್ದರು. ಕೆಲವು ತಿಂಗಳ ಹಿಂದೆ ಕೆಸಿಎನ್ ಮೋಹನ್ ನೀಡಿದ್ದ ಸಂದರ್ಶನದಲ್ಲಿ ತಮ್ಮ ಕುಟುಂಬದ ಆಸ್ತಿ ವಿವರಗಳನ್ನು ಬಿಚ್ಚಿಟ್ಟಿದ್ದರು.

ಕೆಸಿಎನ್ ಕುಟುಂಬ ನಷ್ಟದಲ್ಲಿದೆ, ಒಂದು ಮನೆ ಬಿಟ್ಟು ಅವರಿಗೆ ಇನ್ನೇನೂ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತವೆಯಲ್ಲ ಎಂಬ ಸಂದರ್ಶಕನ ಪ್ರಶ್ನೆಗೆ ನಕ್ಕುಬಿಟ್ಟಿದ್ದ ಮೋಹನ್, ಬೆಂಗಳೂರಿನ ಹೃದಯಭಾಗ ರೇಸ್​ಕೋರ್ಸ್ ವೃತ್ತದ ಬಳಿಯೇ ಸುಮಾರು ನಾಲ್ಕು ಎಕರೆ ಜಾಗ ನಮ್ಮದಿದೆ. ರೇಸ್​ಕೋರ್ಸ್ ರಸ್ತೆಯ ಕೆಲವು ಆಸ್ತಿಗಳಿಂದಲೇ ನಮಗೆ ತಿಂಗಳಿಗೆ ಒಂದು ಕೋಟಿಗೂ ಹೆಚ್ಚು ಬಾಡಿಗೆಯೇ ಬರುತ್ತದೆ. ಬೇರೆ ಕಡೆಗಳಲ್ಲಿನ ಆಸ್ತಿಗಳ ಬಾಡಿಗೆಯದ್ದು ಸೇರಿದರೆ ಆದಾಯದ ಮೊತ್ತ ಇನ್ನೂ ಹೆಚ್ಚಾಗುತ್ತದೆ ಎಂದಿದ್ದರು.

ದಶಕಗಳ ಹಿಂದೆ ಸಿನಿಮಾ ವಿತರಣೆಯ ಜೊತೆಗೆ ಬೆಂಗಳೂರಿನಲ್ಲಿ ಹಲವಾರು ಚಿತ್ರಮಂದಿರಗಳನ್ನು ಸ್ವತಃ ನೋಡಿಕೊಳ್ಳುತ್ತಿದ್ದರು ಮೋಹನ್, ಅವರೇ ಹೇಳಿಕೊಂಡಿರುವಂತೆ, ಹರಿ ಲಕ್ಷ್ಮಿ, ಊರ್ವಶಿ, ಶಿವಾಜಿ, ಸಾಗರ್, ನವರಂಗ್, ಗೋವರ್ಧನ್, ಗೋಪಾಲ್, ಭಾರತಿ, ಸ್ವಾಗತ್, ಚನ್ನಪಟ್ಟಣ ಶಿವಾನಂದ, ದೊಡ್ಡಬಳ್ಳಾಪುರ ರಾಜ್​ಕಮಲ್ ಚಿತ್ರಮಂದಿರಗಳನ್ನು ಅವರು ನಡೆಸುತ್ತಿದ್ದರು. ಇವುಗಳಲ್ಲಿ ಊರ್ವಶಿ, ನವರಂಗ್ ಹಾಗೂ ರಾಜ್​ಕಮಲ್ ಚಿತ್ರಮಂದಿರಗಳು ಅವರ ಸ್ವಂತದ್ದಾಗಿದ್ದವು.

ಇದನ್ನೂ ಓದಿ:KCN Mohan: ಊರ್ವಶಿ ಥಿಯೇಟರ್​ ಮಾಲಿಕ, ನಿರ್ಮಾಪಕ ಕೆಸಿಎನ್​ ಮೋಹನ್​ ನಿಧನ: ಕಂಬನಿ ಮಿಡಿದ ಚಿತ್ರರಂಗ

ಸಿನಿಮಾಗಳು ಮಾತ್ರವೇ ಅಲ್ಲದೆ ರೇಷ್ಮೆ ಉದ್ಯಮ ಹಾಗೂ ಎಕ್ಸ್​ಪೋರ್ಟ್ ಉದ್ಯಮವನ್ನೂ ಸಹ ಮೋಹನ್ ಹಾಗೂ ಅವರ ತಂದೆ ಕೆಸಿಎನ್ ಅವರು ನಡೆಸುತ್ತಿದ್ದರು. ಆ ಸಮಯದಲ್ಲಿ ವಿದೇಶದಿಂದ ಕೆಲವು ಆಂಗ್ಲ ಸಿನಿಮಾಗಳನ್ನು ಸಹ ಎಕ್ಸ್​ಪೋರ್ಟ್ ಮಾಡಿಸಿಕೊಂಡು ಇಲ್ಲಿ ಸೆನ್ಸಾರ್ ಮಾಡಿ ಪ್ರದರ್ಶಿಸಿದ್ದರಂತೆ. ಅಲ್ಲದೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾರ್ಟೂನ್ ಸಿನಿಮಾ ಪ್ರದರ್ಶಿಸಿದ್ದು ಸಹ ಮೋಹನ್​ ರವರೇ.

ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದ ಮೋಹನ್ ಅವರು, ತಂದೆಯವರು ಎಕರೆಗಟ್ಟಲೆ ಕಮರ್ಷಿಯಲ್ ಜಾಗವನ್ನು ಬೆಂಗಳೂರಿನಲ್ಲಿ ನಮಗಾಗಿ ಮಾಡಿಟ್ಟಿದ್ದಾರೆ. ನಾವು ಅದನ್ನು ಉಳಿಸಿಕೊಂಡು ಹೋಗುತ್ತಿದ್ದೇವೆ. ರೇಸ್​ಕೋರ್ಸ್, ಗಾಂಧಿ ನಗರ ಇನ್ನೂ ಕೆಲವು ಕಡೆಗಳಲ್ಲಿ ಜಾಗವನ್ನು ಖಾಲಿ ಬಿಟ್ಟಿದ್ದೇವೆ. ಅಲ್ಲಿಯೂ ಕಟ್ಟಡ ನಿರ್ಮಾಣ ಮಾಡಿದರೆ ಬಾಡಿಗೆ ಮೊತ್ತವೇ ತಿಂಗಳಿಗೆ ಎರಡು ಮೂರು ಕೋಟಿಗೂ ಹೆಚ್ಚು ಬರುತ್ತದೆ. ಕೆಸಿಎನ್ ಕುಟುಂಬದ ಒಟ್ಟು ಆಸ್ತಿ ಮೌಲ್ಯ 600 ಕೋಟಿಗೂ ಹೆಚ್ಚಿದೆ ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ