ಗೋವಾ ಚಿತ್ರೋತ್ಸವದಲ್ಲಿ ಪ್ರದರ್ಶನ ಆಗಲಿದೆ ಕನ್ನಡದ ‘ಕೆರೆಬೇಟೆ’, ‘ವೆಂಕ್ಯಾ’ ಸಿನಿಮಾ
ಗೋವಾ ಸಿನಿಮೋತ್ಸವದ ‘ಇಂಡಿಯನ್ ಪನೋರಮಾ’ ವಿಭಾಗದಲ್ಲಿ ಕನ್ನಡದ ‘ಕೆರೆಬೇಟೆ’ ಮತ್ತು ‘ವೆಂಕ್ಯಾ’ ಸಿನಿಮಾಗಳು ಪ್ರದರ್ಶನ ಕಾಣಲಿವೆ. ನವೆಂಬರ್ 20ರಿಂದ ನ.28ರವರೆಗೆ ಈ ಚಿತ್ರೋತ್ಸವ ನಡೆಯುತ್ತಿದ್ದು, ಆರಂಭಿಕ ಚಿತ್ರವಾಗಿ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಪ್ರದರ್ಶನ ಆಗಲಿದೆ. ಈ ಸಿನಿಮೋತ್ಸವಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಇದೆ.
ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ‘ಕೆರೆಬೇಟೆ’ ಹಾಗೂ ‘ವೆಂಕ್ಯಾ’ ಸಿನಿಮಾಗಳು ಆಯ್ಕೆಯಾಗಿದೆ. ಗೋವಾ ಫಿಲ್ಮ್ ಫೆಸ್ಟಿವಲ್ನ ‘ಭಾರತೀಯ ಪನೋರಮಾ’ ವಿಭಾಗದಲ್ಲಿ ಈ ಸಿನಿಮಾಗಳು ಪ್ರದರ್ಶನ ಕಾಣಲಿವೆ. ಗೋವಾದಲ್ಲಿ 55ನೇ ‘ಭಾರತೀಯ ಅಂತಾರಾಷ್ಟ್ರೀಯಾ ಸಿನಿಮೋತ್ಸವ’ ನವೆಂಬರ್ 20ರಿಂದ 28ರ ತನಕ ನಡೆಯಲಿದೆ. ಗೋವಾದ ಪಣಜಿಯಲ್ಲಿ ನಡೆಯುವ ಚಿತ್ರೋತ್ಸವದಲ್ಲಿ ದೇಶ ವಿದೇಶದ ಹಲವರು ಭಾಗಿ ಆಗಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಮನ್ನಣೆ ಹೊಂದಿರುವ ಈ ಸಿನಿಮೋತ್ಸವದಲ್ಲಿ ಕನ್ನಡ ಸಿನಿಮಾಗಳಾದ ‘ಕೆರೆಬೇಟೆ’ ಹಾಗೂ ‘ವೆಂಕ್ಯಾ’ ಪ್ರದರ್ಶನ ಕಾಣಲಿವೆ.
ಗೋವಾ ಫಿಲ್ಮ್ ಫೆಸ್ಟಿವಲ್ನಲ್ಲಿ ‘ಭಾರತೀಯ ಪನೋರಮಾ’ ವಿಭಾಗ ಪ್ರಮುಖವಾಗಿದೆ. ಇದರಲ್ಲಿ 25 ಕಥಾಚಿತ್ರ ಹಾಗೂ 20 ನಾನ್-ಫೀಚರ್ ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆ ಆಗಿದೆ. ಇಂಡಿಯನ್ ಪನೋರಮಾ ವಿಭಾಗದ ಆರಂಭಿಕ ಸಿನಿಮಾವಾಗಿ ಬಾಲಿವುಡ್ನ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ಪ್ರದರ್ಶನ ಆಗಲಿದೆ. ಎರಡನೇ ಸಿನಿಮಾವಾಗಿ ಕನ್ನಡದ ‘ಕೆರೆಬೇಟೆ’ ಆಯ್ಕೆ ಆಗಿದೆ.
ಆಯ್ಕೆದಾದ ಸಿನಿಮಾಗಳ ಪಟ್ಟಿಯ 3ನೇ ಸ್ಥಾನದಲ್ಲಿ ಕನ್ನಡದ ‘ವೆಂಕ್ಯಾ’ ಸಿನಿಮಾ ಇದೆ. ಈ ಸಿನಿಮಾಗೆ ಸಾಗರ್ ಪುರಾಣಿಕ್ ಅವರು ನಿರ್ದೇಶನ ಮಾಡಿದ್ದಾರೆ. ಭಾರತದ ಜನಪ್ರಿಯ ಸಿನಿಮಾಗಳನ್ನು ಕೂಡ ಆಯ್ಕೆ ಮಾಡಲಾಗಿದೆ. ಮಲಯಾಳ, ತಮಿಳು, ಮರಾಠಿ, ಬೆಂಗಾಲಿ, ತೆಲುಗು ಭಾಷೆಯ ಸಿನಿಮಾಗಳು ಪ್ರದರ್ಶನ ಕಾಣಲಿವೆ.
‘ಕೆರೆಬೇಟೆ’ ಸಿನಿಮಾಗೆ ರಾಜ್ಗುರು ಅವರು ನಿರ್ದೇಶನ ಮಾಡಿದ್ದಾರೆ. ಮಲೆನಾಡಿನ ಹಿನ್ನೆಲೆಯ ಕಥೆ ಇರುವ ಈ ಸಿನಿಮಾದಲ್ಲಿ ಗೌರಿ ಶಂಕರ್ ಅವರು ಹೀರೋ ಆಗಿ ನಟಿಸಿದ್ದಾರೆ. ಅವರೇ ನಿರ್ಮಾಣ ಕೂಡ ಮಾಡಿದ್ದಾರೆ. ಅವರ ಜೊತೆ ಬಿಂದು ಗೌಡ ಅವರು ನಾಯಕಿಯಾಗಿ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಕುಮಾರ್, ಹರಿಣಿ ಮುಂತಾದವರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: Kerebete Review: ಕುತೂಹಲಭರಿತ ಕೆರೆಬೇಟೆಯಲ್ಲಿ ಊಹಿಸಲಾಗದ ಟ್ವಿಸ್ಟ್
‘ಕಲ್ಕಿ 2898 ಎಡಿ’, ‘ಮಂಜುಮೇಲ್ ಬಾಯ್ಸ್’, ‘12th ಫೇಲ್’ ಮುಂತಾದ ಸಿನಿಮಾಗಳು ಕೂಡ ಆಯ್ಕೆ ಆಗಿದೆ. ನ್ಯಾಷನಲ್ ಫಿಲ್ಮ್ ಡೆವೆಲಪ್ಮೆಂಟ್ ಕಾರ್ಪೊರೇಷನ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಗೋವಾ ಸರ್ಕಾರದ ಸಹಯೋಗದಲ್ಲಿ ‘ಭಾರತೀಯ ಅಂತಾರಾಷ್ಟ್ರೀಯ ಸಿನಿಮೋತ್ಸವ’ ನಡೆಯಲಿದೆ. ನ.20ರಿಂದ ನ.28ರವರೆಗೆ ಹಲವು ಸಿನಿಮಾಗಳು ಪ್ರದರ್ಶನ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.