
ಭಾರತೀಯ ಚಿತ್ರರಂಗದ ಸೆನ್ಸೇಷನಲ್ ನಿರ್ದೇಶಕರ ಸಾಲಿನಲ್ಲಿ ಪ್ರಶಾಂತ್ ನೀಲ್ ಹೆಸರು ಕೂಡ ಮುಂಚೂಣಿಯಲ್ಲಿ ಕೇಳಿಬರುತ್ತದೆ. ‘ಕೆಜಿಎಫ್’ ಚಿತ್ರದ ಯಶಸ್ಸಿನ ನಂತರ ಅವರಿಗೆ ದೇಶಾದ್ಯಂತ ಖ್ಯಾತಿ ಹೆಚ್ಚಿದೆ. ಈಗ ಅವರು ಸಿನಿಮಾಗೆ ಸಂಬಂಧವೇ ಇಲ್ಲದ ಒಂದು ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ಕೊರೊನಾ ಲಸಿಕೆ ಪಡೆಯುತ್ತಿರುವ ಪ್ರಶಾಂತ್ ನೀಲ್ ಅವರ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಶಾಂತ್ ನೀಲ್ ಅವರ ಇನ್ನೊಂದು ಮುಖ ಕಂಡ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ದೇಶದೆಲ್ಲೆಡೆ ವ್ಯಾಪಿಸಿರುವ ಕೊರೊನಾ ವೈರಸ್ ಹಿಮ್ಮೆಟ್ಟಿಸಲು ವ್ಯಾಕ್ಸಿನ್ ಪಡೆಯುವುದೇ ಸೂಕ್ತ ಅಸ್ತ್ರ. ಹಾಗಾಗಿ ಎಲ್ಲರೂ ಮುಗಿಬಿದ್ದು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಲಸಿಕೆ ಪಡೆದ ನಂತರ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವುದು ಒಂದು ಬಗೆಯ ಟ್ರೆಂಡ್ ಆಗಿದೆ. ಪ್ರಶಾಂತ್ ನೀಲ್ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫೋಟೋ ಹಂಚಿಕೊಂಡರು. ಆದರೆ ಆ ಫೋಟೋದಲ್ಲಿ ಅವರ ಪೋಸ್ ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಲಸಿಕೆ ಪಡೆಯುವಾಗ ನರ್ಸ್ ಮುಖವನ್ನೇ ನೋಡುತ್ತಿದ್ದ ಯುವಕನೊಬ್ಬನ ಫೋಟೋ ಇತ್ತೀಚೆಗೆ ವೈರಲ್ ಆಗಿತ್ತು. ಅದೇ ರೀತಿ ಈಗ ಪ್ರಶಾಂತ್ ನೀಲ್ ಫೋಟೋ ಸಹ ವೈರಲ್ ಆಗಿದೆ.
ನರ್ಸ್ ಲಸಿಕೆ ಚುಚ್ಚುತ್ತಿದ್ದರೆ, ಪ್ರಶಾಂತ್ ನೀಲ್ ಮುಖ ಮುಚ್ಚಿಕೊಂಡಿದ್ದಾರೆ. ಇಷ್ಟು ಚಿಕ್ಕ ಇಂಜೆಕ್ಷನ್ಗೆ ಹೆದರಿಕೊಂಡು ಪ್ರಶಾಂತ್ ನೀಲ್ ಹೀಗೆ ಮಾಡಿದ್ದಾರಾ ಅಥವಾ ನರ್ಸ್ ಕಂಡು ಅವರು ನಾಚಿ ನೀರಾಗಿದ್ದಾರಾ? ಇಂಥ ಹಲವು ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಫೋಟೋಗೆ ಕಮೆಂಟ್ ಮಾಡುತ್ತಿರುವ ಜನರು ತಮಾಷೆಗೆ ಪ್ರಶಾಂತ್ ನೀಲ್ ಕಾಲೆಳೆಯುತ್ತಿದ್ದಾರೆ.
‘ಕೆಜಿಎಫ್’ ಸಿನಿಮಾದಲ್ಲಿ ಅಷ್ಟೆಲ್ಲ ಕ್ರೌರ್ಯ ತೋರಿಸುವ ನೀವು ಇಂಜೆಕ್ಷನ್ಗೆ ಭಯಪಡುತ್ತೀರಲ್ಲ. ಸಿನಿಮಾದಲ್ಲಿ ವಿಲನ್ಗಳನ್ನು ಚಚ್ಚಿಹಾಕಿದ್ದೇನೆ ಎಂದು ಬೀಗಬೇಡ. ವ್ಯಾಕ್ಸಿನ್ ಪಡೆಯುವಾಗ ಹೆದರಿಕೊಂಡಿದ್ದನ್ನು ನಾನು ನೋಡಿದ್ದೇನೆ ಎಂಬಿತ್ಯಾದಿ ಕಮೆಂಟ್ಗಳು ಬರುತ್ತಿವೆ. ಅಲ್ಲದೆ, ಈ ಫೋಟೋ ಇಟ್ಟುಕೊಂಡು ಹಲವು ಮೀಮ್ಗಳನ್ನು ಮಾಡಲಾಗುತ್ತಿದೆ.
‘ಕೊನೆಗೂ ವಾಕ್ಸಿನ್ ಪಡೆದುಕೊಂಡೆ. ನೀವು ಇನ್ನೂ ಪಡೆದುಕೊಳ್ಳದೇ ಇದ್ದರೆ ದಯವಿಟ್ಟು ಸ್ಲಾಟ್ ಬುಕ್ ಮಾಡಿಕೊಂಡು ಫ್ಯಾಮಿಲಿ ಜೊತೆ ಲಸಿಕೆ ಹಾಕಿಸಿಕೊಳ್ಳಿ’ ಎಂದು ಎಲ್ಲರಲ್ಲೂ ಪ್ರಶಾಂತ್ ನೀಲ್ ಮನವಿ ಮಾಡಿದ್ದಾರೆ. ಸದ್ಯ ಅವರು ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಲಾರ್ ಸಿನಿಮಾದ ಮೇಲೂ ಗಮನ ಹರಿಸಿದ್ದಾರೆ.
ಇದನ್ನೂ ಓದಿ:
ಪ್ರಶಾಂತ್ ನೀಲ್ ಜನ್ಮದಿನ; ಪ್ರೀತಿಯಿಂದ ಶುಭಕೋರಿದ ಜ್ಯೂ. ಎನ್ಟಿಆರ್ ಕಾಯುತ್ತಿರುವುದು ಆ ಒಂದು ಕ್ಷಣಕ್ಕಾಗಿ
ಕೆಜಿಎಫ್ 2-ಸಲಾರ್ಗೂ ಇದೆ ಲಿಂಕ್; ವಿಶೇಷ ವಿಚಾರ ಬಿಚ್ಚಿಟ್ಟ ಪ್ರಶಾಂತ್ ನೀಲ್