ಸುದೀಪ್ ವಿರುದ್ಧ ವಂಚನೆ ಆರೋಪ: ನಿರ್ಮಾಪಕ ಸುರೇಶ್​ಗೆ ನ್ಯಾಯಾಲಯದಲ್ಲಿ ಹಿನ್ನಡೆ

|

Updated on: Mar 27, 2024 | 3:32 PM

Kichcha Sudeep: ನಟ ಕಿಚ್ಚ ಸುದೀಪ್ ವಿರುದ್ಧ ವಂಚನೆ, ಮೋಸದ ಆರೋಪ ಮಾಡಿದ್ದ ನಿರ್ಮಾಪಕರುಗಳಿಗೆ ಕರ್ನಾಟಕ ಹೈಕೋರ್ಟ್​ನಲ್ಲಿ ಹಿನ್ನಡೆ ಉಂಟಾಗಿದೆ. ಪ್ರಕರಣ ರದ್ದತಿಗೆ ಮಾಡಿದ್ದ ಮನವಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ.

ಸುದೀಪ್ ವಿರುದ್ಧ ವಂಚನೆ ಆರೋಪ: ನಿರ್ಮಾಪಕ ಸುರೇಶ್​ಗೆ ನ್ಯಾಯಾಲಯದಲ್ಲಿ ಹಿನ್ನಡೆ
ಕಿಚ್ಚ ಸುದೀಪ್
Follow us on

ನಟ ಸುದೀಪ್ (Kichcha Sudeep) ಅವರ ವಿರುದ್ಧ ವಂಚನೆ, ಮೋಸದ ಆರೋಪ ಮಾಡಿದ್ದ ನಿರ್ಮಾಪಕ ಎನ್​ಎಂ ಸುರೇಶ್​ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ಹಿನ್ನಡೆ ಉಂಟಾಗಿದೆ. ಸುದೀಪ್ ವಿರುದ್ಧ ಪ್ರತಿಭಟನೆ ನಡೆಸಿ, ವಂಚನೆ, ಮೋಸ, ಅಕ್ರಮ ಆಸ್ತಿ ಗಳಿಕೆ ಆರೋಪಗಳನ್ನು ಮಾಧ್ಯಮಗಳ ಮುಂದೆ ಮಾಡಿದ್ದ ಎನ್​ಎಂ ಸುರೇಶ್​ ವಿರುದ್ಧ ನಟ ಕಿಚ್ಚ ಸುದೀಪ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ತಮ್ಮ ವಿರುದ್ಧ ಕಿಚ್ಚ ಸುದೀಪ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದು ಮಾಡಬೇಕೆಂದು ಸುರೇಶ್ ಕರ್ನಾಟಕ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ಮೊಕದ್ದಮೆಯನ್ನು ರದ್ದು ಮಾಡಲಾಗದು ಎಂದಿದೆ.

ಚಲನಚಿತ್ರ ನಿರ್ಮಾಪಕ ಸಂಘದ ಪದಾಧಿಕಾರಿ, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಕಾರ್ಯದರ್ಶಿ ಎನ್​ಎಂ ಸುರೇಶ್, ಕುಮಾರ್ ಅವರುಗಳು ಸುದೀಪ್ ವಿರುದ್ಧ ಹಣ ವಂಚನೆ ಆರೋಪ ಮಾಡಿದ್ದರು. ತಮ್ಮಿಂದ ಹಣ ಪಡೆದು ಮರಳಿ ನೀಡದೆ ವಂಚನೆ ಮಾಡಿದ್ದಾರೆ. ಸಿನಿಮಾ ಮಾಡಲು ಡೇಟ್ಸ್ ಸಹ ನೀಡಿಲ್ಲ ಎಂದು ಆರೋಪ ಮಾಡಿದ್ದರು. ಮಾಧ್ಯಮಗಳ ಮುಂದೆ ಸುದೀಪ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಸುದೀಪ್, ತಾವು ಇದನ್ನು ನ್ಯಾಯಾಲಯದ ಮೂಲಕ ಎದುರಿಸುವುದಾಗಿ ಹೇಳಿ ಸುರೇಶ್ ಹಾಗೂ ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಇದನ್ನೂ ಓದಿ:ವಂಚನೆ ಆರೋಪ ಮಾಡಿದ್ದ ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಕಿಚ್ಚ ಸುದೀಪ್

ತಮ್ಮ ವಿರುದ್ಧ ಐಪಿಸಿ ಸೆಕ್ಷನ್‌ 499 ಮತ್ತು 500ರ ಅಡಿ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಪ್ರಕರಣ ರದ್ದುಪಡಿಸುವಂತೆ ಕೋರಿ ಸುರೇಶ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ವಜಾ ಮಾಡಿದೆ. ಸುದೀಪ್ ವಿರುದ್ಧ ಆರೋಪಿಗಳು ನಿರ್ದಿಷ್ಟ ಆರೋಪಗಳನ್ನು ಮಾಡಿರುವುವುದು ಸ್ಪಷ್ಟವಾಗಿದೆ. ದೂರುದಾರರ ಪ್ರಕಾರ ಆ ಆರೋಪಗಳಿಂದ ಸಾಮಾಜಿಕವಾಗಿ ಅವರ ಮಾನಹಾನಿಯಾಗಿದೆ. ಇದೇ ಕಾರಣಕ್ಕೆ ವಿಚಾರಣಾಧೀನ ನ್ಯಾಯಾಲಯವು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದೆ. ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಲಿ, ತಪ್ಪಾಗಲಿ ಇಲ್ಲ ಎಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

ಸುದೀಪ್‌ ಪರ ವಾದ ಮಂಡಿಸಿದ ವಕೀಲ ರಂಗಸ್ವಾಮಿ “ಸುರೇಶ್‌, ಮಾಧ್ಯಮಗೋಷ್ಠಿ ನಡೆಸುವ ಮೂಲಕ ಸುದೀಪ್‌ ಅವರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ. ಸುರೇಶ್‌ ಅವರ ಹೇಳಿಕೆ ಬೆನ್ನಲ್ಲೆ ಸುದೀಪ್​ರ ಹಲವು ಸ್ನೇಹಿತರು ಮತ್ತು ಬಂಧು-ಬಾಂಧವರು ಸುದೀಪ್‌ ಅವರಿಗೆ ಕರೆ ಮಾಡಿ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ವಿಚಾರಿಸಿದ್ದಾರೆ. ಇದು ಸಮಾಜದಲ್ಲಿ ಅವರ ಘನತೆಗೆ ಕುಂದುಂಟು ಮಾಡಿದೆ. ಆರೋಪಿಗಳಾದ ಎನ್‌ ಎಂ ಸುರೇಶ್‌ ಮತ್ತು ಎನ್‌ ಎಂ ಕುಮಾರ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ಗಳನ್ನು ಸಹ ಹಾಕಿದ್ದಾರೆ ಅಲ್ಲದೆ ಸುದೀಪ್‌ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ” ಎಂದಿದ್ದಾರೆ.

ಸುರೇಶ್‌ ಪರ ವಕೀಲೆ ಎ ಎಲ್‌ ಪ್ರಶಾಂತಿ ಅವರು “ಸುದೀಪ್‌ ಮತ್ತು ಎನ್‌ ಎಂ ಕುಮಾರ್‌ ನಡುವೆ ವಿವಾದವಿದ್ದು, ಸುರೇಶ್‌ ಅವರು ಕನ್ನಡ ಚಿತ್ರ ನಿರ್ಮಾಪಕರ ಸಂಘದ ಪದಾಧಿಕಾರಿ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎಂಬ ಕಾರಣಕ್ಕೆ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅವರ ವಿರುದ್ಧ ಯಾವುದೇ ದಾಖಲೆಗಳು ಇಲ್ಲ. ಇದನ್ನು ಪರಿಶೀಲಿಸದೇ ಸಮನ್ಸ್‌ ಜಾರಿ ಮಾಡುವ ಮೂಲಕ ವಿಚಾರಣಾಧೀನ ನ್ಯಾಯಾಲಯ ಪ್ರಮಾದ ಎಸಗಿದೆ” ಎಂದು ವಾದಿಸಿದ್ದರು. ಆದರೆ ಹೈಕೋರ್ಟ್ ನ್ಯಾಯಮೂರ್ತಿಗಳು, ವಿಚಾರಣಾಧೀನ ನ್ಯಾಯಾಲಯವು ಇದನ್ನು ತಳ್ಳಿ ಹಾಕಿದ್ದು ಸಮನ್ಸ್ ಜಾರಿ ಮಾಡಿದರಲ್ಲಿ ಯಾವುದೇ ಪ್ರಮಾದ ಆಗಿಲ್ಲ ಎಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ