ಬೀದಿ ನಾಯಿಗಳ ಕುರಿತು ಸುಪ್ರೀಂ ಆದೇಶ: ಸುದೀಪ್ ಕೊಟ್ಟರು ಮೌಲ್ಯಯುತ ಸಲಹೆ

Kichcha Sudeep: ಬೀದಿನಾಯಿಗಳನ್ನು ಸ್ಥಳಾಂತರಿಸುವ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಬಗ್ಗೆ ದೇಶದಾದ್ಯಂತ ಚರ್ಚೆ ಎದ್ದಿದೆ. ಪರ-ವಿರೋಧ ಚರ್ಚೆಗಳು ಚಾಲ್ತಿಯಲ್ಲಿವೆ. ಹಲವು ರಾಜಕಾರಣಿಗಳು, ನಟ-ನಟಿಯರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದೀಗ ನಟ ಸುದೀಪ್ ಬೀದಿ ಶ್ವಾನಗಳ ಕುರಿತು ಒಂದೊಳ್ಳೆ ಸಲಹೆ ನೀಡಿದ್ದಾರೆ.

ಬೀದಿ ನಾಯಿಗಳ ಕುರಿತು ಸುಪ್ರೀಂ ಆದೇಶ: ಸುದೀಪ್ ಕೊಟ್ಟರು ಮೌಲ್ಯಯುತ ಸಲಹೆ
Sudeep

Updated on: Aug 13, 2025 | 3:07 PM

ದೇಶದೆಲ್ಲೆಡೆ ಈಗ ನಾಯಿಗಳದ್ದೇ ಚರ್ಚೆ. ಆಗಸ್ಟ್ 11 ರಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಹಲವು ರೀತಿಯ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ. ದೆಹಲಿಯಲ್ಲಿ ಹೆಚ್ಚಾದ ನಾಯಿ ದಾಳಿ ಪ್ರಕರಣವನ್ನು ಗಮನಿಸಿ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದು ಸುಪ್ರೀಂಕೋರ್ಟ್, ಆಗಸ್ಟ್ 11 ರಂದು ಆದೇಶವೊಂದನ್ನು ಪ್ರಕಟಿಸಿದೆ. ದೆಹಲಿ ಸರ್ಕಾರವು, ದೆಹಲಿಯಲ್ಲಿರುವ ಎಲ್ಲ ಬೀದಿನಾಯಿಗಳನ್ನು ಸ್ಥಳಾಂತರಗೊಳಿಸಿ ಅವುಗಳಿಗೆ ನೆಲೆ ಕಲ್ಪಿಸಬೇಕು ಎಂದಿದೆ. ಸಿಎಂ ರೇಖಾ ಗುಪ್ತಾ ಅವರು, ಸುಪ್ರೀಂ ಆದೇಶವನ್ನು ಪಾಲಿಸುವುದಾಗಿ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಶ್ವಾನಪ್ರಿಯರು ಸುಪ್ರೀಂಕೋರ್ಟ್ ಆದೇಶವನ್ನು ಅರ್ಥಹೀನ, ಮಾನವೀಯತೆ ರಹಿತ, ಅವಸರದ ತೀರ್ಪು ಎಂದು ಟೀಕಿಸಿದ್ದಾರೆ. ಇನ್ನು ಕೆಲವರು ಸುಪ್ರೀಂ ಆದೇಶವನ್ನು ಸ್ವಾಗತಿಸಿದ್ದಾರೆ. ಕರ್ನಾಟಕದಲ್ಲಿಯೂ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಜೋರಾದ ಚರ್ಚೆಗಳು ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ನಡೆಯುತ್ತಿವೆ. ಸಿನಿಮಾ ನಟ-ನಟಿಯರೂ ಸಹ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನಟ ಸುದೀಪ್ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ನವದೆಹಲಿಯಲ್ಲಿನ ಬೀದಿ ನಾಯಿಗಳನ್ನು ಸ್ಥಳಾಂತರಗೊಳಿಸುವ ಬಗೆಗಿನ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನಾನು ಏನೂ ಪ್ರಶ್ನೆ ಮಾಡುವುದಿಲ್ಲ. ಅದಕ್ಕೆ ಅದರದ್ದೇ ಆದ ಕಾರಣಗಳು ಇರಬಹುದು. ಆದರೆ ಆ ಆದೇಶವು, ಶ್ವಾನಗಳ ಆರೋಗ್ಯ, ಅವುಗಳ ಜೀವನ ಚಕ್ರದ ಮೇಲಾಗುವ ಬದಲಾವಣೆಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟು ಮಾಡುತ್ತವೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ’ ಎಂದಿದ್ದಾರೆ. ಆ ಮೂಲಕ ಶ್ವಾನಗಳನ್ನು ಆಶ್ರಯ ತಾಣಗಳಲ್ಲಿ ಇಡುವುದು ಅವುಗಳ ಸ್ವಾತಂತ್ರ್ಯ ಹರಣ ಮಾಡಿದ ಹಾಗಾಗುತ್ತದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಇದನ್ನೂ ಓದಿ:Raj B Shetty: ‘ಸಮಾಜವೇ ಜವಾಬ್ದಾರಿ ತೆಗೆದುಕೊಳ್ಳಬೇಕು’; ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ ಬಿ. ಶೆಟ್ಟಿ ಪೋಸ್ಟ್

ಮುಂದುವರೆದು, ‘ಬೀದಿ ನಾಯಿಗಳು ಸಾಧಾರಣವಾಗಿದ್ದ ಸಮಾಜದಲ್ಲಿ ನಾನು ಬೆಳೆದಿದ್ದು, ಅಲ್ಲದೆ ನಮ್ಮ ಕುಟುಂಬದವರು ಕೆಲವಾರು ಬೀದಿ ನಾಯಿಗಳನ್ನು ದತ್ತು ಪಡೆದು ಸಾಕುತ್ತಿದ್ದೇವೆ. ಶ್ವಾನಗಳು ನಮಗೆ ನೀಡುವ ಪ್ರೀತಿ ಮತ್ತು ನಿಷ್ಠೆ ಅಪಾರವಾದುದು. ಅವುಗಳು ಬೀದಿಯಲ್ಲಿ ಬೆಳೆಯುವುದನ್ನು ಬಯಸಿದ್ದಲ್ಲ, ಆದರೆ ನಾವುಗಳು ಮನಸ್ಸು ಮಾಡಿದರೆ ಅವುಗಳಿಗೆ ಮನೆ ನೀಡಬಹುದು. ಧ್ವನಿ ಇಲ್ಲದ ಜೀವಿಗಳಿಗೆ ನಾವು ಧ್ವನಿ ಆಗೋಣ, ಬೀದಿ ನಾಯಿಗಳನ್ನು ದತ್ತು ಪಡೆಯೋಣ’ ಎಂದಿದ್ದಾರೆ.

ಸುದೀಪ್ ಮಾತ್ರವಲ್ಲದೆ ನಟ, ನಿರ್ದೇಶಕ, ನಿರ್ಮಾಪಕ ರಾಜ್ ಬಿ ಶೆಟ್ಟಿ ಅವರು ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ‘‘ಶ್ವಾನಗಳ ಜೊತೆ ಇರುವ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ರಾಜ್, ಇವು ನನಗೆ ನೆಮ್ಮದಿ ನೀಡುವ ಜೀವಿಗಳು. ನನಗೆ ಮಾತ್ರವಲ್ಲ ನನ್ನಂತಹ ಅದೆಷ್ಟೋ ಅಸಂಖ್ಯ ಜನರಿಗೆ ಇವು ನೋವನ್ನು ಗುಣಪಡಿಸುವ ಶಕ್ತಿ ಹೊಂದಿವೆ. ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಸುಪ್ರೀಂಕೋರ್ಟ್ ಈ ಆದೇಶವನ್ನು ಬದಲಾಯಿಸುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ರಾಜ್ ಬರೆದುಕೊಂಡಿದ್ದಾರೆ. ಇದರ ಜೊತೆಗೆ ರಾಜ್ ಅವರು ವಿಶೇಷ ಮನವಿ ಒಂದನ್ನು ಇಟ್ಟಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:04 pm, Wed, 13 August 25