
ಕಿಚ್ಚ ಸುದೀಪ್ ಅವರದ್ದು ಬಹುಮುಖ ಪ್ರತಿಭೆ. ನಟನೆ, ನಿರ್ದೇಶನ, ಸಿನಿಮಾ ನಿರ್ಮಾಣ, ರಿಯಾಲಿಟಿ ಶೋ ನಿರೂಪಣೆ, ಅಡುಗೆ ಸೇರಿದಂತೆ ಹಲವು ವಿಷಯಗಳಲ್ಲಿ ಅವರು ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಇನ್ನು, ಕ್ರೀಡೆಯಲ್ಲೂ ಅವರಿಗೆ ಇರುವ ಆಸಕ್ತಿ ಅಪಾರ. ವೃತ್ತಿಪರ ಕ್ರಿಕೆಟರ್ಗಳ ಜೊತೆ ಅವರು ಮೈದಾನದಲ್ಲಿ ಕಾದಾಡಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಮಿಂಚಿದ್ದಾರೆ. ಅಷ್ಟೇ ಅಲ್ಲ, ಈಗ ಅವರು ಚೆಸ್ನಲ್ಲಿ ಗಮನ ಸೆಳೆಯಲು ಸಜ್ಜಾಗಿದ್ದಾರೆ.
ಭಾರತೀಯರಿಗೆ ಚೆಸ್ ಎಂದ ತಕ್ಷಣ ನೆನಪಾಗುವುದು ವಿಶ್ವನಾಥನ್ ಆನಂದ್. 5 ಬಾರಿ ವರ್ಲ್ಡ್ ಚಾಂಪಿಯನ್ ಆದ ವಿಶ್ವನಾಥನ್ ಆನಂದ್ ಅವರ ಖ್ಯಾತಿ ದೊಡ್ಡದು. ಚೆಸ್ನಲ್ಲಿ ಅವರಿಗೆ ಪೈಪೋಟಿ ನೀಡುವುದು ಎಂದರೆ ಸುಲಭದ ಮಾತಲ್ಲ. ಈಗ ಅವರ ಜೊತೆ ಕಿಚ್ಚ ಸುದೀಪ್ ಸ್ಪರ್ಧೆ ನಡೆಸಲಿದ್ದಾರೆ! ಅದಕ್ಕಾಗಿ ಅಖಾಡ ಸಜ್ಜಾಗಿದೆ.
ಅರೆರೆ, ಇದೇನಿದು ಏಕಾಏಕಿ ಇಂಥ ಆಟ ಎಂದು ಅಭಿಮಾನಿಗಳ ಮನದಲ್ಲಿ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಉತ್ತರವೂ ಇಲ್ಲಿದೆ. ವಿಶ್ವನಾಥನ್ ಆನಂದ್ ಜೊತೆ ಸುದೀಪ್ ಚೆಸ್ ಆಡಲಿರುವುದು ಒಂದು ಒಳ್ಳೆಯ ಉದ್ದೇಶಕ್ಕಾಗಿ. ಕೊವಿಡ್ನಿಂದಾಗಿ ಇಡೀ ದೇಶವೇ ಕಷ್ಟದ ಪರಿಸ್ಥಿತಿಯಲ್ಲಿದೆ. ಕೊರೊನಾ ವಿರುದ್ಧ ಹೋರಾಡಲು ಹಣ ಸಂಗ್ರಹ ಮಾಡುವ ಸಲುವಾಗಿ ಈ ಆಟ ಆಯೋಜಿಸಲಾಗಿದೆ.
ಜೂ.13ರಂದು ಸಂಜೆ 5 ಗಂಟೆಗೆ ‘ಚೆಕ್ಮೇಟ್ ಕೊವಿಡ್- ಸೆಲೆಬ್ರಿಟಿ ಎಡಿಷನ್’ ಆರಂಭ ಆಗಲಿದೆ. ಇದರಲ್ಲಿ ವಿಶ್ವನಾಥನ್ ಆನಂದ್ ಜೊತೆ ಕಿಚ್ಚ ಸುದೀಪ್ ಮಾತ್ರವಲ್ಲದೆ ಅನೇಕ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಬಾಲಿವುಡ್ ನಟ ಆಮೀರ್ ಖಾನ್ ಕೂಡ ವಿಶ್ವನಾಥನ್ ಆನಂದ್ಗೆ ಪೈಪೋಟಿ ನೀಡಲಿದ್ದಾರೆ. ಆ ಮೂಲಕ ನಿಧಿ ಸಂಗ್ರಹ ಮಾಡಲು ಉದ್ದೇಶಿಸಲಾಗಿದೆ.
ಇಷ್ಟು ದಿನ ಕ್ರಿಕೆಟ್ ಮೈದಾನದಲ್ಲಿ ಕಿಚ್ಚನ ಖದರ್ ನೋಡಿದವರು ಈಗ ಚೆಸ್ನಲ್ಲಿ ಅವರ ಪ್ರತಿಭೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಅಕ್ಷಯ ಪಾತ್ರಾ ಫೌಂಡೇಶನ್ ಹಾಗೂ ಚೆಸ್ ಡಾಟ್ ಕಾಮ್ ಜೊತೆಯಾಗಿ ಈ ಆಟವನ್ನು ಆಯೋಜಿಸಿವೆ. Chess.com – India ಯೂಟ್ಯೂಬ್ ಚಾನೆಲ್ನಲ್ಲಿ ಆಟ ಪ್ರಸಾರ ಆಗಲಿದೆ.
ಇದನ್ನೂ ಓದಿ:
ಸುದೀಪ್ಗೆ ಅಚ್ಚರಿ ಮೂಡಿಸಿದ ‘ವಿಕ್ರಾಂತ್ ರೋಣ’ ಪೋಸ್ಟರ್; ಚಿತ್ರತಂಡಕ್ಕೂ ಇದಕ್ಕೂ ಸಂಬಂಧವಿಲ್ಲ
ಅನ್ನ ಅಮೃತ’ ಕಾರ್ಯಕ್ರಮದ ಮೂಲಕ 1 ಸಾವಿರ ಜನರಿಗೆ ಕಿಚ್ಚ ಸುದೀಪ್ ಕಡೆಯಿಂದ ದಿನಸಿ ಕಿಟ್
Published On - 8:08 am, Sat, 12 June 21