
ವರ್ತೂರು ಸಂತೋಷ್ ಅವರು ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಾಗ ಅವರು ಧರಿಸಿದ್ದ ಹುಲಿ ಉಗುರು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಈ ವಿಷಯದಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈಗ ಕನ್ನಡ ಕಿರುತೆರೆಯ ಜನಪ್ರಿಯ ನಟ ಕಿಶನ್ ಬಿಳಗಲಿ ಹಾಗೂ ನಟಿ ನಿವೇದಿತಾ ಗೌಡ ನವಿಲುಗರಿ ಬಳಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಗೆ ದೂರು ದಾಖಲಾಗಿದೆ. ಇತ್ತೀಚೆಗಷ್ಟೇ ನವಿಲು ಗರಿಗಳನ್ನು ಬಳಸಿ ಸಿದ್ಧಪಡಿಸಲಾಗಿದ್ದ ಉಡುಪುಗಳನ್ನು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಹಂಚಿಕೊಂಡಿದ್ದ ಈ ಜೋಡಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ದೂರು ನೀಡಿದ್ದಾರೆ.
ನಟ ಕಿಶನ್ ಹಾಗೂ ನಿವೇದಿತಾ ಗೌಡ ಅವರು ನಾಲ್ಕೈದು ದಿನಗಳ ಹಿಂದೆ ನವಿಲು ಗರಿಗಳಿರುವ ಉಡುಪು ಧರಿಸಿ ರೀಲ್ಸ್ ಮಾಡಿದ್ದರು. ಇದನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ನೈಜ ನವಿಲು ಗರಿಗಳನ್ನು ಬಳಸಿ ಉಡುಪು ತಯಾರಿಸಿ ಸಾರ್ವಜನಿಕವಾಗಿ ಪ್ರದರ್ಶಿಸಿರುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿರುವುದು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು ಪ್ರಾದೇಶಿಕ ನಗರ ವಿಭಾಗದ ವ್ಯಾಪ್ತಿಯ ಕಗ್ಗಲಿಪುರ ಅರಣ್ಯ ವಲಯ ಅಧಿಕಾರಿಗಳಿಗೆ ದಿನೇಶ್ ತಮ್ಮ ದೂರನ್ನು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ. ಅಲ್ಲದೆ, ತನಿಖೆಯ ಅವಧಿಯಲ್ಲಿ ಯಾವುದೇ ರಾಜಕೀಯ ಪ್ರಭಾವ ಅಥವಾ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಪಾರದರ್ಶಕವಾಗಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:12 pm, Tue, 23 June 26