
ಕೋಮಲ್ ಕುಮಾರ್, ಮೇಘನಾ ರಾಜ್, ಅನುಷಾ ರೈ ಅವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಸಿನಿಮಾದ ಶೂಟಿಂಗ್ ಮುಗಿದಿದೆ. ಅಲ್ಲದೇ, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಬಹುತೇಕ ಪೂರ್ಣಗೊಂಡಿವೆ. ಇದೀಗ ಚಿತ್ರತಂಡ ನಿಧಾನವಾಗಿ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ಅದರ ಮೊದಲ ಹಂತವಾಗಿ ‘30 ಎಂ.ಎಲ್’ ಹೆಸರಿನಲ್ಲಿ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಮೋಷನ್ ಪೋಸ್ಟರ್ನಲ್ಲಿ ಹೀರೋ ಕೋಮಲ್ ಅವರು ಆಸ್ಥಾನವೊಂದರ ವರ್ಣಚಿತ್ರ ಕಲಾವಿದನಾಗಿ, ಮೇಘನಾ ರಾಜ್ ಅವರು ರಾಣಿಯಾಗಿ ಕಾಣಿಸಿಕೊಂಡಿದ್ದಾರೆ.
‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಸಿನಿಮಾಗೆ ಸಂದೇಶ್ ಶೆಟ್ಟಿ ಆಜ್ರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ವಿಕಾಸ್ ಶೆಟ್ಟಿ ಅವರು ಬಂಡವಾಳ ಹೂಡಿದ್ದಾರೆ. ಬಿಗ್ ಬಜೆಟ್ನಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಎರಡು ಕಾಲಘಟ್ಟದ ಕಥೆಯನ್ನು ಹೇಳಲಾಗುತ್ತಿದೆ. ಎರಡು ಹಂತಗಳಲ್ಲಿ 75 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಕುಂದಾಪುರ, ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬಹುತೇಕ ಚಿತ್ರೀಕರಣ ನಡೆದಿದೆ.
ಕುಂದಾಪುರದ ಅಂಪಾರಿನ ವಾಲ್ತೂರು ಗ್ರಾಮದಲ್ಲಿ 7 ವಿಭಿನ್ನ ವಿನ್ಯಾಸದ ಬೃಹತ್ ಸೆಟ್‌ಗಳನ್ನು ನಿರ್ಮಿಸಿ, ಅದರಲ್ಲಿ ಸಿನಿಮಾದ ಬಹುಭಾಗ ಶೂಟಿಂಗ್ ಮಾಡಲಾಗಿರುವುದು ವಿಶೇಷ. ಶೇಕಡ 90ರಷ್ಟು ಚಿತ್ರೀಕರಣವನ್ನು ಈ ಸೆಟ್‌ಗಳಲ್ಲಿಯೇ ಚಿತ್ರೀಕರಿಸಲಾಗಿದೆ. ಈ ಸಿನಿಮಾದ ಹೆಸರು ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಅಂತಿದ್ದರೂ, ಇನ್ನೊಂದು ಟೈಟಲ್ ಕೂಡ ಇದೆ ಎಂದು ಚಿತ್ರತಂಡ ಹೇಳಿದೆ.
‘ಎರಡು ಶೀರ್ಷಿಕೆ ಇರಲು ಕಾರಣವೇ ಈ ಚಿತ್ರದ ಕಥಾಹಂದರ. ಸಿನಿಮಾದ ಮೊದಲಾರ್ಧ ಬಾರ್‌ನಲ್ಲಿ ನಡೆಯುತ್ತದೆ. ದ್ವಿತೀಯಾರ್ಧ ದೇವರ ತಾಣದಲ್ಲಿ ಶುರುವಾಗಿ ಅಲ್ಲೇ ಮುಗಿಯುತ್ತದೆ. ಹಾಗಾಗಿ ಚಿತ್ರದ ಮೊದಲಾರ್ಧ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಆಗಿದ್ದರೆ, ದ್ವಿತೀಯಾರ್ಧ ‘ದೇವರ ತಾಣ’ ಅಂತಿದೆ. ಈ ಎರಡೂ ಹೆಸರುಗಳು ಕೂಡ ನಮ್ಮ ಸಿನಿಮಾಗಿವೆ. ಆದರೆ ಸೆನ್ಸಾರ್ ನಿಯಮದಂತೆ ಒಂದು ಸಿನಿಮಾಕ್ಕೆ ಒಂದೇ ಹೆಸರು ಇಡಬೇಕಾಗಿರುವುದರಿಂದ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಹೆಸರಿನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ’ ಎಂದು ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಹೇಳಿದ್ದಾರೆ.
ಇದನ್ನೂ ಓದಿ: ಮುಗಿಯಿತು ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಸಿನಿಮಾದ ಶೂಟಿಂಗ್
ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಉತ್ಸವ್, ವಜ್ರಧೀರ್ ಜೈನ್, ಕಾರ್ತಿಕ್ ರಾವ್, ಸಿರಿಜಾ, ರಘು ರಾಮನಕೊಪ್ಪ, ವರ್ಧನ್, ಕರಣ್, ರಾಧಿಕಾ ರಾವ್ ಅಕ್ಷತಾ, ದಿವ್ಯಶ್ರೀ, ಅರಸು, ನಾಗರಾಜ್, ಮಹೇಶ್, ಚಿತ್ರಕಲಾ, ಉಮೇಶ್ ಕಿನ್ನಾಳ್, ಮನೀಶ್ ಶೆಟ್ಟಿ, ಪ್ರಶಾಂತ್ ಸಿದ್ದಿ, ಎಂ.ಕೆ. ಮಠ, ರಾಧಾಕೃಷ್ಣ, ಮಹಾಬಲೇಶ್ವರ ಭಟ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.