ಖ್ಯಾತ ನಟ ಡಾಲಿ ಧನಂಜಯ್ (Daali Dhananjay) ಹಾಗೂ ನಿರ್ದೇಶಕ ಪರಮ್ (Param) ಅವರ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ‘ಕೋಟಿ’ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದೆ. ‘ಮಾತು ಸೋತು..’ ಎಂಬ ಈ ಗೀತೆಗೆ ವಾಸುಕಿ ವೈಭವ್ ಅವರು ಸಂಗೀತ ನೀಡಿದ್ದಾರೆ. ಹಲವಾರು ಸೂಪರ್ ಹಿಟ್ ಹಾಡುಗಳನ್ನು ಬರೆದಿರುವ ಯೋಗರಾಜ್ ಭಟ್ ಅವರು ‘ಮಾತು ಸೋತು..’ ಗೀತೆಯನ್ನು ಬರೆದಿದ್ದಾರೆ. ಅರ್ಮಾನ್ ಮಲಿಕ್ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ‘ಕೋಟಿ’ ಸಿನಿಮಾ (Kotee Kannada Movie) ಆಡಿಯೋ ಹಕ್ಕುಗಳನ್ನು ‘ಸರೆಗಮ’ ಸಂಸ್ಥೆ ಖರೀದಿಸಿದೆ. ಈ ಹೊಸ ಹಾಡಿನ ಲಿರಿಕಲ್ ವಿಡಿಯೋವನ್ನು ‘ಸರೆಗಮ ಕನ್ನಡ’ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆ ಮಾಡಲಾಗಿದೆ.
ಈ ಗೀತೆಯ ಬಗ್ಗೆ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮಾತನಾಡಿದ್ದಾರೆ. ‘ನನ್ನ ಹಾಗೂ ಅರ್ಮಾನ್ ಮಲಿಕ್ ಅವರ ಕಾಂಬಿನೇಷನ್ನಲ್ಲಿ ಬರುತ್ತಿರುವ ಮೊದಲ ಹಾಡು ಇದು. ಯೋಗರಾಜ್ ಭಟ್ ಅವರ ಸಾಹಿತ್ಯವಿದೆ. ಯೋಗರಾಜ್ ಭಟ್ ಅವರ ಜೊತೆ ಕೆಲಸ ಮಾಡುವುದು ಯಾವಾಗಲೂ ಖುಷಿ ನೀಡುವ ಹಾಗೂ ಕಲಿಕೆಯ ವಿಚಾರ. ಜನರಿಗೆ ಖಂಡಿತವಾಗಿಯೂ ಈ ಸಾಂಗ್ ಇಷ್ಟವಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ನಿರ್ದೇಶಕ ಪರಮ್ ಕೂಡ ‘ಮಾತು ಸೋತು..’ ಹಾಡಿನ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ವಾಸುಕಿ ಭವನ್ ಹೊಸ ತಲೆಮಾರಿನ ಪ್ರತಿಭಾವಂತ ಮ್ಯೂಸಿಕ್ ಡೈರೆಕ್ಟರ್. ಇನ್ನು, ಯೋಗರಾಜ್ ಭಟ್ ಅವರ ಸಾಹಿತ್ಯದ ದೊಡ್ಡ ಫ್ಯಾನ್ ನಾನು. ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಕಾಂಬಿನೇಷನ್ನ ಈ ಗೀತೆಯನ್ನು ಅರ್ಮಾನ್ ಮಲಿಕ್ ಬಹಳ ಚೆನ್ನಾಗಿ ಹಾಡಿದ್ದಾರೆ. ಕನ್ನಡಿಗರಿಗೆ ಈ ಹಾಡು ಇಷ್ಟ ಆಗುವುದರಲ್ಲಿ ಅನುಮಾನವಿಲ್ಲ’ ಎಂದಿದ್ದಾರೆ ಪರಮ್.
ಇದನ್ನೂ ಓದಿ: ಡಾಲಿ ಧನಂಜಯ ಹೊಸ ಸಿನಿಮಾ ಹೆಸರು ‘ಕೋಟಿ’; ಗಮನ ಸೆಳೆದ ಪೋಸ್ಟರ್
ಜಿಯೋ ಸ್ಟುಡಿಯೋಸ್ ಸಂಸ್ಥೆಯು ‘ಕೋಟಿ’ ಸಿನಿಮಾವನ್ನು ನಿರ್ಮಿಸಿದೆ. ‘ಕಲರ್ಸ್ ಕನ್ನಡ’ ವಾಹಿನಿಯನ್ನು ಹಲವು ವರ್ಷಗಳ ಕಾಲ ಮುನ್ನಡೆಸಿದ್ದ ಪರಮ್ (ಪರಮೇಶ್ವರ ಗುಂಡ್ಕಲ್) ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಮೊದಲ ಸಿನಿಮಾ ಇದು. ಜೂನ್ 14ಕ್ಕೆ ಚಿತ್ರಮಂದಿರಗಳಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಡಾಲಿ ಧನಂಜಯ ಅವರಿಗೆ ಜೋಡಿಯಾಗಿ ಮೋಕ್ಷಾ ಕುಶಾಲ್ ನಟಿಸಿದ್ದಾರೆ. ರಂಗಾಯಣ ರಘು, ತಾರಾ, ರಮೇಶ್ ಇಂದಿರಾ, ಸರ್ದಾರ್ ಸತ್ಯ ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
‘ಕೋಟಿ’ ಸಿನಿಮಾದಲ್ಲಿ ಐದು ಹಾಡುಗಳಿವೆ. ಯೋಗರಾಜ್ ಭಟ್ ಹಾಗೂ ವಾಸುಕಿ ವೈಭವ್ ಅವರು ಸಾಹಿತ್ಯ ಬರೆದಿದ್ದಾರೆ. ‘ಚಾರ್ಲಿ 777’ ಖ್ಯಾತಿಯ ನೋಬಿನ್ ಪೌಲ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಪ್ರತೀಕ್ ಶೆಟ್ಟಿ ಸಂಕಲನ, ಅರುಣ್ ಛಾಯಾಗ್ರಹಣ ಈ ಸಿನಿಮಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.