ಶ್ರೀಮೂಕಾಂಬಿಕಾ ಕಂಬೈನ್ಸ್ ಲಾಂಛನದಲ್ಲಿ ಎ.ವೆಂಕಟೇಶ್ ಅವರ ನಿರ್ಮಾಣದ, ಅನಿಲ್ ಮಂಡ್ಯ ಅವರ ನಿರ್ದೇಶನದ ಕ್ಷತ್ರಿಯ ಚಿತ್ರದ ಟೀಸರ್ ಇದೇ ತಿಂಗಳ 17ರಂದು ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗುತ್ತಿದೆ. ಚಿರು ಸರ್ಜಾ ಅವರು ನಾಯಕನಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಈಗಾಗಲೇ ಶೇ. 90ರಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಈ ತಿಂಗಳ ಅಂತ್ಯದಲ್ಲಿ ಕೊನೆಯ ಹಂತದ ಚಿತ್ರೀಕರಣ ಸಹ ಪ್ರಾರಂಭವಾಗಲಿದೆ.
ಪಿ.ವಾಸು, ದಿನಕರ ತೂಗುದೀಪ, ತರುಣ್ ಸುಧೀರ್, ಮುಂಗಾರು ಮಳೆ ಕೃಷ್ಣ ಮತ್ತು ಸಂತೋಷ್ ಅನಂದರಾಮ್ ಅವರ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮತ್ತು ರಾಜಕುಮಾರ ಸಿನಿಮಾಗಳಿಗೆ ಕೋ ಡೈರೆಕ್ಟರ್ ಆಗಿದ್ದ ಅನಿಲ್ ಮಂಡ್ಯ ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ನಟರ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವವರು.
ಈ ಚಿತ್ರಕ್ಕೆ ಭರ್ಜರಿ ಚೇತನ್ ಕುಮಾರ್ ಅವರು ಸಂಭಾಷಣೆ ರಚಿಸುತ್ತಿದ್ದಾರೆ. ರವಿ ವಿ. ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಧರ್ಮವಿಶ್ ಅವರ ಸಂಗೀತ ಸಂಯೋಜನೆಯ 5 ಹಾಡುಗಳು ಈ ಚಿತ್ರದಲ್ಲಿವೆ. ಕೆ.ರವಿವರ್ಮ ಅವರ ಸಾಹಸ ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ರಾಜನ್ ಅವರ ಎಫೆಕ್ಟ್ ಈ ಸಿನಿಮಾದಲ್ಲಿದೆ.