ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರನ್ನು ಕಳೆದುಕೊಂಡು ಇಡೀ ಸಂಗೀತ ಲೋಕ ದುಃಖ ಪಡುತ್ತಿದೆ. ಭಾರತೀಯ ಚಲನಚಿತ್ರ ಕ್ಷೇತ್ರಕ್ಕೆ ಲತಾ ಅವರ ಕೊಡುಗೆ ಅಪಾರ. 36ಕ್ಕೂ ಅಧಿಕ ಭಾಷೆಗಳಲ್ಲಿ ಹಾಡುವ ಮೂಲಕ ಅವರು ಎಲ್ಲರ ಹೃದಯ ಗೆದ್ದಿದ್ದರು. ಲತಾಜೀ ಅವರ ಹಾಡಿಗೆ ತಲೆದೂಗದ ಜನರೇ ಇಲ್ಲ ಎಂದರೂ ತಪ್ಪಿಲ್ಲ. ಅವರ ಕಂಠದಲ್ಲಿ ಬಂದ ಸಾವಿರಾರು ಗೀತೆಗಳು (Lata Mangeshkar Songs) ಸೂಪರ್ ಹಿಟ್ ಆಗಿವೆ. ಲತಾ ಮಂಗೇಶ್ಕರ್ ಅವರ ಎವರ್ಗ್ರೀನ್ ಗೀತೆಗಳಿಂದಾಗಿ ಹಿಂದಿ ಚಿತ್ರರಂಗ ಶ್ರೀಮಂತವಾಗಿದೆ. ಕನ್ನಡಕ್ಕೂ ಲತಾ ಅವರ ಕೊಡುಗೆ ಸಂದಿದೆ. ಅವರು ಕನ್ನಡ ಸಿನಿಮಾಗಳಿಗೆ ಹಾಡಿದ್ದು ತುಂಬ ಕಡಿಮೆ. ಅದರಲ್ಲಿ ‘ಬೆಳ್ಳನೆ ಬೆಳಗಾಯಿತು..’ ಹಾಡಿನ ಮೋಡಿಗೆ ಈ ತಲೆಮಾರಿನ ಪ್ರೇಕ್ಷಕರೂ ಕೂಡ ತಲೆದೂಗುತ್ತಾರೆ. 5 ದಶಕ ಕಳೆದರೂ ಕೂಡ ಈ ಗೀತೆಯ ಮೆರುಗು ಮಾಸಿಲ್ಲ. ಈ ರೀತಿಯ ಹಾಡುಗಳ (Lata Mangeshkar Kannada Songs) ಮೂಲಕ ಲತಾ ಮಂಗೇಶ್ಕರ್ ಅವರು ಸದಾ ಜೀವಂತವಾಗಿರುತ್ತಾರೆ. ಅಭಿಮಾನಿಗಳ ನೆನಪಿಲ್ಲಿ ಅವರು ಶಾಶ್ವತವಾಗಿ ಉಳಿದುಕೊಳ್ಳುತ್ತಾರೆ.
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ 1967ರಲ್ಲಿ ತೆರೆಕಂಡಿತು. ಆ ಚಿತ್ರಕ್ಕೆ ಲಕ್ಷ್ಮಣ್ ಬರಲೇಕರ್ ಸಂಗೀತ ನೀಡಿದ್ದರು. ಬಿ.ಟಿ. ಅಥಣಿ ಗುರುಬಾಲ ಅವರ ನಿರ್ದೇಶನದಲ್ಲಿ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರ ಮೂಡಿಬಂದಿತ್ತು. ಆ ಸಿನಿಮಾದ ಎರಡು ಹಾಡುಗಳಿಗೆ ಲತಾ ಮಂಗೇಶ್ಕರ್ ಧ್ವನಿ ನೀಡಿದ್ದರು. ‘ಬೆಳ್ಳನೆ ಬೆಳಗಾಯಿತು..’ ಮತ್ತು ‘ಎಲ್ಲಾರೆ ಇರತೀರೋ ಎಂದಾರೆ ಬರತೀರೋ..’ ಗೀತೆಗಳನ್ನು ಲತಾ ಹಾಡಿದ್ದರು. ಅವುಗಳಲ್ಲಿ ಹೆಚ್ಚು ಫೇಮಸ್ ಆಗಿದ್ದು ‘ಬೆಳ್ಳನೆ ಬೆಳಗಾಯಿತು..’ ಹಾಡು.
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾದಲ್ಲಿ ಒಟ್ಟು 7 ಹಾಡುಗಳಿದ್ದವು. ಎರಡು ಗೀತೆಗಳಿಗೆ ಲತಾ ಮಂಗೇಶ್ಕರ್ ಧ್ವನಿ ನೀಡಿದರೆ, ಅವರ ಸಹೋದರಿಯರಾದ ಆಶಾ ಭೋಸ್ಲೆ ಮತ್ತು ಉಷಾ ಮಂಗೇಶ್ಕರ್ ಕೂಡ ಈ ಸಿನಿಮಾದಲ್ಲಿ ಒಂದೊಂದು ಹಾಡನ್ನು ಹಾಡಿದರು. ಆ ಮೂಲಕ ಮಂಗೇಶ್ಕರ್ ಸಹೋದರಿಯರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು.
ಲತಾ ಮಂಗೇಶ್ಕರ್ ನಿಧನಕ್ಕೆ ದೇಶದ ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಕನ್ನಡದ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕೂಡ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ‘ಹಾಡುಗಾರಿಕೆ ಕಲಿಯುವ ಎಷ್ಟೋ ತಲೆಮಾರಿನವರಿಗೆ ಲತಾ ಮಂಗೇಶ್ಕರ್ ಅವರ ಪ್ರತಿಯೊಂದು ಹಾಡು ಕೂಡ ಒಂದೊಂದು ವಿಶ್ವವಿದ್ಯಾಲಯ ಇದ್ದಂತೆ. ಅಂಥ ಓರ್ವ ನಿಜವಾದ ಲೆಜೆಂಡ್ ಇಂದು ನಮ್ಮೊಂದಿಗೆ ಇಲ್ಲ. ಕೆಲವು ಬಾರಿ ಲತಾ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವ ಅವಕಾಶ ನನಗೆ ಸಿಕ್ಕಿತ್ತು. ಆ ನೆನಪುಗಳನ್ನು ಜೀವನ ಪರ್ಯಂತ ಮೆಲುಕು ಹಾಕುತ್ತೇನೆ’ ಎಂದು ಗಾಯಕ ವಿಜಯ್ ಪ್ರಕಾಶ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಲತಾ ಮಂಗೇಶ್ಕರ್ ನಿಧನಕ್ಕೆ ಕಾರಣ:
ಕೊವಿಡ್ ಮತ್ತು ನ್ಯೂಮೋನಿಯ ಕಾರಣದಿಂದ ಇತ್ತೀಚೆಗೆ ಲತಾ ಮಂಗೇಶ್ಕರ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 29 ದಿನಗಳ ಕಾಲ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಅವರಿಗೆ 92 ವರ್ಷ ವಯಸ್ಸಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸುವುದು ಕಷ್ಟವಾಯಿತು. ಹಲವು ದಿನಗಳ ಕಾಲ ಅವರು ಐಸಿಯುನಲ್ಲಿದ್ದರು. ವೈದ್ಯರ ಸತತ ಪ್ರಯತ್ನದ ನಡುವೆಯೂ ಲತಾ ಮಂಗೇಶ್ಕರ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ:
Lata Mangeshkar: ಲತಾ ಮಂಗೇಶ್ಕರ್ ಕೊನೆವರೆಗೂ ಏಕೆ ಮದುವೆಯೇ ಆಗಲಿಲ್ಲ?