ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕಳೆದೊಂದು ವಾರದಿಂದ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ದರ್ಶನ್ ಪರ ವಕೀಲರು ಹಾಗೂ ಎಸ್ಪಿಪಿ ಇಬ್ಬರೂ ವಾದವನ್ನು ನ್ಯಾಯಾಲಯದ ಮುಂದಿರುಸುತ್ತಿದ್ದಾರೆ. ಇಬ್ಬರೂ ಸಹ ಗಟ್ಟಿಯಾಗಿಯೇ ವಾದ ಮಂಡನೆ ಮಂಡಿಸುತ್ತಿದ್ದಾರೆ. ಮೊದಲು ವಾದ ಮಂಡಿಸಿದ್ದ ದರ್ಶನ್ ಪರ ವಕೀಲ ಸಿವಿ ನಾಗೇಶ್, ಪೊಲೀಸರ ತನಿಖೆಯನ್ನು ಕಟುವಾಗಿ ಟೀಕಿಸಿ, ತನಿಖೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಬಳಿಕ ವಾದ ಮಂಡಿಸಿದ ಎಸ್ಪಿಪಿ ಪ್ರಸನ್ನ ಕುಮಾರ್, ನಾಗೇಶ್ ಎತ್ತಿದ್ದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದರು. ಇಂದು ಪ್ರತಿವಾದ ಮಂಡಿಸುತ್ತಿರುವ ದರ್ಶನ್ ಪರ ವಕೀಲರು ಇನ್ನಷ್ಟು ವಿಷಯಗಳನ್ನು ನ್ಯಾಯಾಲಯದ ಮುಂದಿರಿಸಿ, ಪೊಲೀಸರು ದರ್ಶನ್ ಅನ್ನು ಸಿಕ್ಕಿ ಹಾಕಿಸಲೆಂದೇ ಕೆಲ ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ ಎಂದು ವಾದಿಸಿದ್ದಾರೆ.
ಸಾಕ್ಷಿಗಳ ಟವರ್ ಲೊಕೇಶನ್, ಸಾಕ್ಷಿಯೊಬ್ಬನ ಹೇಳಿಕೆಯನ್ನು ತಡವಾಗಿ ದಾಖಲಸಿರುವ ಬಗ್ಗೆ ಹಾಗೂ ರೇಣುಕಾ ಸ್ವಾಮಿ ಮೈಮೇಲೆ ಆಗಿರುವ ಗಾಯಗಳ ಬಗ್ಗೆ ಸಿವಿ ನಾಗೇಶ್ ಇಂದು ಊಟದ ವಿರಾಮಕ್ಕೆ ಮುಂಚೆ ವಾದ ಮಂಡಿಸಿದರು. ಸಾಕ್ಷಿಯೊಬ್ಬನ ಹೇಳಿಕೆಯನ್ನು ತಡವಾಗಿ ದಾಖಲು ಮಾಡಿದ ಬಗ್ಗೆ ಈ ಮೊದಲು ಆಕ್ಷೇಪ ವ್ಯಕ್ತಪಡಿಸಿದ್ದ ಸಿವಿ ನಾಗೇಶ್, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಆ ವರದಿಯನ್ನು ಪುರಸ್ಕರಿಸುವಂತೆ ಸಾಕ್ಷಿಯಿಂದ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ಇದು ಪ್ಲಾಂಟ್ ಮಾಡಲಾದ ಸಾಕ್ಷಿ ಎಂದು ಸಿವಿ ನಾಗೇಶ್ ಆರೋಪಿಸಿದರು.
ಆ ಸಾಕ್ಷಿ ತಿರುಪತಿ, ಗೋವಾ, ಹಾಸನ ಎಲ್ಲೆಲ್ಲೋ ಓಡಾಡಿದ್ದಾನೆ ಎಂದು ಪೊಲೀಸರು ಹೇಳಿರುವುದು ಸುಳ್ಳು. ಆ ಸಾಕ್ಷಿ ಬೆಂಗಳೂರಿನಲ್ಲಿಯೇ ಇದ್ದ. ಆದರೆ ಮರಣೋತ್ತರ ಪರೀಕ್ಷೆ ವರದಿ ಬರುವವರೆಗೂ ಕಾದು. ಮರಣೋತ್ತರ ಪರೀಕ್ಷೆಯಲ್ಲಿ ಬಂದ ವರದಿಗೆ ಹೋಲಿಕೆ ಆಗುವಂತೆ ಆತನಿಂದ ಹೇಳಿಕೆ ಪಡೆಯಲಾಗಿದೆ ಎಂದಿದ್ದಾರೆ. ಇದನ್ನು ಮುಚ್ಚಿಡಲೆಂದೇ ರಿಮ್ಯಾಂಡ್ ಅರ್ಜಿಯನ್ನು ನೀಡಲಾಗಿರಲಿಲ್ಲ ಹಾಗೂ ಕೇಸ್ ಡೈರಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಲಾಗಿತ್ತು ಎಂದು ವಾದಿಸಿದರು.
ಇದನ್ನೂ ಓದಿ:ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ 3 ಆರೋಪಿಗಳಿಗೆ ಜಾಮೀನು; ಯಾರಿಗೆಲ್ಲ ಸಿಕ್ತು ರಿಲೀಫ್?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈ ಪ್ರತ್ಯಕ್ಷ ಸಾಕ್ಷಿ ಬಿಟ್ಟರೆ ಬೇರೆ ಸಾಕ್ಷಿಯೇ ಇಲ್ಲ, ಇದನ್ನು ಬಿಟ್ಟರೆ ಕೃತ್ಯ ಸಾಬೀತುಪಡಿಸುವಂತಹ ಒಂದಂಶವೂ ಇಲ್ಲ ಹಾಗಾಗಿ ಪ್ರತ್ಯಕ್ಷ ಸಾಕ್ಷಿಯನ್ನು ಪ್ಲಾಂಟ್ ಮಾಡಲಾಗಿದೆ. ಈ ಸಾಕ್ಷಿ ಬೇರೆಲ್ಲೂ ಹೋಗಿರಲಿಲ್ಲ ಬೆಂಗಳೂರಿನಲ್ಲಿಯೇ ಇದ್ದ. ಈ ಪ್ರತ್ಯಕ್ಷ ಸಾಕ್ಷಿಯೇ, ಹೇಳಿಕೆ ನೀಡಿದ್ದಾನೆ. ಮಲೆಮಹದೇಶ್ವರ ಬೆಟ್ಟದಿಂದ ಮನೆಗೆ ಬಂದಿದ್ದೆ ಎಂದಿದ್ದಾನೆ. ದಿನಾಂಕ ಜೂನ್ 10 ರಂದು ಗೋಡೌನ್ಗೆ ಹೋಗಿದ್ದೇನೆಂದು ಹೇಳಿದ್ದಾನೆ. ಆಗ ಗೋವಾ, ತಿರುಪತಿಗೆ ಹೋಗಿದ್ದೆನೆಂದು ಹೇಳಿಲ್ಲ. ಈ ವಿವರಣೆಯನ್ನು ಮುಂದುವರಿದ ತನಿಖೆಯಲ್ಲಿ ಸೇರಿಸಲಾಗಿದೆ. ಈ ಪ್ರತ್ಯಕ್ಷ ಸಾಕ್ಷಿಯ ಹೇಳಿಕೆಯನ್ನು 13 ದಿನ ವಿಳಂಬವಾಗಿ ದಾಖಲಿಸಿದ್ದಾರೆ. ಪೋಸ್ಟ್ ಮಾರ್ಟಮ್ ವರದಿ ಬಂದ ಬಳಿಕ ಹೇಳಿಕೆ ದಾಖಲಿಸಿದ್ದಾರೆ. ಅಲ್ಲಿನ ವರದಿಗೆ ಮ್ಯಾಚ್ ಮಾಡಲು ಸಾಕ್ಷಿಯ ಹೇಳಿಕೆ ವಿಳಂಬವಾಗಿ ದಾಖಲಿಸಿದ್ದಾರೆ’ ಎಂದಿದ್ದಾರೆ ನಾಗೇಶ್.
ರೇಣುಕಾ ಸ್ವಾಮಿ ಮೈಮೇಲಿ ಆಗಿರುವ ಗಾಯಗಳ ಬಗ್ಗೆ ವಾದ ಮಂಡಿಸಿದ ನಾಗೇಶ್, ‘ರೇಣುಕಾ ಸ್ವಾಮಿ ಮೈಮೆಲೆ 1*25 ಸೆಂಟಿ ಮೀಟರ್ ಗಾಯಗಳೇ ಆಗಿವೆ. ಇವುಗಳಿಂದ ಹೆಚ್ಚು ರಕ್ತ ಸ್ರಾವ ಆಗುವುದೇ ಇಲ್ಲ. ಆದರೆ ಪೊಲೀಸರು ಉದ್ದೇಶಪೂರ್ವಕವಾಗಿ ರಕ್ತ ಸ್ರಾವ ಆಗಿದೆ. ಕೋಲು, ಬಟ್ಟೆಗಳ ಮೇಲೆ ರಕ್ತದ ಕಲೆಗಳಿವೆ ಎಂದಿದ್ದಾರೆ. ಈ ಗಾಯಗಳಿಂದ ವ್ಯಕ್ತಿ ಸಾಯುವುದಿಲ್ಲ’ ಎಂದು ನಾಗೇಶ್ ವಾದ ಮಂಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ