ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ 3 ಆರೋಪಿಗಳಿಗೆ ಜಾಮೀನು; ಯಾರಿಗೆಲ್ಲ ಸಿಕ್ತು ರಿಲೀಫ್?
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯ ಕೇಸ್ನಲ್ಲಿ ಅನೇಕರನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈಗ ತನಿಖೆ ಅಂತ್ಯವಾಗಿದ್ದು, ಕೆಲವರಿಗೆ ಜಾಮೀನು ಸಿಕ್ಕಿದೆ. ಈ ಕೇಸ್ನಲ್ಲಿ ಆರೋಪಿಗಳಾದ ಮೂವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಆದರೆ ಇನ್ನುಳಿದ ಆರೋಪಿಗಳು ಜಾಮೀನು ಪಡೆಯಲು ಕಾಯುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನ ತನಿಖೆ ಮುಕ್ತಾಯ ಆಗಿದೆ. ದರ್ಶನ್, ಪವಿತ್ರಾ ಗೌಡ, ಪ್ರದೋಶ್, ಪವನ್ ಸೇರಿದಂತೆ ಹಲವರ ಮೇಲೆ ಗಂಭೀರ ಆರೋಪಗಳು ಎದುರಾಗಿವೆ. ಅದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ತೀವ್ರ ತನಿಖೆ ಮಾಡಿದ್ದಾರೆ. ತನಿಖೆ ಅಂತ್ಯವಾಗಿದ್ದು, ಇತ್ತೀಚೆಗೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಆ ಬಳಿಕ ಜಾಮೀನು ಪಡೆಯುಲು ಆರೋಪಿಗಳು ಅರ್ಜಿ ಸಲ್ಲಿಸಿದರು. ಇಂದು (ಸೆಪ್ಟೆಂಬರ್ 23) ಮೂವರಿಗೆ ಜಾಮೀನು ನೀಡಲಾಗಿದೆ. ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್ ಹಾಗೂ ನಿಖಿಲ್ಗೆ ಈ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಲಾಗಿದೆ.
ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ನಡೆಯಿತು ಎಂಬ ಆರೋಪ ಇದೆ. ಘಟನೆ ನಡೆದ ಬಳಿಕ ಕೆಲವರು ಸೆರೆಂಡರ್ ಆಗಿದ್ದರು. ಆ ಪೈಕಿ ಕಾರ್ತಿಕ್, ನಿಖಿಲ್ ನಾಯಕ್ ಮತ್ತು ಕೇಶವಮೂರ್ತಿ ಪ್ರಮುಖರು. ಈ ಕೇಸ್ನಲ್ಲಿ ಕಾರ್ತಿಕ್ ಎ15, ಕೇಶವಮೂರ್ತಿ ಎ16 ಹಾಗೂ ನಿಖಿಲ್ ನಾಯಕ್ ಎ17 ಆಗಿದ್ದಾರೆ. ಈ ಮೂವರಿಗೂ ಜಾಮೀನು ನೀಡಲಾಗಿದ್ದು, ಸದ್ಯಕ್ಕೆ ರಿಲೀಫ್ ಸಿಕ್ಕಂತಾಗಿದೆ.
57ನೇ ಸಿಸಿಹೆಚ್ ಕೋರ್ಟ್‌ನಿಂದ ಎ15 ಕಾರ್ತಿಕ್ ಹಾಗೂ ಎ17 ನಿಖಿಲ್ ನಾಯಕ್ಗೆ ಜಾಮೀನು ಮಂಜೂರಾಗಿದೆ. ಎ16 ಆಗಿರುವ ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿದೆ. ಸಾಕ್ಷ್ಯ ನಾಶ ಮಾಡಿದ ಆರೋಪ ಆ ಮೂವರ ಮೇಲಿದೆ. ಪಟ್ಟಣಗೆರೆ ಶೆಡ್ನಲ್ಲಿ ಕಾರ್ತಿಕ್ ಕೆಲಸ ಮಾಡಿಕೊಂಡಿದ್ದ. ಶವ ಸಾಗಿಸಿದವರ ಗ್ಯಾಂಗ್ನಲ್ಲಿ ನಿಖಿಲ್, ಕಾರ್ತಿಕ್ ಇದ್ದರು. ಬಳಿಕ ಅವರ ಜೊತೆ ಕೇಶವಮೂರ್ತಿ ಕೂಡ ಶರಣಾಗಿದ್ದ.
ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೆ.27ಕ್ಕೆ ಮುಂದೂಡಿಕೆ; ಪವಿತ್ರಾ ಗೌಡಗೂ ಸಿಕ್ಕಿಲ್ಲ ಬೇಲ್
ಎ1 ಆಗಿರುವ ಪವಿತ್ರಾ ಗೌಡ ಮತ್ತು ಎ2 ದರ್ಶನ್ ಕೂಡ ಜಾಮೀನಿಗಾಗಿ ಕಾಯುತ್ತಿದ್ದಾರೆ. ಅವರು ಕೂಡ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇಂದು (ಸೆ.23) ಇಬ್ಬರ ಜಾಮೀನು ಅರ್ಜಿಯ ವಿಚಾರಣೆ ಕೂಡ ಮುಂದೂಡಿಕೆ ಆಗಿದೆ. ಸೆಪ್ಟೆಂಬರ್ 25ರಂದು ಪವಿತ್ರಾ ಗೌಡ ಜಾಮೀನು ಅರ್ಜಿ ಹಾಗೂ ಸೆಪ್ಟೆಂಬರ್ 27ಕ್ಕೆ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಸದ್ಯಕ್ಕೆ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಜಾರ್ಜ್ಶೀಟ್ ಸಲ್ಲಿಕೆ ಬಳಿಕ ಅವರು ಜಾಮೀನು ಪಡೆಯುವ ಬಗ್ಗೆ ಕುಟುಂಬದವರು ಹಾಗೂ ವಕೀಲರ ಜೊತೆ ಚರ್ಚೆ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.