Sri Murali: ಕೊವಿಡ್​ ಸಂಕಷ್ಟದಲ್ಲಿ 5 ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಊಟ ನೀಡುತ್ತಿರುವ ನಟ ಶ್ರೀಮುರಳಿ

|

Updated on: May 09, 2021 | 9:49 AM

Sriimurali: ದಿನವಿಡೀ ಪಿಪಿಇ ಕಿಟ್​ ಧರಿಸಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳು ಊಟ ಮಾಡಲು ಕೂಡ ಕಷ್ಟಪಡುತ್ತಿದ್ದಾರೆ ಎಂಬುದು ಶ್ರೀಮುರಳಿ ಅವರ ಗಮನಕ್ಕೆ ಬಂದಿದೆ. ಹಾಗಾಗಿ ಅಂಥವರ ನೆರವಿಗೆ ಶ್ರೀಮುರಳಿ ಧಾವಿಸಿದ್ದಾರೆ.

Sri Murali: ಕೊವಿಡ್​ ಸಂಕಷ್ಟದಲ್ಲಿ 5 ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಊಟ ನೀಡುತ್ತಿರುವ ನಟ ಶ್ರೀಮುರಳಿ
ನಟ ಶ್ರೀಮುರಳಿ
Follow us on

ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆಯೇ ವೈದ್ಯರು, ನರ್ಸ್​ಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂಥ ಕೊರೊನಾ ವಾರಿಯರ್​ಗಳ ಕಾಳಜಿ ವಹಿಸಬೇಕಾಗಿರುವುದು ಕೂಡ ಈ ಹೊತ್ತಿನ ಅಗತ್ಯತೆ. ಅವರು ಚೆನ್ನಾಗಿದ್ದರೆ ಮಾತ್ರ ಈ ಭೀಕರ ಪರಿಸ್ಥಿತಿಯನ್ನು ಎದುರಿಸಬಹುದು. ಆ ಕಾರಣಕ್ಕಾಗಿ ನಟ ಶ್ರೀಮುರಳಿ ಅವರು ತಮ್ಮ ನೆರವಿನ ಹಸ್ತ ಚಾಚಿದ್ದಾರೆ. ಬೆಂಗಳೂರಿನ 5 ಸರ್ಕಾರಿ ಆಸ್ಪತ್ರೆಯ ವೈದ್ಯರು, ನರ್ಸ್​ಗಳು ಹಾಗೂ ಸಿಬ್ಬಂದಿಗೆ ಊಟ ನೀಡುವ ಕಾಯಕಕ್ಕೆ ರೋರಿಂಗ್​ ಸ್ಟಾರ್​ ಮುಂದಾಗಿದ್ದಾರೆ.

ದಿನವಿಡೀ ಪಿಪಿಇ ಕಿಟ್​ ಧರಿಸಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳು ಊಟ ಮಾಡಲು ಕೂಡ ಕಷ್ಟಪಡುತ್ತಿದ್ದಾರೆ ಎಂಬುದು ಶ್ರೀಮುರಳಿ ಅವರ ಗಮನಕ್ಕೆ ಬಂದಿದೆ. ಹಾಗಾಗಿ ಇಂದಿನಿಂದ (ಮೇ 9) ಉಚಿತವಾಗಿ ಊಟದ ವ್ಯವಸ್ಥೆ ಮಾಡಲು ಅವರು ನಿರ್ಧರಿಸಿದ್ದಾರೆ. ಕೆಸಿ ಜನರಲ್​ ಆಸ್ಪತ್ರೆ, ರಾಜಾಜಿನಗರದ ಇಎಸ್​ಐ ಆಸ್ಪತ್ರೆ, ಸಿವಿ ರಾಮನ್​ ಜನರಲ್​ ಆಸ್ಪತ್ರೆ, ಜಯನಗರ ಜನರಲ್​ ಆಸ್ಪತ್ರೆ ಹಾಗೂ ಬೌರಿಂಗ್​ ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಮತ್ತು ನರ್ಸ್​ಗಳಿಗೆ ಶ್ರೀಮುರಳಿ ಊಟದ ವ್ಯವಸ್ಥೆ ಮಾಡಲು ಪಣತೊಟ್ಟಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ಪರಿಸ್ಥಿತಿ ಕೈ ಮೀರಿದೆ. ಸೂಕ್ತ ಚಿಕಿತ್ಸೆ ಇಲ್ಲದೆ ಜನ ಸಾಮಾನ್ಯರು ಕಷ್ಟಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬರು ಮಾಡುವ ಸಣ್ಣ ಸಣ್ಣ ಸಹಾಯ ಕೂಡ ದೊಡ್ಡ ಪರಿಣಾಮ ಬೀರಲಿದೆ. ಅದರಲ್ಲೂ ಸ್ಟಾರ್​ ನಟರು ಇಂಥ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡರೆ ಅದರಿಂದ ಇನ್ನೂ ಅನೇಕರಿಗೆ ಮಾದರಿ ಆಗಲಿದೆ. ಲಾಕ್​ಡೌನ್​ ಆರಂಭ ಆಗುವುದಕ್ಕೂ ಮುನ್ನ ಮದಗಜ ಸಿನಿಮಾದ ಶೂಟಿಂಗ್​ ಕೆಲಸಗಳಲ್ಲಿ ಶ್ರೀಮುರಳಿ ಬ್ಯುಸಿ ಆಗಿದ್ದರು. ಆ ಚಿತ್ರಕ್ಕೆ ‘ಅಯೋಗ್ಯ’ ಖ್ಯಾತಿಯ ಮಹೇಶ್​ ನಿರ್ದೇಶನ ಮಾಡುತ್ತಿದ್ದಾರೆ.

ಕನ್ನಡದ ಚಿತ್ರರಂಗದ ಹಲವು ಕಲಾವಿದರು ಈಗ ಕೊವಿಡ್​ ವಾರಿಯರ್​ಗಳಾಗಿ ಕೆಲಸ ಮಾಡುತ್ತಿದ್ದಾರೆ. ನಟ ಅರ್ಜುನ್​ ಗೌಡ ಅವರು ಈ ಕಷ್ಟದ ಸಂದರ್ಭದಲ್ಲಿ ಆ್ಯಂಬುಲೆನ್ಸ್​ ಚಾಲಕನಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್​ ಗೌಡ ಅವರು ತಮ್ಮದೇ ಹೆಲ್ಪ್​ಲೈನ್​ ಆರಂಭಿಸಿ, ಆ ಮೂಲಕ ಜನರ ಸಹಾಯಕ್ಕೆ ನಿಂತಿದ್ದಾರೆ. ನಟ ಜಗ್ಗೇಶ್​ ಅವರು ಅಗತ್ಯ ಇರುವವರರಿಗೆ ಆಕ್ಸಿಜನ್​ ಸಿಲಿಂಡರ್​ ಒದಗಿಸಿದ್ದಾರೆ. ಬಹುಭಾಷಾ ನಟ ಸೋನು ಸೂದ್​ ಅವರು ಸಮರೋಪಾದಿಯಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಈ ಸಾಲಿಗೆ ಈಗ ಶ್ರೀಮುರಳಿ ಕೂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ:

Actor Arjun Gowda: ಜನರ ಕಷ್ಟ ನೋಡಲಾಗದೇ ಆ್ಯಂಬುಲೆನ್ಸ್​ ಚಾಲಕನಾದ ಕನ್ನಡ ಸಿನಿಮಾ ನಟ ಅರ್ಜುನ್​​ ಗೌಡ

ರಿಯಲ್​ ಹೀರೋ ಆದ ಜಗ್ಗೇಶ್​; 20 ದಿನಗಳಿಂದ ಕೊರೊನಾ ರೋಗಿಗಳ ಸೇವೆಯಲ್ಲಿ ನಟ