ನಟಿ ಮಾನ್ವಿತಾ ಕಾಮತ್ (Manvitha Kamat) ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗ ಅವರಿಗೆ ಮಾತೃವಿಯೋಗ ಉಂಟಾಗಿದೆ. ಹಲವು ಸಮಯದಿಂದ ಮಾನ್ವಿತಾ ತಾಯಿ ಸುಜಾತಾ ಕಾಮತ್ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗಿಲ್ಲ. ಇಂದು (ಏಪ್ರಿಲ್ 15) ಅವರು ನಿಧನ ಹೊಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಮಾನ್ವಿತಾಗೆ ಧೈರ್ಯ ತುಂಬುವ ಕೆಲಸ ಆಗುತ್ತಿದೆ.
ಮಾನ್ವಿತಾ ಕಾಮತ್ ತಾಯಿ ಸುಜಾತಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಅವರಿಗೆ ಕಿಡ್ನಿ ಕಸಿ ಮಾಡಿಸಲಾಗಿತ್ತು ಎನ್ನಲಾಗಿದೆ. ಇದಲ್ಲದೆ ಅವರಿಗೆ ಎರಡು ಬಾರಿ ಹೃದಯಾಘಾತ ಆಗಿತ್ತು. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸುಜಾತಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಒಂದು ತಿಂಗಳಿಂದ ಅವರು ಆಸ್ಪತ್ರೆಯಲ್ಲೇ ಇದ್ದರು. ತಾಯಿಯನ್ನು ಉಳಿಸಿಕೊಳ್ಳಲು ಅವರು ಲಕ್ಷ ಲಕ್ಷ ಖರ್ಚು ಮಾಡಿದ್ದರು. ಆದರೆ, ಈ ಪ್ರಯತ್ನ ವಿಫಲ ಆಗಿದೆ.
ಇದನ್ನೂ ಓದಿ: ಮಾನ್ವಿತಾ ತಾಯಿಗೆ ಅನಾರೋಗ್ಯ: ಸಹಾಯಕ್ಕೆ ಬಂದ ಸೋನು ಸೂದ್; ಧನ್ಯವಾದ ಹೇಳಿದ ನಟಿ
ಸುಜಾತಾ ಕಾಮತ್ ಅನಾರೋಗ್ಯ ಉಂಟಾದಾಗ ಸೋನು ಸೂದ್ ಕಡೆಯಿಂದ ಇದಕ್ಕೆ ಸಹಾಯ ಸಿಕ್ಕಿತ್ತು. ಈ ಬಗ್ಗೆ ಟ್ವೀಟ್ ಮಾಡಿದ್ದ ಮಾನ್ವಿತಾ ಕಾಮತ್, ‘ಈಗತಾನೇ ಸೋನು ಸೂದ್ ಅವರ ಜತೆ ಮಾತನಾಡಿದೆ. ನನ್ನ ತಾಯಿಗೆ ಅವರು ಮಾಡಿದ ಸಹಾಯಕ್ಕೆ ಧನ್ಯವಾದ ಹೇಳಿದೆ. ನೀವು ನಿಜವಾದ ಹೀರೋ ಸರ್. ಎಲ್ಲದಕ್ಕೂ ಧನ್ಯವಾದ. ನಮ್ಮ ಸಂಕಷ್ಟದಲ್ಲಿ ಏಂಜಲ್ ರೀತಿ ಬಂದಿರಿ. ನಿಮ್ಮಿಂದಾಗಿ ನನ್ನ ತಾಯಿ ಇಂದು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಮಾನ್ವಿತಾ ಬರೆದುಕೊಂಡಿದ್ದರು. ಈಗ ಅವರು ನಿಧನ ಹೊಂದಿದ್ದು ಬೇಸರದ ವಿಚಾರ.
2015ರಲ್ಲಿ ತೆರೆಗೆ ಬಂದ ‘ಕೆಂಡಸಂಪಿಗೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ನಟಿ ಮಾನ್ವಿತಾ ಕಾಮತ್. ಈ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತು. ನಂತರ ಹಲವು ಚಿತ್ರಗಳಲ್ಲಿ ಅವರು ನಟಿಸಿದರು. ‘ಟಗರು’ ಚಿತ್ರದಲ್ಲಿ ಮಾನ್ವಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಎರಡು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:21 pm, Sat, 15 April 23