‘ಜೈ ಹನುಮಾನ್’ ಸಿನಿಮಾದಲ್ಲಿ ರಿಷಬ್, ಕೆಲವರ ಕೊಂಕು, ಹಲವರ ಸ್ವಾಗತ

‘ಜೈ ಹನುಮಾನ್’ ತೆಲುಗು ಪ್ಯಾನ್ ಇಂಡಿಯಾ ಸಿನಿಮಾನಲ್ಲಿ ರಿಷಬ್ ಶೆಟ್ಟಿ ನಾಯಕರಾಗಿ ನಟಿಸಲಿದ್ದಾರೆ. ಸಿನಿಮಾದ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಗಿದೆ. ರಿಷಬ್ ಶೆಟ್ಟಿಯನ್ನು ತೆಲುಗು ಚಿತ್ರರಂಗಕ್ಕೆ ಹಲವರು ಸ್ವಾಗತಿಸಿದ್ದಾರೆ. ಕೆಲವರು ಕೊಂಕು ತೆಗೆದಿದ್ದಾರೆ ಸಹ.

‘ಜೈ ಹನುಮಾನ್’ ಸಿನಿಮಾದಲ್ಲಿ ರಿಷಬ್, ಕೆಲವರ ಕೊಂಕು, ಹಲವರ ಸ್ವಾಗತ

Updated on: Nov 03, 2024 | 7:09 AM

ರಿಷಬ್ ಶೆಟ್ಟಿ ತೆಲುಗಿನ ‘ಜೈ ಹನುಮಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ಈ ಹಿಂದೆ ‘ಹನುಮ್ಯಾನ್’ ಸಿನಿಮಾ ನಿರ್ದೇಶನ ಮಾಡಿದ್ದ ಪ್ರಶಾಂತ್ ವರ್ಮಾ ಈ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹನುಮಂತನ ಪಾತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಪೌರಾಣಿಕ ಹಾಗೂ ಪ್ರಸ್ತುತ ಕಾಲದ ಎರಡೂ ಕತೆಯನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ. ಸಿನಿಮಾದ ಪೋಸ್ಟರ್ ಬಿಡುಗಡೆ ಆದ ಬಳಿಕ ಕೆಲ ತೆಲುಗು ಪ್ರೇಕ್ಷಕರು ಕೊಂಕು ತೆಗೆದಿದ್ದಾರೆ. ಆದರೆ ಹಲವರು ರಿಷಬ್​​ ರನ್ನು ಟಾಲಿವುಡ್​ಗೆ ಸ್ವಾಗತಿಸಿದ್ದಾರೆ.

ಪ್ರಶಾಂತ್ ವರ್ಮಾ ಹಂಚಿಕೊಂಡಿರುವ ‘ಜೈ ಹನುಮಾನ್’ ಪೋಸ್ಟರ್​ಗೆ ಪ್ರತಿಕ್ರಿಯೆ ನೀಡಿರುವ ಹಲವರು ರಿಷಬ್ ಶೆಟ್ಟಿಯನ್ನು ತೆಲುಗು ಚಿತ್ರರಂಗಕ್ಕೆ ಸ್ವಾಗತಿಸಿದ್ದಾರೆ. ರಿಷಬ್ ಶೆಟ್ಟಿಗೆ ಈ ಪಾತ್ರ ಸರಿಯಾಗಿ ಒಗ್ಗಿದೆ ಎಂದಿದ್ದಾರೆ. ಹನುಮಂತನಾಗಿ ರಿಷಬ್ ಶೆಟ್ಟಿ ಸಖತ್ ಆಗಿ ಕಾಣುತ್ತಿದ್ದಾರೆ ಎಂದೆಲ್ಲ ಹೇಳಿದ್ದಾರೆ. ಆದರೆ ಕೆಲವರು ರಿಷಬ್ ಶೆಟ್ಟಿಯನ್ನು ಸಿನಿಮಾಕ್ಕೆ ತೆಗೆದುಕೊಂಡಿರುವ ಬಗ್ಗೆ ಕೊಂಕು ತೆಗೆದಿದ್ದಾರೆ ಸಹ. ತೆಲುಗಿನಲ್ಲಿ ಇಷ್ಟೋಂದು ಹೀರೋಗಳು ಇರುವಾಗ ಕನ್ನಡದ ನಾಯಕ ನಟನನ್ನು ಸಿನಿಮಾಕ್ಕೆ ಆಯ್ಕೆ ಮಾಡಿರುವ ಬಗ್ಗೆ ಕೆಲ ತೆಲುಗು ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಪ್ರಶಾಂತ್ ವರ್ಮಾರ ಪೋಸ್ಟ್​ಗೂ ಸಹ ಕೆಲವು ಪೋಸ್ಟ್​ಗಳು ಬಂದಿವೆ.

ಇದನ್ನೂ ಓದಿ:ಆಂಜನೇಯನ ಪಾತ್ರದಲ್ಲಿ ರಿಷಬ್ ಶೆಟ್ಟಿ; ‘ಜೈ ಹನುಮಾನ್’ ಸಿನಿಮಾದಲ್ಲಿ ನಟನೆ

‘ನಮ್ಮ ಹೀರೋಗಳೇ ಸಾಕಷ್ಟಿದ್ದರು ಅವರಲ್ಲೇ ಒಬ್ಬರನ್ನು ತೆಗೆದುಕೊಳ್ಳಬೇಕಿತ್ತು’ ಎಂದು ಒಬ್ಬ ಟ್ವೀಟ್ ಮಾಡಿದ್ದರೆ, ‘ರಾಮ್ ಚರಣ್ ಅಥವಾ ರಾಣಾ ಅವರಲ್ಲಿ ಒಬ್ಬರನ್ನು ತೆಗೆದುಕೊಳ್ಳಬಹುದಾಗಿತ್ತು’ ಎಂದು ಇನ್ನೊಬ್ಬ ಟ್ವೀಟ್ ಮಾಡಿದ್ದಾನೆ. ಅಸಲಿಗೆ ರಿಷಬ್ ಶೆಟ್ಟಿಗೆ ಮುಂಚೆ ಈ ಕತೆಯನ್ನು ರಾಮ್ ಚರಣ್ ಹಾಗೂ ರಾಣಾ ಅವರಿಗೆ ಹೇಳಲಾಗಿತ್ತು. ಆದರೆ ಇಬ್ಬರೂ ಸಹ ಒಪ್ಪಲಿಲ್ಲವಾದ್ದರಿಂದ ಅಂತಿಮವಾಗಿ ಸಿನಿಮಾ ರಿಷಬ್ ಶೆಟ್ಟಿ ಪಾಲಾಯ್ತು. ಬಾಲಿವುಡ್​ನ ರಣ್ವೀರ್ ಸಿಂಗ್​ಗೆ ಸಹ ಇದೇ ಕತೆಯನ್ನು ಹೇಳಲಾಗಿತ್ತು ಎನ್ನಲಾಗಿದೆ.

ರಿಷಬ್ ಶೆಟ್ಟಿ ಪ್ರಸ್ತುತ ‘ಕಾಂತಾರ’ ಪ್ರೀಕ್ವೆಲ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕುಂದಾಪುರದಲ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ‘ಕಾಂತಾರ’ ಮುಗಿದ ಬಳಿಕ ರಿಷಬ್ ಶೆಟ್ಟಿ ‘ಜೈ ಹನುಮಾನ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಹಿಂದೆ ಪ್ರಶಾಂತ್ ವರ್ಮಾ ‘ಹನುಮ್ಯಾನ್’ ಹೆಸರಿನ ಸೂಪರ್ ಹೀರೋ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆ ಸಿನಿಮಾ ಕಳೆದ ಸಂಕ್ರಾಂತಿಗೆ ಬಿಡುಗಡೆ ಆಗಿ ಭಾರಿ ಹಿಟ್ ಎನಿಸಿಕೊಂಡಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us