ಆಂಜನೇಯನ ಪಾತ್ರದಲ್ಲಿ ರಿಷಬ್ ಶೆಟ್ಟಿ; ‘ಜೈ ಹನುಮಾನ್’ ಸಿನಿಮಾದಲ್ಲಿ ನಟನೆ
‘ಕಾಂತಾರ’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದಿರುವ ನಟ ರಿಷಬ್ ಶೆಟ್ಟಿ ಅವರಿಗೆ ಈಗ ಒಂದು ಬಂಪರ್ ಚಾನ್ಸ್ ಸಿಕ್ಕಿದೆ. ಬಹುನಿರೀಕ್ಷಿತ ‘ಜೈ ಹನುಮಾನ್’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಆಂಜನೇಯನ ಪಾತ್ರ ಮಾಡುವ ಅವಕಾಶವನ್ನು ರಿಷಬ್ ಶೆಟ್ಟಿ ಪಡೆದಿದ್ದಾರೆ. ‘ಜೈ ಹನುಮಾನ್’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ.
‘ಡಿವೈನ್ ಸ್ಟಾರ್’ ಅಂತಲೇ ರಿಷಬ್ ಶೆಟ್ಟಿ ಅವರು ಫೇಮಸ್ ಆಗಿದ್ದಾರೆ. ಆ ಬಿರುದಿಗೆ ತಕ್ಕಂತೆಯೇ ಅವರಿಗೆ ದೇವರ ಪಾತ್ರವನ್ನು ಮಾಡುವ ಅವಕಾಶ ಒಲಿದುಬಂದಿದೆ. ಹೌದು, ಈಗ ರಿಷಬ್ ಶೆಟ್ಟಿ ಅವರು ಆಂಜನೇಯನಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿರುವ ‘ಜೈ ಹನುಮಾನ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಹನುಮಂತನಾಗಿ ನಟಿಸುತ್ತಿದ್ದಾರೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಚಿತ್ರತಂಡದಿಂದ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಲಾಗಿದೆ. ಇದನ್ನು ನೋಡಿ ಅಭಿಮಾನಿಗಳಿಗೆ ಥ್ರಿಲ್ ಆಗಿದೆ.
ಈ ವರ್ಷ ಆರಂಭದಲ್ಲಿ ‘ಹನುಮಾನ್’ ಸಿನಿಮಾ ಸೂಪರ್ ಹಿಟ್ ಆಯಿತು. ಸ್ಟಾರ್ ನಟರ ಸಿನಿಮಾಗಳಿಗೂ ಪೈಪೋಟಿ ನೀಡಿ ‘ಹನುಮಾನ್’ ಚಿತ್ರ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ನಿರ್ದೇಶಕ ಪ್ರಶಾಂತ್ ವರ್ಮಾ ಅವರು ಈಗ ಈ ಸಿನಿಮಾಗೆ ಸೀಕ್ವೆಲ್ ಮಾಡುತ್ತಿದ್ದಾರೆ. ಇದಕ್ಕೆ ‘ಜೈ ಹನುಮಾನ್’ ಎಂದು ಶೀರ್ಷಿಕೆ ಇಡಲಾಗಿದೆ. ಪ್ರಮುಖ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿರುವುದು ವಿಶೇಷ.
View this post on Instagram
ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆದರು. ಹಾಗಾಗಿ ಅವರ ಮುಂಬರುವ ಸಿನಿಮಾಗಳ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅದರ ನಡುವೆಯೇ ಅವರು ‘ಜೈ ಹನುಮಾನ್’ ಸಿನಿಮಾವನ್ನು ಒಪ್ಪಿಕೊಂಡು, ಅಭಿಮಾನಿಗಳು ಸಿಹಿ ಸುದ್ದಿ ನೀಡಿದ್ದಾರೆ.
Rishab Shetty: ಐಫಾ ವೇದಿಕೆ ಮೇಲೆ ಅವಾರ್ಡ್ ಗೆದ್ದ ರಿಷಬ್ ಶೆಟ್ಟಿ
ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಮೇಲೆ ಅಭಿಮಾನಿಗಳಿಗೆ ಭರವಸೆ ಇದೆ. ಅವರ ಜೊತೆ ರಿಷಬ್ ಶೆಟ್ಟಿ ಕೈ ಜೋಡಿಸಿರುವುದರಿಂದ ನಿರೀಕ್ಷೆ ಡಬಲ್ ಆಗಿದೆ. ‘ಜೈ ಹನುಮಾನ್’ ಸಿನಿಮಾಗೆ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಬಂಡವಾಳ ಹೂಡುತ್ತಿದೆ. ಈ ಮೂವರ ಕಾಂಬಿನೇಷನ್ನಿಂದ ಪ್ರೇಕ್ಷಕರ ವಲಯದಲ್ಲಿ ಭಾರಿ ಹೈಪ್ ಕ್ರಿಯೇಟ್ ಆಗಿದೆ. ಸಿನಿಮಾ ಬಗ್ಗೆ ಹೆಚ್ಚಿನ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.