ಕನ್ನಡ ಚಿತ್ರರಂಗದ ದಿಗ್ಗಜ ನಟ ವಿಷ್ಣುವರ್ಧನ್ ಕೋಟ್ಯಂತರ ಅಭಿಮಾನಿಗಳಿಗೆ ಸ್ಪೂರ್ತಿ. ತಮ್ಮ ಅದ್ಭುತ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನದಲ್ಲಿ ನೆಲೆಸಿರುವ ವಿಷ್ಣುವರ್ಧನ್ ಅವರನ್ನು ದೇವರಂತೆ ಪೂಜಿಸುವ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳ ಹೆಸರು, ಸ್ವತಃ ಅವರ ಹೆಸರನ್ನೇ ಮಕ್ಕಳಿಗೆ, ಮನೆಗಳಿಗೆ ಇರಿಸಿದ ಅನೇಕರು ಕರ್ನಾಟಕದಲ್ಲಿ ಸಿಗುತ್ತಾರೆ. ಆದರೆ ತೆಲುಗಿನ ಒಬ್ಬ ನಟನ ಹೆಸರಿಗೆ ಸಹ ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ್ ಅವರೇ ಸ್ಪೂರ್ತಿ ಎಂಬುದು ನಿಮಗೆ ಗೊತ್ತೆ?
ಟಾಲಿವುಡ್ನ ಸ್ಟಾರ್ ಹಿರಿಯ ನಟರಲ್ಲಿ ಮೋಹನ್ ಬಾಬು ಸಹ ಒಬ್ಬರು. ಕನ್ನಡ ಚಿತ್ರರಂಗದ ನಟರೊಡನೆ ಬಹಳ ಆತ್ಮೀಯ ಗೆಳೆಯತನವನ್ನು ಈ ನಟ ಹೊಂದಿದ್ದರು. ವಿಶೇಷವಾಗಿ ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರೊಟ್ಟಿಗೆ ಬಹಳ ಆತ್ಮೀಯರಾಗಿದ್ದರು ಮೋಹನ್ ಬಾಬು. ತೆಲುಗು ಚಿತ್ರರಂಗದ ಸ್ಟಾರ್ ನಟ ಆಗಿದ್ದರೂ ಸಹ ಅವರಿಗೆ ಕನ್ನಡ ವಿಷ್ಣುವರ್ಧನ್ ಬಗ್ಗೆ ಅಪಾರ ಗೌರವವಿತ್ತು. ವಿಷ್ಣುವರ್ಧನ್ ಅವರ ನಟನೆ, ಅಂದ, ಅವರ ವ್ಯಕ್ತಿತ್ವ ಬಹುವಾಗಿ ಹಿಡಿಸಿಬಿಟ್ಟಿತ್ತು.
ಇದೇ ಕಾರಣಕ್ಕೆ ನಟ ಮೋಹನ್ಬಾಬು ತಮ್ಮ ಮೊದಲ ಮಗನಿಗೆ ವಿಷ್ಣುವರ್ಧನ್ ಅವರ ಹೆಸರನ್ನೇ ಇಟ್ಟರು. ಈಗ ಆ ಮಗು ಬೆಳೆದು, ತೆಲುಗು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಅದುವೇ ಮಂಚು ವಿಷ್ಣು. ಮೋಹನ್ ಬಾಬು ಪುತ್ರ ಮಂಚು ವಿಷ್ಣು ಅವರ ಹೆಸರಿಗೆ ನೇರ ಸ್ಪೂರ್ತಿ ಕನ್ನಡದ ದಿಗ್ಗಜ ನಟ ವಿಷ್ಣುವರ್ಧನ್ ಅವರು. ಈ ವಿಷಯವನ್ನು ಇತ್ತೀಚೆಗಷ್ಟೆ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.
Manchu Vishnu1
ಇದನ್ನೂ ಓದಿ:‘ಕಣ್ಣಪ್ಪ’ ಎಂದೊಡನೆ ನನಗೆ ರಾಜ್ಕುಮಾರ್ ನೆನಪಾಗ್ತಾರೆ: ಟಾಲಿವುಡ್ ಹಿರಿಯ ನಟ
ಮಂಚು ವಿಷ್ಣು ನಟಿಸಿರುವ ‘ಕಣ್ಣಪ್ಪ’ ಸಿನಿಮಾದ ಹಾಡೊಂದನ್ನು ಇತ್ತೀಚೆಗಷ್ಟೆ ಬೆಂಗಳೂರು ಬಳಿಯ ಆರ್ಟ್ ಆಫ್ ಲಿವಿಂಗ್ನಲ್ಲಿ ಬಿಡುಗಡೆ ಮಾಡಲಾಯ್ತು. ಈ ಕಾರ್ಯಕ್ರಮಕ್ಕೆ ಭಾರತಿ ವಿಷ್ಣುವರ್ಧನ್, ಸುಮಲತಾ ಅಂಬರೀಶ್, ರಾಕ್ ಲೈನ್ ವೆಂಕಟೇಶ್ ಅವರುಗಳು ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ವಿಷ್ಣುವರ್ಧನ್ ಹೆಸರನ್ನೇ ಮೋಹನ್ ಬಾಬು ಅವರ ಮಗನಿಗೆ ಇಟ್ಟರು, ಅವರಿಬ್ಬರ ಗೆಳೆತನ ಬಹಳ ಅಪರೂಪದ್ದು ಎಂದರು.
ಮಂಚು ವಿಷ್ಣು, ತೆಲುಗು ಕಲಾವಿದರ ಸಂಘ (ಮಾ)ನ ಅಧ್ಯಕ್ಷರೂ ಆಗಿದ್ದು, ‘ಢಿ’, ‘ದೇನಿಕೈನಾ ರೆಡಿ’, ‘ಕೃಷ್ಣಾರ್ಜುನ’, ‘ರೌಡಿ’, ‘ಲಕ್ಕುನ್ನೋಡು’, ‘ಮೋಸಗಾಳ್ಳು’ ಇನ್ನೂ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ‘ಕಣ್ಣಪ್ಪ’ ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾಕ್ಕೆ ಮೋಹನ್ ಬಾಬು ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್, ಮೋಹನ್ ಲಾಲ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರುಗಳು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Thu, 27 February 25