‘ಕಣ್ಣಪ್ಪ’ ಎಂದೊಡನೆ ನನಗೆ ರಾಜ್ಕುಮಾರ್ ನೆನಪಾಗ್ತಾರೆ: ಟಾಲಿವುಡ್ ಹಿರಿಯ ನಟ
Mohan Babu: ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು ನಿರ್ಮಾಣ ಮಾಡಿ ಅವರ ಪುತ್ರ ಮಂಚು ವಿಷ್ಣು ನಟಿಸಿರುವ ‘ಕಣ್ಣಪ್ಪ’ ಸಿನಿಮಾದ ಹಾಡೊಂದು ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆ ಆಯ್ತು. ಈ ವೇಳೆ ಹಿರಿಯ ನಟ ಮೋಹನ್ ಬಾಬು ಕನ್ನಡ ಚಿತ್ರರಂಗದ ಮೇರು ನಟ ಡಾ ರಾಜ್ಕುಮಾರ್ ಅವರನ್ನು ನೆನಪು ಮಾಡಿಕೊಂಡರು. ‘ಕಣ್ಣಪ್ಪ’ ಎಂದರೆ ಕಣ್ಣ ಮುಂದೆ ರಾಜ್ಕುಮಾರ್ ಅವರೇ ಬರುತ್ತಾರೆ ಎಂದಿದ್ದಾರೆ.

ಡಾ ರಾಜ್ಕುಮಾರ್ ಎಂಬ ಅನರ್ಘ್ಯ ರತ್ನವನ್ನು ಭಾರತೀಯ ಚಿತ್ರರಂಗಕ್ಕೆ ನಾಯಕನನ್ನಾಗಿ ಪರಿಚಯಿಸಿದ್ದು ‘ಬೇಡರ ಕಣ್ಣಪ್ಪ’ ಸಿನಿಮಾ. ಆ ಸಿನಿಮಾ ಬಿಡುಗಡೆ ಆಗಿ 70 ವರ್ಷಗಳಾಗಿವೆ. ಆದರೆ ಈಗಲೂ ಸಹ ಈ ಸಿನಿಮಾವನ್ನು ಉದಾಹರಣೆಯಾಗಿ ತೆಗೆದುಕೊಳ್ಳಲಾಗುತ್ತದೆ. ಹಾಡುಗಳು ಈಗಲೂ ಸಹ ಜನಪ್ರಿಯವೇ. ಇದೀಗ ತೆಲುಗಿನಲ್ಲಿ ಬೇಡರ ಕಣ್ಣಪ್ಪನ ಕತೆಯನ್ನು ಸಿನಿಮಾ ಮಾಡಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿ, ಹಲವು ಕಮರ್ಶಯಲ್ ಅಂಶಗಳನ್ನು ಸೇರಿಸಿ ಈ ಸಿನಿಮಾ ಮಾಡಲಾಗಿದ್ದು, ಸಿನಿಮಾದ ಹಾಡೊಂದನ್ನು ಇತ್ತೀಚೆಗೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ನಲ್ಲಿ ಬಿಡುಗಡೆ ಮಾಡಲಾಯ್ತು.
ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ತೆಲುಗಿನ ‘ಕಣ್ಣಪ್ಪ’ ಸಿನಿಮಾದ ನಿರ್ಮಾಪಕ, ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು, ನಾಯಕ ನಟ ಮಂಚು ವಿಷ್ಣು, ಸಂಸದೆ, ನಟಿ ಸುಮಲತಾ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ಮೋಹನ್ ಬಾಬು, ‘ಕಣ್ಣಪ್ಪ ಎಂದೊಡನೆ ನನಗೆ ನೆನಪಿಗೆ ಬರುವುದು ಮೇರು ನಟ ಡಾ ರಾಜ್ಕುಮಾರ್’ ಎಂದಿದ್ದಾರೆ.
ಮಾತು ಮುಂದುವರೆಸಿ, ‘ನನ್ನ ಇಬ್ಬರು ಆತ್ಮೀಯ ಮಿತ್ರರಾದ ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರ ಪತ್ನಿಯರು ಇಂದು ನಮ್ಮೊಟ್ಟಿಗೆ ಇರುವುದು ಖುಷಿ ತಂದಿದೆ. ಜೊತೆಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸಹ ಜೊತೆಗಿದ್ದಾರೆ. ನನ್ನ ಮಗನಿಗೆ ರವಿ ಶಂಕರ್ ಗುರೂಜಿಗಳ ಆಶೀರ್ವಾದ ಸಿಕ್ಕಿರುವುದು ನಮ್ಮ ಭಾಗ್ಯ’ ಎಂದಿದ್ದಾರೆ. ಭಾಷಣದ ವೇಳೆ, ಕನ್ನಡ ಚಿತ್ರರಂಗದೊಡನೆ ತಮಗೆ ಇರುವ ನಂಟಿನ ಬಗ್ಗೆ ಮಾತನಾಡಿದರು.
ಇದನ್ನೂ ಓದಿ:‘ನಾನು ಯಾವಾಗಲೂ ದರ್ಶನ್ ಪರ, ಏನೇ ಇದ್ದರೂ ವೈಯಕ್ತಿಕವಾಗಿ ಹೇಳ್ತೀನಿ’ ಸುಮಲತಾ
ನಟಿ ಸುಮಲತಾ ಅಂಬರೀಶ್ ಮಾತನಾಡಿ, ‘ಮೋಹನ್ ಬಾಬು ಹಾಗೂ ಅಂಬರೀಶ್ ಅವರು ಬಹಳ ಆತ್ಮೀಯ ಗೆಳೆಯರಾಗಿದ್ದರು. ಮಂಚು ವಿಷ್ಣು ಬಾಲಕನಾಗಿದ್ದಾಗಿನಿಂದಲೂ ನೋಡಿದ್ದೇವೆ. ಈಗ ಅವರು ನಟಿಸುತ್ತಿರುವ ‘ಕಣ್ಣಪ್ಪ’ ಸಿನಿಮಾ ದೊಡ್ಡ ಹಿಟ್ ಆಗಲಿ ಎಂದು ಶುಭ ಹಾರೈಸಿದರು.
‘ಕಣ್ಣಪ್ಪ’ ಸಿನಿಮಾ, ಬೇಡರ ಕಣ್ಣಪ್ಪ ಕತೆಯನ್ನು ಆಧರಿಸಿದ ಸಿನಿಮಾ ಆಗಿದ್ದು, ಭಾರಿ ಬಜೆಟ್ ಹೂಡಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾದಲ್ಲಿ ಮಂಚು ವಿಷ್ಣು ನಾಯಕ, ಅದರ ಹೊರತಾಗಿ ನಟ ಪ್ರಭಾಸ್, ಬಾಲಿವುಡ್ ನಟ ಅಕ್ಷಯ್ ಕುಮಾರ್, ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಅವರುಗಳು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಅನ್ನು ನ್ಯೂಜಿಲೆಂಡ್ ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Wed, 26 February 25