ಕನ್ನಡ ಚಿತ್ರರಂಗಕ್ಕೆ ಸುಣ್ಣ, ಮಲಯಾಳಿಗಳಿಗೆ ಬೆಣ್ಣೆ, ರಾಜ್ಯ ಸರ್ಕಾರದ ಇಬ್ಬಗೆ ನೀತಿಗೆ ವಿರೋಧ

Himavad Gopalaswamy Temple: ಕೆಲ ತಿಂಗಳ ಹಿಂದೆಯಷ್ಟೆ ‘ಟಾಕ್ಸಿಕ್’, ‘ಕಾಂತಾರ ಚಾಪ್ಟರ್ 1’ ಇನ್ನೂ ಕೆಲ ಸಿನಿಮಾಗಳಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿತ್ತು, ಕೆಲ ಚಿತ್ರತಂಡಗಳ ಮೇಲೆ ಪ್ರಕರಣ ಸಹ ದಾಖಲಿಸಿತ್ತು. ಆದರೆ ಈಗ ನಿಷೇಧಿತ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ಮಾಡಲು ಮಲಯಾಳಂ ಸಿನಿಮಾ ತಂಡವೊಂದಕ್ಕೆ ಅನುಮತಿ ನೀಡಿ ಕೆಂಗಣ್ಣಿಗೆ ಗುರಿಯಾಗಿದೆ.

ಕನ್ನಡ ಚಿತ್ರರಂಗಕ್ಕೆ ಸುಣ್ಣ, ಮಲಯಾಳಿಗಳಿಗೆ ಬೆಣ್ಣೆ, ರಾಜ್ಯ ಸರ್ಕಾರದ ಇಬ್ಬಗೆ ನೀತಿಗೆ ವಿರೋಧ
Eshwar Khandre

Updated on: Apr 09, 2025 | 1:20 PM

ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಹಿಮವದ್ ಗೋಪಾಲಸ್ವಾಮಿ ದೇವಾಲಯದ ಪ್ರದೇಶದಲ್ಲಿ ಮಲಯಾಳಂ (Malayalam) ಸಿನಿಮಾ ಒಂದರ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿರುವುದು ವಿವಾದ ಎಬ್ಬಿಸಿದೆ. ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತದ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಕೆಲ ತಿಂಗಳ ಹಿಂದಷ್ಟೆ ಕೆಲ ಕನ್ನಡ ಸಿನಿಮಾಗಳ ಹಿಂದೆ ಬಿದ್ದು ಪ್ರಕರಣ ದಾಖಲಿಸಿದ ರಾಜ್ಯ ಸರ್ಕಾರ ಈಗ ಪರ ಭಾಷೆ ಸಿನಿಮಾ ಒಂದಕ್ಕೆ ನಿಷೇಧಿತ ವಲಯದಲ್ಲಿ ಚಿತ್ರೀಕರಣ ನಡೆಸಲು ಅವಕಾಶ ಕೊಟ್ಟ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ಕನ್ನಡ ಚಿತ್ರರಂಗಕ್ಕೆ ಒಂದು ನೀತಿ ಪರಭಾಷೆ ಚಿತ್ರರಂಗಕ್ಕೆ ಒಂದು ನೀತಿ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೆಲ ತಿಂಗಳುಗಳ ಹಿಂದಷ್ಟೆ, ಕಾರ್ಖಾನೆ ಆವರಣದಲ್ಲಿ ಚಿತ್ರೀಕರಣ ಮಾಡಿದ್ದ ಯಶ್ ಅವರ ‘ಟಾಕ್ಸಿಕ್’ ಸಿನಿಮಾ ತಂಡದ ವಿರುದ್ಧ ಪ್ರಕರಣ ದಾಖಲಿಸಿತ್ತು. ಅದಾದ ಬಳಿಕ ಜಮೀರ್ ಅಹ್ಮದ್ ಪುತ್ರನ ಸಿನಿಮಾ ಮೇಲೆ ಪ್ರಕರಣ ದಾಖಲಿಸಿತು, ‘ಕಾಂತಾರ ಚಾಪ್ಟರ್ 1’ ಸಿನಿಮಾ ತಂಡಕ್ಕೂ ಎಚ್ಚರಿಕೆ ನೀಡಿತ್ತು. ಅರಣ್ಯ ಪ್ರದೇಶಕ್ಕೆ ಹಾನಿ, ಅನುಮತಿ ಇಲ್ಲದೆ ಚಿತ್ರೀಕರಣ ಇನ್ನಿತರೆ ಆರೋಪಗಳನ್ನು ಕನ್ನಡ ಸಿನಿಮಾ ತಂಡಗಳ ವಿರುದ್ಧ ಅರಣ್ಯ ಇಲಾಖೆ ಮಾಡಿತ್ತು.

ಆದರೆ ಈಗ ಹುಲಿ ಸಂರಕ್ಷಿತ ವಲಯದಲ್ಲಿ ಚಿತ್ರೀಕರಣ ಮಾಡಲು ಮಲಯಾಳಂ ಸಿನಿಮಾ ಒಂದಕ್ಕೆ ತಾನೇ ಅವಕಾಶ ನೀಡಿದೆ. ನಿಷೇಧಿತ ವಲಯ ಎಂದು ಗೊತ್ತಿದ್ದರೂ ಸಹ ಅವಕಾಶ ನೀಡಿ ತನ್ನ ಇಬ್ಭಗೆ ನೀತಿಯನ್ನು ಪ್ರದರ್ಶಿಸಿದೆ. ಇದೀಗ ಸ್ಥಳೀಯರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ಸಹ ನಡೆಸಿದ್ದಾರೆ.

ಇದನ್ನೂ ಓದಿ:ಚಾಮರಾಜನಗರ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ನಿಷೇಧ ವಾಪಸ್

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ವ್ಯಾಪ್ತಿಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ದೇವಾಲಯದ ಆವರಣ ಹಾಗೂ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಮಲಯಾಳಂ ಸಿನಿಮಾ ಒಂದರ ಚಿತ್ರೀಕರಣ ನಡೆಸಲಾಗಿದೆ. ಸುಮಾರು 80 ಮಂದಿಯ ದೊಡ್ಡ ತಂಡ ಚಿತ್ರೀಕರಣದಲ್ಲಿ ಪಾಲ್ಗೊಂಡಿದೆ. ಜನರೇಟರ್ ಸೇರಿದಂತೆ ಹಲವು ದೊಡ್ಡ ವಾಹನಗಳನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ.

ಚಿತ್ರೀಕರಣಕ್ಕೆ ಅನುಮತಿ ನೀಡಿರುವ ಬಗ್ಗೆ ಆಕ್ರೋಶ ಹೊರಹಾಕಿರುವ ಸ್ಥಳೀಯರು, ನಾವು ಸರ್ಕಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುತ್ತೇವೆ ಎಂದಿದ್ದಾರೆ. ಸ್ಥಳೀಯ ಅಧಿಕಾರಿಗಳು ಯಾರೂ ಕರೆಗಳನ್ನು ಸ್ವೀಕರಿಸುತ್ತಿಲ್ಲ, ಒಬ್ಬರನ್ನು ಪ್ರಶ್ನಿಸಿದರೆ ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ