ಎಷ್ಟು ಬೇಗ ಕನ್ನಡ ಕಲಿತರು ಸಂಸದ ಸೂರ್ಯ ಪತ್ನಿ, ಹಲವರಿಗೆ ಮಾದರಿ

Tejasvi Surya wife Sivasri: ಸಂಸದ ತೇಜಸ್ವಿ ಸೂರ್ಯ, ತಮಿಳುನಾಡಿನ ಯುವತಿ ಶಿವಶ್ರೀ ಅವರೊಟ್ಟಿಗೆ ಇದೇ ವರ್ಷ ಮಾರ್ಚ್ ತಿಂಗಳಲ್ಲಿ ವಿವಾಹವಾದರು. ತಮಿಳುನಾಡಿನ ಶಿವಶ್ರೀ ಅವರಿಗೆ ಮದುವೆಯ ಸಂದರ್ಭದಲ್ಲಿ ಕನ್ನಡ ಬರುತ್ತಿರಲಿಲ್ಲ. ಆದರೆ ಮದುವೆಯಾದ ಕೇವಲ ಏಳು ತಿಂಗಳಲ್ಲಿ ಸ್ಪಷ್ಟ ಕನ್ನಡವನ್ನು ಅವರು ಕಲಿತಿದಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ...

ಎಷ್ಟು ಬೇಗ ಕನ್ನಡ ಕಲಿತರು ಸಂಸದ ಸೂರ್ಯ ಪತ್ನಿ, ಹಲವರಿಗೆ ಮಾದರಿ
Tejaswi Surya Wife

Updated on: Oct 26, 2025 | 8:28 AM

ಬೆಂಗಳೂರಿಗೆ (Bengaluru) ಬಂದು ವರ್ಷಗಳಾದರೂ ಸಹ ಇಲ್ಲಿನ ಎಷ್ಟೊ ಮಂದಿ ತಮಿಳರು, ಸೇಠು, ಮಾರ್ವಾಡಿ, ಬಿಹಾರಿ, ಯುಪಿಯವರು, ಮುಸ್ಲೀಮರಿಗೆ ಇಂದಿಗೂ ಕನ್ನಡ ಬರುವುದಿಲ್ಲ. ಕನ್ನಡ ಬಲು ಸರಳವಾದ, ಸುಂದರವಾದ ಭಾಷೆ ಮನಸ್ಸು ಮಾಡಿದರೆ ಕೆಲವೇ ತಿಂಗಳುಗಳಲ್ಲಿ ಭಾಷೆಯನ್ನು ಕಲಿತು ಸುಂದರವಾಗಿ ಮಾತನಾಡಬಹುದು ಎಂಬುದಕ್ಕೆ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರೇ ಉದಾಹರಣೆ.

ಶಿವಶ್ರೀ ಮತ್ತು ತೇಜಸ್ವಿ ಸೂರ್ಯ ಅವರ ವಿವಾಹ ಇದೇ ವರ್ಷ ಮಾರ್ಚ್ ತಿಂಗಳ ಅಂತ್ಯದಲ್ಲಿ ನಡೆಯಿತು. ಶಿವಶ್ರೀ ಅವರು ಮೂಲತಃ ತಮಿಳುನಾಡಿನವರು. ಅವರ ಜೀವನದ ಬಹುತೇಕ ಸಮಯ ಅವರು ಕಳೆದಿರುವುದು ಚೆನ್ನೈನಲ್ಲಿ. ಮಾತೃಭಾಷೆ ತಮಿಳು. ಆದರೆ ಮದುವೆಯಾಗಿ ಕೇವಲ ಏಳು ತಿಂಗಳ ಒಳಗೆ ಅವರು ಕನ್ನಡ ಭಾಷೆ ಕಲಿತಿದ್ದಾರೆ. ಸ್ಪಷ್ಟವಾಗಿ, ತಪ್ಪಿಲ್ಲದೆ ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದಾರೆ.

ಗಾಯಕಿ, ನೃತ್ಯಗಾರ್ತಿಯೂ ಆಗಿರುವ ಶಿವಶ್ರೀ ಅವರು ಇತ್ತೀಚೆಗೆ ಕನ್ನಡ ಪಾಡ್​​ಕಾಸ್ಟ್ ಒಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಪಾಡ್​ಕಾಸ್ಟ್​​ನಲ್ಲಿ ಅವರು ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಶಿವಶ್ರೀ ಅವರ ಕನ್ನಡ ಕೇಳಿ ಸಂದರ್ಶಕಿ, ನೀವು ಇಷ್ಟು ಬೇಗ, ಇಷ್ಟು ಒಳ್ಳೆಯ ಕನ್ನಡ ಕಲಿತಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಶ್ನೆಗೆ ಉತ್ತರಿಸಿದ ಶಿವಶ್ರೀ, ‘ನನಗೆ ಮದುವೆಗೆ ಮೊದಲು ಕನ್ನಡ ಬರುತ್ತಿರಲಿಲ್ಲ. ಮದುವೆಯಾಗಿ ಇಲ್ಲಿಗೆ ಬಂದ ಮೇಲೆ ಕನ್ನಡ ಕಲಿಯಲು ಆರಂಭಿಸಿದೆ. ಯೂಟ್ಯೂಬ್​​​ನಲ್ಲಿ ತರಗತಿಗಳನ್ನು ನೋಡಿದೆ, ಕ್ಲಾಸ್ ತೆಗೆದುಕೊಂಡೆ. ಅದರಲ್ಲಿ ಒಬ್ಬರು ಮಾತ್ರ ಬಹಳ ಚೆನ್ನಾಗಿ ಕನ್ನಡ ಕಲಿಸಿದರು. ಅವರು ಕ್ರಿಯಾಪದಗಳು, ಧಾತು, ನಾಮಪದ, ಭೂತಕಾಲ, ಭವಿಷ್ಯತ್, ಏಕವಚನ, ಬಹುವಚನ ಇನ್ನಿತರೆಗಳನ್ನು ಸಂಖ್ಯೆಯ ಸಹಾಯದಿಂದ ಕಲಿಸಿಕೊಟ್ಟರು. ವಿಶೇಷವಾಗಿ ತಮಿಳಿನಿಂದ ಕನ್ನಡವನ್ನು ಕಲಿಯುವುದು ಹೇಗೆ ಎಂದು ಅವರು ಹೇಳಿಕೊಟ್ಟರು. ಇದರಿಂದ ಸುಲಭವಾಗಿ ಕನ್ನಡ ಕಲಿಯುವಂತೆ ಆಯ್ತು ಎಂದಿದ್ದಾರೆ ಶೀವಶ್ರೀ.

ಶಿವಶ್ರೀ ಅವರು ಆ ಸಂದರ್ಶನದಲ್ಲಿ ಚೆನ್ನಾಗಿಯೇ ಕನ್ನಡ ಮಾತನಾಡಿದ್ದಾರೆ. ಹೊಸದಾಗಿ ಕನ್ನಡ ಕಲಿತವರು ಮಾತನಾಡುವಾಗ ಏಕವಚನ, ಬಹುವಚನ ಸಮಸ್ಯೆ, ಭೂತಕಾಲದ ಸಮಸ್ಯೆ ಇನ್ನೂ ಕೆಲವು ಸರಳ ವ್ಯಾಕರಣದ ಸಮಸ್ಯೆಗಳು ಅವರ ಮಾತಿನಲ್ಲಿ ಕಾಣುತ್ತವೆ. ಆದರೆ ಶಿವಶ್ರೀ ಅವರ ಮಾತಿನಲ್ಲಿ ಅಂಥಹಾ ಪ್ರಮುಖವಾದ ತಪ್ಪುಗಳು ಇಲ್ಲ. ಎಲ್ಲೋ ಅಲ್ಲಲ್ಲಿ, ತಮಿಳಿನ ರೀತಿಯಲ್ಲೇ ಕನ್ನಡ ಪದವನ್ನು ಉಚ್ಛಾರಣೆ ಮಾಡುವುದು ಬಿಟ್ಟರೆ ಸುಸ್ಪಷ್ಟವಾಗಿ ಅವರು ಕನ್ನಡ ಮಾತನಾಡುತ್ತಿದ್ದಾರೆ.

ಇದೀಗ ಶಿವಶ್ರೀ ಅವರು ಕನ್ನಡ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವಾರು ಮಂದಿ ಅದನ್ನು ಹಂಚಿಕೊಳ್ಳುತ್ತಿದ್ದಾರೆ. ವರ್ಷಗಳಿಂದಲೂ ಬೆಂಗಳೂರಿನಲ್ಲಿದ್ದು ಕನ್ನಡ ಕಲಿಯದ ಪರಭಾಷಿಕರು ಶಿವಶ್ರೀ ಅಂಥಹವರನ್ನು ನೋಡಿ ಕಲಿಯಬೇಕು ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ