ನಟಿ ರೀಷ್ಮಾ ನಾಣಯ್ಯ (Reeshma Nanaiah) ಅವರಿಗೂ, ಹಿಟ್ ಹಾಡುಗಳಿಗೂ ಏನೋ ಒಂಥರ ನಂಟು. ಅವರು ಅಭಿನಯಿಸಿದ ‘ಏಕ್ ಲವ್ ಯಾ’ ಚಿತ್ರದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಈಗ ಅವರು ಒಂದು ಮ್ಯೂಸಿಕ್ ವಿಡಿಯೋ (ಆಲ್ಬಂ ಸಾಂಗ್) ಮೂಲಕ ಮತ್ತೆ ಮೋಡಿ ಮಾಡುತ್ತಿದ್ದಾರೆ. ಅವರ ಜೊತೆ ಖ್ಯಾತ ನಿರ್ಮಾಪಕ ಬೆಂ.ಕೋ.ಶ್ರೀ. ಪುತ್ರ ಎಂ.ಎಸ್. ಅಕ್ಷರ್ (MS Akshar) ಅವರು ನಟಿಸಿದ್ದಾರೆ. ‘ಛೀ ಕಳ್ಳ’ ಎಂಬ ಈ ಹಾಡನ್ನು ವಿಶೇಷ ಕಾನ್ಸೆಪ್ಟ್ನೊಂದಿಗೆ ಚಿತ್ರಿಸಲಾಗಿದೆ. ಇತ್ತೀಚೆಗೆ ಅದ್ದೂರಿಯಾಗಿ ಈ ಗೀತೆಯನ್ನು ರಿಲೀಸ್ ಮಾಡಲಾಯಿತು. ‘ಲೂಸಿಯಾ’ ಸಿನಿಮಾ ಖ್ಯಾತಿಯ ಗಾಯಕ ನವೀನ್ ಸಜ್ಜು ಅವರ ಧ್ವನಿಯಲ್ಲಿ ‘ಛೀ ಕಳ್ಳ’ ಹಾಡು (Chi Kalla Song) ಮೂಡಿಬಂದಿದೆ. ಎ2 ಮ್ಯೂಸಿಕ್ ಸಂಸ್ಥೆ ಮೂಲಕ ಸಾಂಗ್ ರಿಲೀಸ್ ಮಾಡಲಾಗಿದೆ.
ಹಳ್ಳಿ ಪರಿಸರದಲ್ಲಿ ‘ಛೀ ಕಳ್ಳ’ ಹಾಡನ್ನು ಚಿತ್ರೀಕರಿಸಲಾಗಿದೆ. ಇದಕ್ಕೆ ಪುನರ್ವ್ ಆಕರ್ಷ್ ನಿರ್ದೇಶನವಿದೆ. ವಿಸ್ಮಯ ಜಗ ಸಾಹಿತ್ಯ ಬರೆದಿದ್ದು, ಅವರೇ ರಾಗ ಸಂಯೋಜನೆ ಕೂಡ ಮಾಡಿದ್ದಾರೆ. ನಿರ್ಮಾಪಕ ಬೆಂ.ಕೋ.ಶ್ರೀ ಅವರು ಇಡೀ ತಂಡಕ್ಕೆ ವಿಶ್ ಮಾಡಿದ್ದಾರೆ.
ಏಳು ಚಿತ್ರಗಳನ್ನು ನಿರ್ಮಿಸಿದ ಅನುಭವ ಬೆಂ.ಕೋ.ಶ್ರೀ. ಅವರಿಗೆ ಇದೆ. ಈಗ ಅವರು ಮಗನ ವೃತ್ತಿ ಜೀವನಕ್ಕಾಗಿ ಎಲ್ಲರ ಪ್ರೋತ್ಸಾಹ ಬಯಸುತ್ತಿದ್ದಾರೆ. ಸಿನಿಮಾದಲ್ಲಿ ನಟಿಸಬೇಕು ಎಂಬ ಹಂಬಲ ಎಂ.ಎಸ್. ಅಕ್ಷರ್ ಅವರಲ್ಲಿದೆ. ಅದರ ಪೂರ್ವಭಾವಿಯಾಗಿ ಅವರು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಒಂದೊಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ಅವರಿಗೆ ಇದೆ.
‘ರೀಷ್ಮಾ ನಾಣಯ್ಯ ಅವರ ಅಭಿನಯ ಈ ಹಾಡನ್ನು ಮತ್ತಷ್ಟು ಸುಂದರವಾಗಿಸಿದೆ. ವಿಸ್ಮಯ ಜಗ ಅವರು ಒಳ್ಳೆಯ ಸಂಗೀತ, ಸಾಹಿತ್ಯ ನೀಡಿದ್ದಾರೆ. ಅದನ್ನು ಅಷ್ಟೇ ಚೆನ್ನಾಗಿ ಚಿತ್ರಿಸಿದ್ದಾರೆ ನಿರ್ದೇಶಕ ಪುನರ್ವ್ ಆಕರ್ಷ್’ ಎಂದು ಹೇಳಿರುವ ಅಕ್ಷರ್ ಅವರು ತಮ್ಮ ಇಡೀ ತಂಡದವರಿಗೆ ಧನ್ಯವಾದ ಅರ್ಪಿಸಿದ್ದಾರೆ. ನವೀನ್ ಕುಮಾರ್ ಹಾಗೂ ಎ.ಜೆ. ಶೆಟ್ಟಿ ಛಾಯಾಗ್ರಹಣ, ನಾಗೇಂದ್ರ ನೃತ್ಯ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದೆ.
ನಟಿ ರೀಷ್ಮಾ ನಾಣಯ್ಯ ಅವರ ಪಾಲಿಗೆ ಇದು ಮೊದಲ ಮ್ಯೂಸಿಕ್ ವಿಡಿಯೋ. ಯೂಟ್ಯೂಬ್ನಲ್ಲಿ ಈ ಹಾಡು ಜನಮನ ಗೆಲ್ಲುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.