
ಭಾರತೀಯ ಸಿನಿಮಾ ಸಂಗೀತದ ಇತಿಹಾಸದಲ್ಲಿ ತಮ್ಮದೇ ಆದ ಸುವರ್ಣ ಅಧ್ಯಾಯ ಬರೆದ ಲೆಜೆಂಡರಿ ಗಾಯಕಿ ಎಸ್. ಜಾನಕಿ (S Janaki) ಅವರ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಮೈಸೂರಿನಲ್ಲಿ ಕೊನೆಯುಸಿರೆಳೆದ ಜಾನಕಮ್ಮ ಅವರ ಅಂತ್ಯಕ್ರಿಯೆ ಇಂದು (ಜುಲೈ 12) ಸಂಜೆ ಮೈಸೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಸದ್ಯ ಮೈಸೂರಿನ ಮಹಾರಾಜ ಮೈದಾನದಲ್ಲಿ ಸಾರ್ವಜನಿಕ ಹಾಗೂ ಗಣ್ಯರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಭಾವುಕ ಕ್ಷಣದಲ್ಲಿ, ಟಿವಿ ವಾಹಿನಿಯೊಂದರ ಜೊತೆ ಮಾತನಾಡಿರುವ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಆರ್ಪಿ ಪಟ್ನಾಯಕ್ (RP Patnaik) ಅವರು, ಜಾನಕಮ್ಮ ಅವರೊಂದಿಗಿನ ತಮ್ಮ ಒಡನಾಟ ಹಾಗೂ ಅವರು ಕೇಂದ್ರ ಸರ್ಕಾರದ ಪದ್ಮಭೂಷಣ (Padma Bhushan) ಪ್ರಶಸ್ತಿಯನ್ನು ತಿರಸ್ಕರಿಸಿದ ಹಿಂದಿನ ಅಸಲಿ ಕಾರಣವನ್ನು ಹಂಚಿಕೊಂಡಿದ್ದಾರೆ.
‘ಜಾನಕಿ ಅಮ್ಮ ಕೇವಲ ಗಾಯಕಿಯಲ್ಲ, ಅವರೊಂದು ಸಂಗೀತ ಶಾಲೆ. ಇಳಯರಾಜ ಅವರ ಸಂಗೀತ, ಎಸ್ಪಿಬಿ ಅವರ ಧ್ವನಿ ಹಾಗೂ ಜಾನಕಮ್ಮ ಅವರ ಗಾಯನವೇ ನಾನು ಸಂಗೀತ ಕ್ಷೇತ್ರಕ್ಕೆ ಬರಲು ಪ್ರಮುಖ ಪ್ರೇರಣೆ. ಎಸ್ಪಿ ಬಾಲಸುಬ್ರಹ್ಮಣ್ಯಂ ಮತ್ತು ಜಾನಕಿ ಅವರ ಕಾಂಬಿನೇಷನ್ ಒಂದು ಅದ್ಭುತ ಮ್ಯಾಜಿಕ್. ಇಂದು ನಾವು ಬಾಲಣ್ಣನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆಯೋ, ಅದೇ ಮಟ್ಟದಲ್ಲಿ ಜಾನಕಮ್ಮ ಅವರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಕಳೆದ ಮಾರ್ಚ್ 21ರಂದು ನಾನು ವೈಜಾಗ್‌ನಲ್ಲಿ ಅವರನ್ನು ಕೊನೆಯ ಬಾರಿಗೆ ಭೇಟಿಯಾಗಿದ್ದೆ. 87ರ ಹರೆಯದಲ್ಲೂ ಅವರು ತಾಯಿಯಂತೆ ನಮ್ಮನ್ನು ಬರಮಾಡಿಕೊಂಡು ಅತ್ಯಂತ ಉತ್ಸಾಹದಿಂದ ಮಾತನಾಡಿಸಿದ್ದರು’ ಎಂದು ಪಟ್ನಾಯಕ್ ಹಳೆಯ ದಿನಗಳನ್ನು ಮೆಲುಕು ಹಾಕಿದರು.
ಜಾನಕಮ್ಮ ಅವರ ಗಾಯನದ ದೈವಿಕ ಶಕ್ತಿಯ ಬಗ್ಗೆ ಮಾತನಾಡಿದ ಪಟ್ನಾಯಕ್, ‘ಅವರ ಧ್ವನಿಯಲ್ಲಿ ನೂರಾರು ಭಾವನೆಗಳು ಮೂಡಿಬರುತ್ತಿದ್ದವು. ಒಮ್ಮೆ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ನನ್ನ ಬಳಿ ಹೇಳಿದ್ದರು. ಹಾಡುವಾಗ ಜಾನಕಮ್ಮ ಗಂಟಲಿನಲ್ಲಿ ಎಷ್ಟೇ ಎಕ್ಸ್‌ಪ್ರೆಶನ್ ತಂದರೂ, ಅವರ ಮುಖದಲ್ಲಿ ಮಾತ್ರ ಯಾವುದೇ ಬದಲಾವಣೆ ಇರುತ್ತಿರಲಿಲ್ಲ, ಒಂದೇ ಮುಖಭಾವ ಇರುತ್ತಿತ್ತು. ಅದು ಹೇಗೆ ಸಾಧ್ಯವಾಗುತ್ತದೆಯೋ ಆ ಮಹಾತಾಯಿಗೆ ಅಂತ ಬಾಲಸುಬ್ರಹ್ಮಣ್ಯಂ ಅವರು ಜಾನಕಮ್ಮ ಅವರ ಪ್ರತಿಭೆಯನ್ನು ಮನಸಾರೆ ಮೆಚ್ಚಿಕೊಂಡಿದ್ದರು. ಅವರು ಒಂದೇ ಟೇಕ್‌ನಲ್ಲಿ ಹಾಡಿದ ‘ನೀ ಲೀಲಾ ಪಾಡೆದ ದೇವಾ’ ಹಾಡು ಇಂದಿಗೂ ನನಗೆ ಒಂದು ದೊಡ್ಡ ವಿಸ್ಮಯ’ ಎಂದರು.
ಇದನ್ನೂ ಓದಿ: ಗಾಯಕಿ ಎಸ್. ಜಾನಕಿ ನಿಧನ: ಕಂಬನಿ ಮಿಡಿದ ಪ್ರಧಾನಿ ಮೋದಿ, ಸಿಎಂ ವಿಜಯ್, ರಜನಿ, ಕಮಲ್
ಕೇಂದ್ರ ಸರ್ಕಾರ ಘೋಷಿಸಿದ್ದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಜಾನಕಿ ಅವರು ತಿರಸ್ಕರಿಸಿದ ಘಟನೆಯ ಬಗ್ಗೆ ಮಾತನಾಡಿದ ಆರ್ಪಿ ಪಟ್ನಾಯಕ್, ‘ಪ್ರಶಸ್ತಿಗಳಿಗೆ ಜಾನಕಮ್ಮ ಅವರ ಹೆಸರು ಸೇರಿದರೆ ಆ ಪ್ರಶಸ್ತಿಗೆ ಗೌರವ ಬರುತ್ತದೆ ವಿನಃ, ಪ್ರಶಸ್ತಿಗಳಿಂದ ಜಾನಕಮ್ಮ ಅವರಿಗೆ ಸಿಗುವ ಗೌರವ ಏನೂ ಇಲ್ಲ. ಅವರು ಎಲ್ಲಾ ಪ್ರಶಸ್ತಿಗಳಿಗಿಂತ ಮಿಗಿಲಾದ ಎತ್ತರದಲ್ಲಿದ್ದಾರೆ. ಅವರಿಗೆ ಪದ್ಮಭೂಷಣ ಪ್ರಶಸ್ತಿ ಎಷ್ಟೋ ವರ್ಷಗಳ ಹಿಂದೆಯೇ ಸಿಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಅತ್ಯಂತ ತಡವಾಗಿ (ಅವರ ವೃತ್ತಿಜೀವನದ ಕೊನೆಯ ದಿನಗಳಲ್ಲಿ) ಪ್ರಶಸ್ತಿ ಪ್ರಕಟಿಸಿತು. ದಕ್ಷಿಣ ಭಾರತದ ಕಲಾವಿದರಿಗೆ ಮಾಡಿದ ಈ ತಾರತಮ್ಯ ಹಾಗೂ ವಿಳಂಬ ನೀತಿಯಿಂದ ನೊಂದುಕೊಂಡು ಅವರು ಆ ಪ್ರಶಸ್ತಿಯನ್ನು ಗೌರವಪೂರ್ವಕವಾಗಿಯೇ ತಿರಸ್ಕರಿಸಿದ್ದರು. ಅವರು ಪ್ರಶಸ್ತಿಗಳಿಗಿಂತ ಮಿಗಿಲಾದ ಜನಮನದ ಕಲಾ ಸರಸ್ವತಿ’ ಎಂದು ಪಟ್ನಾಯಕ್ ಸ್ಪಷ್ಟಪಡಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.