ಮದುವೆಯಾದ ನಟ ನಾಗಭೂಷಣ್ , ವಧು ಯಾರು?

|

Updated on: Jan 28, 2024 | 3:58 PM

Nagabhushan Marriage: ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ನಾಗಭೂಷಣ್ ಅವರು ತಮ್ಮ ಬಹುಕಾಲದ ಗೆಳತಿಯೊಟ್ಟಿಗೆ ಇಂದು (ಜನವರಿ 28) ವಿವಾಹವಾಗಿದ್ದಾರೆ.

ಮದುವೆಯಾದ ನಟ ನಾಗಭೂಷಣ್ , ವಧು ಯಾರು?
Follow us on

ಕನ್ನಡದ ಜನಪ್ರಿಯ ಹಾಸ್ಯ ನಟ ನಾಗಭೂಷಣ್ (Nagabhushan) ಇಂದು (ಜನವರಿ 28) ವಿವಾಹವಾಗಿದ್ದಾರೆ. ತಮ್ಮ ಬಹುಕಾಲದ ಗೆಳತಿ ಪೂಜಾ ಪ್ರಕಾಶ್ ಅವರೊಟ್ಟಿಗೆ ನಾಗಭೂಷಣ್ ಸಪ್ತಪದಿ ತುಳಿದಿದ್ದಾರೆ. ಇವರ ಮದುವೆ ಬೆಳಗಾವಿಯಲ್ಲಿ ನಡೆದಿದೆ. ಪೂಜಾ ಸಹ ಬೆಳಗಾವಿಯವರೇ ಆಗಿದ್ದಾರೆ. ಮದುವೆ ಬಳಿಕ ಆರತಕ್ಷತೆ ಫೆಬ್ರವರಿ 2ರಂದು ಮೈಸೂರಿನಲ್ಲಿ ನಡೆಯಲಿದೆ. ನಾಗಭೂಷಣ್ ಅವರ ವಿವಾಹಕ್ಕೆ ಅವರ ಆಪ್ತ ಗೆಳೆಯರಾದ ಡಾಲಿ ಧನಂಜಯ್, ವಾಸುಕಿ ವೈಭವ್, ನೀನಾಸಂ ಸತೀಶ್, ಅಮೃತಾ ಐಯ್ಯಂಗಾರ್, ನವೀನ್ ಇನ್ನೂ ಹಲವರು ಭಾಗವಹಿಸಿದ್ದರು.

ನಾಗಭೂಷಣ್ ವಿವಾಹವಾಗಿರುವ ಪೂಜಾ ಪ್ರಕಾಶ್ ಗ್ರಾಫಿಕಲ್ ಡಿಸೈನರ್ ಆಗಿದ್ದು ಹಲವು ಕಲಾವಿದರ ಚಿತ್ರಗಳನ್ನು ಭಿನ್ನವಾಗಿ ಚಿತ್ರಿಸಿದ್ದರು. ಈ ಜೋಡಿ ಕಳೆದ ಕೆಲವು ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿತ್ತು ಎನ್ನಲಾಗಿದೆ. ಇದೀಗ ಹಿರಿಯರ ಒಪ್ಪಿಗೆ ಪಡೆದು ವಿವಾಹವಾಗಿದ್ದಾರೆ. ಚಿತ್ರರಂಗದ ಕೆಲವರಿಗಷ್ಟೆ ಮದುವೆಗೆ ಆಮಂತ್ರಣವನ್ನು ನೀಡಲಾಗಿತ್ತು. ಆದರೆ ಆರತಕ್ಷತೆಗೆ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ:Daali Dhananjay: ಡಾಲಿ ಧನಂಜಯ್ ಅವರನ್ನು ಲಿಡ್ಕರ್ ಬ್ರ್ಯಾಂಡ್ ರಾಯಭಾರಿಯಾಗಿ ಘೋಷಿಸಿದ ಸಿಎಂ ಸಿದ್ದರಾಮಯ್ಯ

ನಾಗಭೂಷಣ್, ಕಾಲೇಜು ದಿನಗಳಿಂದಲೂ ನಾಟಕಗಳಲ್ಲಿ ರುಚಿ ಹೊಂದಿರುವವರು. ಡಾಲಿ ಧನಂಜಯ್ ಜೊತೆ ಸೇರಿಕೊಂಡು ಕಾಲೇಜು ದಿನಗಳಲ್ಲಿ ಹಲವು ನಾಟಕಗಳಲ್ಲಿ ನಟಿಸಿದ್ದರು. ಬಳಿಕ ತಮ್ಮ ಗೆಳೆಯರೊಟ್ಟಿಗೆ ಸೇರಿಕೊಂಡು ಯೂಟ್ಯೂಬ್ ವಿಡಿಯೋ ಮಾಡುತ್ತಿದ್ದರು. ಅಲ್ಲಿಯೂ ವೈರಲ್ ಆದ ಬಳಿಕ ನಿಧಾನಕ್ಕೆ ಚಿತ್ರರಂಗಕ್ಕೆ ಕಾಲಿಟ್ಟರು. ಹಲವು ಸಿನಿಮಾಗಳಲ್ಲಿ ಹಾಸ್ಯನಟರಾಗಿ ನಟಿಸಿರುವ ನಾಗಭೂಷಣ್, ‘ಇಕ್ಕಟ್’ ಹಾಗೂ ಇತ್ತೀಚೆಗೆ ಬಿಡುಗಡೆ ಆದ ‘ಟಗರು ಪಲ್ಯ’ ಸಿನಿಮಾದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ‘ಹನಿಮೂನ್’ ಹೆಸರಿನ ವೆಬ್ ಸರಣಿಯಲ್ಲಿಯೂ ಸಹ ನಾಯಕನಾಗಿ ನಾಗಭೂಷಣ್ ನಟಿಸಿದ್ದಾರೆ.

ಕೆಲ ತಿಂಗಳ ಹಿಂದಷ್ಟೆ ನಾಗಭೂಷಣ್, ಅಪಘಾತ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದರು. ನಾಗಭೂಷಣ್ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿ ವೃದ್ಧರು ಅಸುನೀಗಿದ್ದರು. ಅಪಘಾತ ನಡೆದಾಗ ಗಾಯಾಳುಗಳನ್ನು ತಾವೇ ಆಸ್ಪತ್ರೆಗೆ ಸೇರಿಸಿದ್ದ ನಾಗಭೂಷಣ್ ಆ ಬಳಿಕ ತಾವೇ ಪೊಲೀಸ್ ಠಾಣೆಗೆ ಹೋಗಿ ನಡೆದ ಸಂಗತಿ ವಿವರಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ನಾಗಭೂಷಣ್ ಕಡೆಯಿಂದ ಯಾವುದೇ ನಿಯಮ ಉಲ್ಲಂಘನೆ ಆಗದೇ ಇದ್ದುದ್ದನ್ನು ಖಾತ್ರಿ ಪಡಿಸಿದರು. ನಾಗಭೂಷಣ್ ಮದ್ಯದ ಪ್ರಭಾವದಲ್ಲಿ ಗಾಡಿ ಚಲಾಯಿಸಿಲ್ಲ ಎಂದು ಸಹ ಹೇಳಿದ್ದರು.

ಆ ಘಟನೆ ಬಳಿಕ ಬಿಡುಗಡೆ ಆದ ‘ಟಗರು ಪಲ್ಯ’ ಸಿನಿಮಾ ಚಿತ್ರಮಂದಿರದಲ್ಲಿ ಮಾತ್ರವೇ ಅಲ್ಲದೆ ಕಿರುತೆರೆಯಲ್ಲಿಯೂ ಜಯ ಕಂಡಿತು. ಇದೀಗ ‘ವಿದ್ಯಾಪತಿ’ ಹೆಸರಿನ ಸಿನಿಮಾದಲ್ಲಿ ನಾಗಭೂಷಣ್ ನಾಯಕನಾಗಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ