ಕಿರುತೆರೆ ಕಲಾವಿದರ ಮುಂದಿನ ನಿಲ್ದಾಣವೇ ಹಿರಿತೆರೆ. ಧಾರಾವಾಹಿಗಳಲ್ಲಿ ಮಿಂಚಿದ ಅನೇಕ ನಟ-ನಟಿಯರು ನಂತರ ಚಿತ್ರರಂಗಕ್ಕೆ ಕಾಲಿಟ್ಟು ದೊಡ್ಡ ಹೆಸರು ಮಾಡಿದ ಉದಾಹರಣೆ ಸಾಕಷ್ಟಿದೆ. ರಚಿತಾ ರಾಮ್, ಯಶ್, ರಾಧಿಕಾ ಪಂಡಿತ್, ಶಾರುಖ್ ಖಾನ್ ಮುಂತಾದವರೆಲ್ಲ ಇದೇ ಹಾದಿಯಲ್ಲಿ ಸಾಗಿ ಬಂದವರು. ಈಗ ಕಿರುತೆರೆ ನಟಿ ಅಂಕಿತಾ ಅಮರ್ (Ankita Amar) ಅವರು ಕೂಡ ಸಿನಿಮಾ ಕ್ಷೇತ್ರದಲ್ಲಿ ಹಲವು ಪ್ರಾಜೆಕ್ಟ್ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಮೀರಾ ಪಾತ್ರ ಮಾಡಿ ಫೇಮಸ್ ಆದ ಅಂಕಿತಾ ಅವರ ಹೊಸ ಸಿನಿಮಾ ಬಗ್ಗೆ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಈ ಚಿತ್ರಕ್ಕೆ ‘ಪಂಚತಂತ್ರ’ ಖ್ಯಾತಿಯ ನಟ ವಿಹಾನ್ (Vihaan) ಅವರು ಹೀರೋ. ಅಂಕಿತಾ ಅಮರ್ ಮತ್ತು ವಿಹಾನ್ ಜೋಡಿಯಾಗಿ ನಟಿಸಲಿರುವ ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿ (Rakshit Shetty) ನಿರ್ಮಾಣ ಮಾಡಲಿದ್ದಾರೆ. ಅವರ ಒಡೆತನದ ಪರಂವಾ ಸ್ಟುಡಿಯೋಸ್ ಮೂಲಕ ಈ ಚಿತ್ರಕ್ಕೆ ಬಂಡವಾಳ ಹೂಡಲಾಗುತ್ತಿದೆ.
ನಟ ಮತ್ತು ನಿರ್ದೇಶಕನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ರಕ್ಷಿತ್ ಶೆಟ್ಟಿ ಅವರು ಬ್ಯುಸಿ ಆಗಿದ್ದಾರೆ. ಅವರ ನಿರ್ಮಾಣದಲ್ಲಿ ಗಮನಾರ್ಹ ಸಿನಿಮಾಗಳು ಮೂಡಿಬರುತ್ತಿವೆ. ‘777 ಚಾರ್ಲಿ’ ಚಿತ್ರದ ಗೆಲುವಿನ ಬಳಿಕ ಅವರು ಹೊಸ ಸಿನಿಮಾದ ನಿರ್ಮಾಣದತ್ತ ಗಮನ ಹರಿಸಿದ್ದಾರೆ. ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುವವರು ಯಾರು ಎಂಬುದನ್ನು ರಕ್ಷಿತ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗ ಪಡಿಸಿದ್ದಾರೆ. ವಿಹಾನ್ ಮತ್ತು ಅಂಕಿತಾ ಅಮರ್ ಅವರ ಪ್ರತ್ಯೇಕ ಪೋಸ್ಟರ್ಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
‘ಪಂಚತಂತ್ರ’ ಸಿನಿಮಾ ತೆರೆಕಂಡ ಬಳಿಕ ನಟ ವಿಹಾನ್ ಅವರು ಯಾವುದೇ ಚಿತ್ರ ಒಪ್ಪಿಕೊಂಡಿರಲಿಲ್ಲ. ಈಗ ಅವರು ಈ ಹೊಸ ಸಿನಿಮಾ ಮೂಲಕ ಮತ್ತೆ ಸುದ್ದಿ ಆಗಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಟೀಮ್ನಲ್ಲಿ ಗುರುತಿಸಿಕೊಂಡಿರುವ ಚಂದ್ರಜಿತ್ ಬೆಳ್ಳಿಯಪ್ಪ ಅವರು ಈ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ. ಆಗಸ್ಟ್ನಲ್ಲಿ ಚಿತ್ರದ ಶೀರ್ಷಿಕೆ ಅನೌನ್ಸ್ ಆಗಲಿದ್ದು, ಸೆಪ್ಟೆಂಬರ್ನಲ್ಲಿ ಶೂಟಿಂಗ್ ಶುರುವಾಗಲಿದೆ.
ಅಮೆರಿಕಾದ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಪದವಿ ಪಡೆದು, ಅಲ್ಲಿಯೇ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿರುವ ಶ್ರೀವಾತ್ಸವನ್ ಸೆಲ್ವರಾಜನ್ ಅವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.