ಬ್ಲಾಕ್ ಬಸ್ಟರ್ ಸಿನಿಮಾ ‘ಕಾಟೇರ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ, ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದಿರುವ ಮಾಸ್ಟರ್ ರೋಹಿತ್ಗೆ ನಿನ್ನೆ ಅಪಘಾತವಾಗಿದೆ. ಪಾಂಡವಪುರದಿಂದ ಶ್ರೀರಂಗಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ, ಈ ಭೀಕರ ಅಪಘಾತದಲ್ಲಿ ರೋಹಿತ್ ಮತ್ತು ಅವರ ತಾಯಿ ಇಬ್ಬರಿಗೂ ಗಾಯಗಳಾಗಿವೆ. ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮಾಸ್ಟರ್ ರೋಹಿತ್, ಶ್ರೀರಂಗಪಟ್ಟಣದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮಾಸ್ಟರ್ ರೋಹಿತ್, ಅವರ ತಾಯಿ, ಒಬ್ಬ ಉಪನ್ಯಾಸಕ ಹಾಗೂ ರೋಹಿತ್ರ ಗೆಳೆಯ KA11 N 4173 ಸಂಖ್ಯೆಯ ಕಾರಿನಲ್ಲಿ ಪಾಂಡವಪುರದಿಂದ ಶ್ರೀರಂಗಪಟ್ಟಣದ ಆರಾಧನಾ ಶಾಲೆಗೆ ಹೋಗುತ್ತಿದ್ದರು. ಈ ವೇಳೆಯಲ್ಲಿ ಕೇರಳದ ಪ್ರವಾಸಿ ಬಸ್ಸೊಂದಕ್ಕೆ ಕಾರು ಮುಖಾ-ಮುಖಿ ಡಿಕ್ಕಿ ಆಗಿದ್ದು, ಕಾರಿನಲ್ಲಿದ್ದ ಎಲ್ಲರಿಗೂ ತೀವ್ರ ಗಾಯಗಳಾಗಿವೆ.
ಇದನ್ನೂ ಓದಿ:ಹೊಂಬಾಳೆಯ ಹೊಸ ಸಿನಿಮಾ ‘ನರಸಿಂಹ’, ಟೀಸರ್ ನೋಡಿ
ಅದರಲ್ಲೂ ರೋಹಿತ್ಗೆ ತೀವ್ರ ಪೆಟ್ಟಾಗಿದ್ದು, ರೋಹಿತ್ರ ವಸಡು ಒಡೆದು ಹೋಗಿದೆ. ಹಾಗೂ ಅವರ ತಲೆ ಬುರುಡೆಗೆ ತೀವ್ರ ಪೆಟ್ಟಾಗಿದೆ. ಅವರನ್ನು ಮೈಸೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ರೋಹಿತ್ರ ತಾಯಿಯ ಎರಡೂ ಕಾಲಿಗೆ ತೀವ್ರ ಪೆಟ್ಟಾಗಿದ್ದು ಮೂಳೆಗಳು ಮುರಿದಿವೆ ಎನ್ನಲಾಗುತ್ತಿದೆ. ರೋಹಿತ್ರ ಗೆಳೆಯ ಹಾಗೂ ಉಪನ್ಯಾಸಕರಿಗೂ ತೀವ್ರ ಪೆಟ್ಟಾಗಿದೆ.
ಮಾಸ್ಟರ್ ರೋಹಿತ್, ‘ಒಂದಲ್ಲ ಎರಡಲ್ಲ’ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ಅದೇ ಸಿನಿಮಾಕ್ಕೆ ಅವರಿಗೆ ರಾಷ್ಟ್ರಪ್ರಶಸ್ತಿ ಸಹ ದೊರಕಿತು. ಕಳೆದ ವರ್ಷ ಬಿಡುಗಡೆ ಆದ ‘ಕಾಟೇರ’ ಸಿನಿಮಾದಲ್ಲಿ ರೋಹಿತ್ ನಟಿಸಿದ್ದರು. ಆ ಸಿನಿಮಾದಲ್ಲಿಯೂ ರೋಹಿತ್ ಅದ್ಭುತವಾಗಿ ನಟಿಸಿದ್ದರು. ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ನಟ ದರ್ಶನ್, ರೋಹಿತ್ ಅವರ ನಟನೆಯನ್ನು ಕೊಂಡಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:23 am, Sun, 17 November 24