‘ಗಂಧದ ಗುಡಿ’ಯಂತೆಯೇ ಮತ್ತೊಂದು ಮಹತ್ತರ ಯೋಜನೆಯ ತಯಾರಿಯಲ್ಲಿದ್ದ ಪುನೀತ್; ಅಪ್ಪು ಕನಸನ್ನು ಹಂಚಿಕೊಂಡ ನವೀನ್ ಸಜ್ಜು

| Updated By: shivaprasad.hs

Updated on: Nov 16, 2021 | 9:34 AM

Puneeth Rajkumar | Naveen Sajju: ಗಾಯಕ ನವೀನ್ ಸಜ್ಜು ಪುನೀತ್ ರಾಜ್​ಕುಮಾರ್ ಕಂಡಿದ್ದ ಕನಸೊಂದನ್ನು ತೆರೆದಿಟ್ಟಿದ್ದಾರೆ. ‘ಗಂಧದ ಗುಡಿ’ಯ ಮುಖಾಂತರ ಕರ್ನಾಟಕದ ವನ್ಯಜೀವಿ ಸಂಪತ್ತನ್ನು ತೆರೆದಿಡಲು ಮುಂದಾಗಿದ್ದ ಪುನೀತ್, ಹೊಸ ಹಾಡೊಂದರ ಮುಖಾಂತರ ಮಲೆ ಮಹದೇಶ್ವರ ಬೆಟ್ಟದ ಸೌಂದರ್ಯವನ್ನು ತೋರಿಸಬೇಕು ಎಂಬ ಕನಸನ್ನು ಕಂಡಿದ್ದರು.

ನಟ ಪುನೀತ್ ರಾಜ್​ಕುಮಾರ್ ನಾಡು- ನುಡಿಯ ಬಗ್ಗೆ ಅಪಾರ ಪ್ರೀತಿ ಇದ್ದ ಕಲಾವಿದರಾಗಿದ್ದರು. ಸದಾ ಹೊಸದೇನನ್ನೋ ಮಾಡಬೇಕು ಎಂಬ ತುಡಿತ ಹೊಂದಿದ್ದ ಅವರು, ಇದಕ್ಕೆ ಸಂಬಂಧಪಟ್ಟಂತೆ ಹಲವು ಪ್ರಾಜೆಕ್ಟ್​​ಗಳ ತಯಾರಿಯಲ್ಲಿದ್ದರು. ಕರ್ನಾಟಕ ವನ್ಯಜೀವಿ ಸಂಪತ್ತಿನ ಹಿರಿಮೆ ಸಾರುವ ‘ಗಂಧದ ಗುಡಿ’ಯ ಬಿಡುಗಡೆಗೆ ಸಿದ್ಧತೆಯೂ ನಡೆದಿತ್ತು. ಇದೀಗ ಪುನೀತ್ ಕಂಡಿದ್ದ ಮತ್ತೊಂದು ಅಪರೂಪದ ಕನಸು ಬಹಿರಂಗವಾಗಿದೆ. ಖ್ಯಾತ ಗಾಯಕ ನವೀನ್ ಸಜ್ಜು ಟಿವಿ9ನೊಂದಿಗೆ ಮಾತನಾಡಿದ್ದು, ಅದರಲ್ಲಿ ಅವರು ಪುನೀತ್ ಮಲೆ ಮಹದೇಶ್ವರನ ಬಗ್ಗೆ ಹಾಡೊಂದನ್ನು ಹೊರ ತರುವ ಪ್ರಯತ್ನ ನಡೆಸಿದ್ದರ ಬಗ್ಗೆ ವಿವರಿಸಿದ್ದಾರೆ. ಪುನೀತ್ ರಾಜ್​ಕುಮಾರ್ ಅವರು ಮಲೆ ಮಹದೇಶ್ವರನ ಕುರಿತ ಹಾಡೊಂದನ್ನು ಹೊರತರಲು ಉದ್ದೇಶಿಸಿದ್ದರು. ಅದಕ್ಕೆ ಪಿಆರ್​ಕೆ ಬ್ಯಾನರ್​ನಲ್ಲಿ ಅವಕಾಶವನ್ನೂ ಮಾಡಿಕೊಟ್ಟಿದ್ದರು. ವಿಶೇಷವೆಂದರೆ, ಮಲೆ ಮಹದೇಶ್ವರನ ಹಾಡು ಹಾಡಿ, ಹೆಜ್ಜೆ ಹಾಕಲು ಕೂಡ ಅಪ್ಪು ರೆಡಿ ಆಗಿದ್ದರು ಎಂದು ನವೀನ್ ಸಜ್ಜು ನುಡಿದಿದ್ದಾರೆ.

ಜಾನಪದ ಸೊಗಡು ಮತ್ತು ವೆಸ್ಟ್ರನ್ ಸ್ಟೈಲ್ ನ ಹಾಡನ್ನು ಪುನೀತ್ ಪ್ಲ್ಯಾನ್ ಮಾಡಿದ್ದರು. ಹಾಡಿಗೆ ಕಾಸ್ಟ್ಯೂಮ್ಸ್ ಕೂಡ ಪ್ಲ್ಯಾನ್ ಆಗಿತ್ತು. ರುದ್ರಾಕ್ಷಿ, ಕೆಂಪು ಶಾಲು ಧರಿಸಿ ‘ಏಳು ಮಲೆ ಎಪ್ಪತ್ತೇಳು ಮಲೆ’ ಎಂದು ಹೆಜ್ಜೆ ಹಾಕಲು ಅಪ್ಪು ಸಜ್ಜಾಗಿದ್ದರು. ಆದರೆ ಅವರ ಕನಸು ಕನಸಾಗಿಯೇ ಉಳಿಯಿತು. ಮಂಗಳವಾರವಷ್ಟೇ ಕರೆದು ಹಾಡು ಕೇಳಿ ತುಂಬಾ ಇಷ್ಟ ಪಟ್ಟಿದ್ದರು. ಇನ್ನು 15 ದಿನದಲ್ಲಿ ಹಾಡನ್ನು ಹಾಡಬೇಕಾಗಿತ್ತು. ಅದರೆ ಶುಕ್ರವಾರ ನಡೆದ ಘಟನೆಯೇ ಬೇರೆ ಎಂದು ನವೀನ್ ಸಜ್ಜು ಹೇಳಿದ್ದಾರೆ.

ಗಂಧದಗುಡಿ ಡಾಕ್ಯುಮೆಂಟರಿ ಚಿತ್ರದಂತೆ ಮಾದಪ್ಪನ ಬೆಟ್ಟವನ್ನು ಹಾಡಿನಲ್ಲಿ ತೋರಿಸಬೇಕೆನ್ನುವ ಕನಸು ಅಪ್ಪುಗಿತ್ತು. ಗಂಧದಗುಡಿಯ ವಿಡಿಯೋಗಳನ್ನು ಕೂಡ ಅಪ್ಪು ಅಂದು ತೋರಿಸಿದ್ದರು. ಕೊನೆಗೂ ಅವರು ಇಷ್ಟ ಪಟ್ಟ ಹಾಡನ್ನ ಕೇಳಿ ಹೋದ್ರು ಎಂದು ನೆನೆದು ನವೀನ್ ಭಾವುಕರಾಗಿದ್ದಾರೆ. ಪುನೀತ್ ಕನಸಿನಂತೆ ಮಲೆ ಮಹದೇಶ್ವರನ ಹಾಡಿನ ಕೆಲಸವನ್ನು ಪ್ರಾರಂಭಿಸಿ, ಅದನ್ನು ಅವರಿಗೆ ಅರ್ಪಿಸಲಾಗುತ್ತದೆ ಎಂದು ನವೀನ್ ಸಜ್ಜು ತಿಳಿಸಿದ್ದಾರೆ. ಈ ಕುರಿತು ಕೆಲವು ದಿನಗಳ ನಂತರ ಅಶ್ವಿನಿ ಮತ್ತು ಶಿವರಾಜ್​ ಕುಮಾರ್ ಜತೆ ಚರ್ಚೆ ನಡೆಸುತ್ತೇನೆ ಎಂದು ಅವರು ತಿಳಿಸಿದ್ದಾರೆ. ಇದರೊಂದಿಗೆ ಅವರು ಅಪರೂಪದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನವೀನ್ ಸಜ್ಜು ಅಪರೂಪದ ಸಂದರ್ಶನ ಇಲ್ಲಿದೆ:

ಇದನ್ನೂ ಓದಿ:

ಇಂದು ಪುನೀತ ನಮನ ಕಾರ್ಯಕ್ರಮ; ಭಾಗವಹಿಸುವ ಗಣ್ಯರು, ಸಮಯ, ನೇರ ಪ್ರಸಾರದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

‘ಪುನೀತ್​ ನಮನ’ ಕಾರ್ಯಕ್ರಮಕ್ಕೆ ಪಾಸ್​ ಇಲ್ಲದವರಿಗೆ ನೋ ಎಂಟ್ರಿ; ಪೊಲೀಸರು ಕೊಟ್ಟ​ ವಾರ್ನಿಂಗ್​ ಏನು?

Published On - 9:32 am, Tue, 16 November 21