ಕೊಟ್ಟ ಮಾತಿನಂತೆ ನಡೆಯುವ ಪೂರ್ಣ ವಿಶ್ವಾಸವಿದೆ: ಹೊಸ ಸರ್ಕಾರದ ಬಗ್ಗೆ ರಮ್ಯಾ ಭರವಸೆ

|

Updated on: May 20, 2023 | 5:19 PM

Ramya: ಕಾಂಗ್ರೆಸ್ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ನಟಿ ರಮ್ಯಾ, ಕಾಂಗ್ರೆಸ್ ಪಕ್ಷ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುವ ಪೂರ್ಣ ವಿಶ್ವಾಸ ತಮಗಿದೆ ಎಂದಿದ್ದಾರೆ.

ಕೊಟ್ಟ ಮಾತಿನಂತೆ ನಡೆಯುವ ಪೂರ್ಣ ವಿಶ್ವಾಸವಿದೆ: ಹೊಸ ಸರ್ಕಾರದ ಬಗ್ಗೆ ರಮ್ಯಾ ಭರವಸೆ
ರಮ್ಯಾ-ಸಿದ್ದು
Follow us on

ಸಿದ್ದರಾಮಯ್ಯ (Siddaramaiah) ಎರಡನೇ ಬಾರಿಗೆ ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹಲವು ರಾಜಕಾರಣಿಗಳ ಜೊತೆಗೆ ಸಿನಿಮಾ ಸೆಲೆಬ್ರಿಟಿಗಳು ಸಹ ಆಗಮಿಸಿದ್ದರು. ವಿಶೇಷವಾಗಿ ಕಮಲ್ ಹಾಸನ್ (Kamal Haasan), ಶಿವರಾಜ್ ಕುಮಾರ್ (Shiva Rajkumar), ಗೀತಾ ಶಿವರಾಜ್ ಕುಮಾರ್, ದುನಿಯಾ ವಿಜಯ್, ಕಾಂಗ್ರೆಸ್​ನವರೇ ಆದ ನಟಿ ಉಮಾಶ್ರೀ ಹಾಗೂ ನಟಿ ರಮ್ಯಾ (Ramya) ಸಹ ಆಗಮಿಸಿದ್ದರು. ಪದಗ್ರಹಣ ಕಾರ್ಯಕ್ರಮದ ಬಳಿಕ ನಟಿ ರಮ್ಯಾ, ಮಾಧ್ಯಮಗಳೊಟ್ಟಿಗೆ ಮಾತನಾಡಿ ಹೊಸ ಸರ್ಕಾರದ ಬಗ್ಗೆ ಭರವಸೆ ವ್ಯಕ್ತಪಡಿಸಿದರು.

ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟಿ ರಮ್ಯಾ, ”ಸರ್ಕಾರ ಅಧಿಕಾರಕ್ಕೆ ಬಂದಿರುವುದು ಬಹಳ ಖುಷಿ ಇದೆ. ಅವರು ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತಾರೆ ಎಂಬ 100% ನಂಬಿಕೆ ನನಗೆ ಇದೆ. ಒಳ್ಳೆ ಹಿರಿಯ ನಾಯಕರುಗಳಿಗೆ ಸಂಪುಟದಲ್ಲಿ ಅವಕಾಶ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ನೀಡಿರುವ ಐದು ಗ್ಯಾರೆಂಟಿಗಳನ್ನು ಈಡೇರಿಸುತ್ತಾರೆ ಎಂಬ ಭರವಸೆ ನನಗೆ ಇದೆ. ಅದರಲ್ಲಿ ಅನುಮಾನವೇ ಇಲ್ಲ” ಎಂದಿದ್ದಾರೆ.

”ಮಹಿಳೆಯರಿಗೆ ಉಚಿತ ಬಸ್ ಪಾಸ್. ನಿರುದ್ಯೋಗಿ ಪದವಿದರರಿಗೆ, ಡಿಪ್ಲೋಮಾ ಶಿಕ್ಷಿತರಿಗೆ ಪ್ರತಿತಿಂಗಳು ಹಣ ನೀಡುತ್ತಾರೆ. ಗೃಹಿಣಿಯರಿಗೆ ಹಣ ನೀಡುತ್ತಾರೆ. ಮತ್ತೆ ಅನ್ನಭಾಗ್ಯ ಅಂತೂ ಕೊಟ್ಟೆ ಕೊಡುತ್ತಾರೆ. ಕಳೆದ ಬಾರಿ ಅನ್ನಭಾಗ್ಯ ಯೋಜನೆ ತಂದಾಗ ಅದರಿಂದ ಬಹಳಷ್ಟು ಬಡಜನರಿಗೆ ಒಳ್ಳೆಯದಾಗಿತ್ತು. ಆ ಯೋಜನೆಯನ್ನು ಈಗ ಮತ್ತೆ ತರುವ ನಿರೀಕ್ಷೆ ಇದೆ” ಎಂದಿದ್ದಾರೆ ನಟಿ ರಮ್ಯಾ.

ಮಾಜಿ ಸಂಸದೆ ರಮ್ಯಾ, ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರೂ ಕಳೆದ ಕೆಲ ವರ್ಷಗಳಿಂದ ರಾಜಕೀಯದಿಂದ ದೂರ ಉಳಿದಿದ್ದರು. ಈ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ರಾಜಕೀಯದಲ್ಲಿ ಸಕ್ರಿಯರಾದ ರಮ್ಯಾ ಕಾಂಗ್ರೆಸ್​ನ ಅಭ್ಯರ್ಥಿಗಳ ಪರವಾಗಿ ಹಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದರು. ಅದರಲ್ಲಿಯೂ ಮಂಡ್ಯದ ಹಲವು ಕ್ಷೇತ್ರಗಳಲ್ಲಿ ರಮ್ಯಾ ಪ್ರಚಾರ ಮಾಡಿದ್ದರು. ರಮ್ಯಾ ಪ್ರಚಾರ ಮಾಡಿದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಟಿ ರಮ್ಯಾ ರಾಜಕೀಯದಲ್ಲಿದ್ದಾರೆ. 2013 ರಲ್ಲಿ ಮಂಡ್ಯ ಲೋಕಸಭೆ ಉಪಚುನಾವಣೆ ಎದುರಿಸಿ ಗೆದ್ದಿದ್ದರು ನಟಿ ರಮ್ಯಾ. ಆ ಬಳಿಕ 2014ರ ಚುನಾವಣೆಯಲ್ಲಿ ಸೋಲನುಭವಿಸಿದರು. ಆ ಬಳಿಕ ರಾಷ್ಟ್ರೀಯ ಕಾಂಗ್ರೆಸ್​ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾದರು. 2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿಲ್ಲವಾದರೂ ಕಾಂಗ್ರೆಸ್ ಪರವಾಗಿ ಸಾಮಾಜಿಕ ಜಾಲತಾಣ ಮೂಲಕ ಅಭಿಪ್ರಾಯ ರೂಪಿಸುವ ಕೆಲಸ ಮಾಡಿದರು. ಬಿಜೆಪಿಗೆ ಹೋಲಿಸಿದರೆ ಬಹಳ ಹಿಂದಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣವನ್ನು ಚುರುಕುಗೊಳಿಸಿದ ಶ್ರೇಯ ರಮ್ಯಾಗೆ ಸಲ್ಲುತ್ತದೆ.

ರಾಜಕೀಯದ ಜೊತೆಗೆ ಸಿನಿಮಾ ರಂಗದಲ್ಲಿಯೂ ಮತ್ತೆ ಸಕ್ರಿಯರಾಗಿದ್ದು, ಆಪಲ್ ಬಾಕ್ಸ್ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಆರಂಭ ಮಾಡಿದ್ದಾರೆ. ಜೊತೆಗೆ ಸಿನಿಮಾಗಳಲ್ಲಿ ನಟಿಸುವುದಕ್ಕೂ ಆರಂಭ ಮಾಡಿದ್ದಾರೆ. ಹಾಸ್ಟೆಲ್ ಹುಡುಗರು ಹೆಸರಿನ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ರಮ್ಯಾ ಕಾಣಿಸಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ನಟನೆಯ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅದರ ಜೊತೆಗೆ ಡಾಲಿ ಧನಂಜಯ್, ಶಿವರಾಜ್ ಕುಮಾರ್ ಜೊತೆಗೆ ಉತ್ತರಕಾಂಡ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ