Ramya: ನಟಿ ರಮ್ಯಾ ಸಾಕಿದ್ದ ಮುದ್ದಿನ ನಾಯಿ ‘ಚಾಂಪ್’ ಸಾವು; ಕಾಣೆಯಾದ ಕೆಲವೇ ಗಂಟೆಗಳಲ್ಲಿ ನಿಧನ
Ramya Divya Spandana: ರಮ್ಯಾ ಅವರು ತುಂಬಾ ಪ್ರೀತಿಸುತ್ತಿದ್ದ ಚಾಂಪ್ ಎಂಬ ಶ್ವಾನಕ್ಕೆ 16 ವರ್ಷ ಆಗಿತ್ತು. ಅದಕ್ಕೆ ಆರೋಗ್ಯ ಸಮಸ್ಯೆ ಇತ್ತು. ಅದನ್ನು ಅವರು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು.
ನಟಿ ರಮ್ಯಾ ದಿವ್ಯಾ ಸ್ಪಂದನಾ (Ramya Divya Spandana) ಅವರಿಗೆ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಇದೆ. ಅದರಲ್ಲೂ ಶ್ವಾನಗಳಿಗೆ ಅವರು ಸಖತ್ ಪ್ರೀತಿ ತೋರಿಸುತ್ತಾರೆ. ಅದಕ್ಕೆ ಅನೇಕ ಘಟನೆಗಳು ಸಾಕ್ಷಿ ಆಗಿವೆ. ರಮ್ಯಾ ಮನೆಯಲ್ಲಿ ಅನೇಕ ನಾಯಿಗಳನ್ನು ಸಾಕಿದ್ದಾರೆ. ಅವರ ಮುದ್ದಿನ ನಾಯಿ ‘ಚಾಂಪ್’ (Champ) ಕಾಣೆ ಆಗಿತ್ತು. ಬೇಸರದ ಸಂಗತಿ ಏನೆಂದರೆ ಕಾಣೆಯಾದ ಕೆಲವೇ ಗಂಟೆಗಳಲ್ಲಿ ಆ ನಾಯಿ ಸಾವನ್ನಪ್ಪಿದೆ. ಈ ವಿಷಯವನ್ನು ಸ್ವತಃ ರಮ್ಯಾ ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ‘ಚಾಂಪ್ ಸತ್ತುಹೋಗಿದ್ದಾನೆ. ಅವನಿಗಾಗಿ ಹುಡುಕಾಡಿದ ಎಲ್ಲರಿಗೂ ಧನ್ಯವಾಗಳು’ ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮತ್ತು ಟ್ವಿಟರ್ನಲ್ಲಿ ರಮ್ಯಾ (Ramya) ಬರೆದುಕೊಂಡಿದ್ದಾರೆ.
ರಮ್ಯಾ ಅವರು ಈಗ ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ಅದೇ ರೀತಿ ಚುನಾವಣಾ ಪ್ರಚಾರದಲ್ಲೂ ಬ್ಯುಸಿ ಆಗಿದ್ದಾರೆ. ಈ ನಡುವೆ ಚಾಂಪ್ ಕಾಣೆಯಾಗಿದ್ದು ಅವರಿಗೆ ಬೇಸರ ಮೂಡಿಸಿತ್ತು. ಅದಕ್ಕಾಗಿ ಅವರು ಹುಡುಕಾಟ ನಡೆಸಿದ್ದರು. ‘ನನ್ನ ನಾಯಿ ಚಾಂಪ್ ಕಾಣೆಯಾಗಿದೆ. ಕಪ್ಪು ಬಣ್ಣದ ನಾಯಿ ಅದಾಗಿದ್ದು, ಅದಕ್ಕೆ ತುಸು ಕಣ್ಣು ಮಂಜಾಗಿದೆ. ಚಾಂಪ್ ಎಂದು ಕರೆದರೆ ಪ್ರತಿಕ್ರಿಯಿಸುತ್ತದೆ. ಮೇ 6 ರಂದು ಬೆಳಿಗ್ಗೆ ರೇಸ್ಕೋರ್ಸ್ ರಸ್ತೆಯ ತಾಜ್ ವೆಸ್ಟ್ಎಂಡ್ನಿಂದ ನಾಯಿ ಕಾಣೆಯಾಗಿದೆ. ಸುರಕ್ಷಿತವಾಗಿ ಮರಳಿಸಿದವರಿಗೆ ಸೂಕ್ತ ಉಡುಗೊರೆ ನೀಡಲಾಗುತ್ತದೆ. ಪ್ರೀತಿಯ ನಾಯಿಯನ್ನು ಹುಡುಕಲು ಸಹಾಯ ಮಾಡಿ’ ಎಂದು ರಮ್ಯಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು.
Champ passed away. Thank you for looking for him.
— Ramya/Divya Spandana (@divyaspandana) May 6, 2023
ರಮ್ಯಾ ಅವರು ಇತ್ತೀಚೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದಾಗ ಚಾಂಪ್ ನಾಯಿಯ ಬಗ್ಗೆ ಮಾತನಾಡಿದ್ದರು. ರಮ್ಯಾ ತುಂಬಾ ಪ್ರೀತಿಸುತ್ತಿದ್ದ ಚಾಂಪ್ಗೆ 16 ವರ್ಷ ಆಗಿತ್ತು. ಅದಕ್ಕೆ ಹೃದಯ ಸಮಸ್ಯೆ ಇತ್ತು ಹಾಗೂ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಆ ಶ್ವಾನವನ್ನು ಅವರು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಈಗ ಚಾಂಪ್ ಸತ್ತುಹೋಗಿರುವುದು ಅವರಿಗೆ ಬೇಸರ ಮೂಡಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.