ರಮ್ಯಾರ ಮುದ್ದಿನ ನಾಯಿ ಕಾಣೆಯಾಗಿದೆ: ಹುಡುಕಿಕೊಟ್ಟವರಿಗೆ ಬಹುಮಾನವೂ ಇದೆ
Ramya: ನಟಿ ರಮ್ಯಾರ ಮುದ್ದಿನ ನಾಯಿ ಚಾಂಪ್ ಕಾಣೆಯಾಗಿದೆ. ತಾಜ್ ವೆಸ್ಟ್ಎಂಡ್ ಹೋಟೆಲ್ನಿಂದ ನಾಯಿ ಕಾಣೆಯಾಗಿದ್ದು, ನಾಯಿ ಹುಡುಕಿಕೊಟ್ಟವರಿಗೆ ಬಹುಮಾನವೂ ಉಂಟು.
ಕಾಂಗ್ರೆಸ್ (Congress) ಪರ ಚುನಾವಣೆ ಪ್ರಚಾರದಲ್ಲಿ ನಟಿ ರಮ್ಯಾ (Ramya) ಬ್ಯುಸಿಯಾಗಿರುವ ಹೊತ್ತಿನಲ್ಲೇ ಅವರ ಮುದ್ದಿನ ನಾಯಿ (Dog) ಕಾಣೆಯಾಗಿಬಿಟ್ಟಿದೆ. ರಮ್ಯಾ, ಶ್ವಾನಪ್ರೇಮಿ (Dog Lover) ಮನೆಯಲ್ಲಿ ಎರಡು ನಾಯಿಗಳನ್ನು ಸಾಕಿಕೊಂಡಿದ್ದಾರೆ. ಅವರೇ ಹೇಳಿಕೊಂಡಿರುವಂತೆ, ನಾಯಿಗಳು ಅವರಿಗೆ ಮಕ್ಕಳಿದ್ದಂತೆ. ಆದರೆ ಅವರು ಅತಿಯಾಗಿ ಹಚ್ಚಿಕೊಂಡಿರುವ ನಾಯಿಯೊಂದು ಕಳೆದು ಹೋಗಿದೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಮ್ಯಾ, ನಾಯಿ ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ.
”ನನ್ನ ನಾಯಿ ಚಾಂಪ್ ಕಾಣೆಯಾಗಿದೆ. ಕಪ್ಪು ಬಣ್ಣದ ನಾಯಿ ಅದಾಗಿದ್ದು, ಅದಕ್ಕೆ ತುಸು ಕಣ್ಣು ಮಂಜಾಗಿದೆ. ಚಾಂಪ್ ಎಂದು ಕರೆದರೆ ಪ್ರತಿಕ್ರಿಯಿಸುತ್ತದೆ. ಮೇ 6 ರಂದು ಬೆಳಿಗ್ಗೆ ರೇಸ್ಕೋರ್ಸ್ ರಸ್ತೆಯ ತಾಜ್ ವೆಸ್ಟ್ಎಂಡ್ನಿಂದ ನಾಯಿ ಕಾಣೆಯಾಗಿದೆ. ಸುರಕ್ಷಿತವಾಗಿ ಮರಳಿಸಿದವರಿಗೆ ಸೂಕ್ತ ಉಡುಗೊರೆ ನೀಡಲಾಗುತ್ತದೆ. ಪ್ರೀತಿಯ ನಾಯಿಯನ್ನು ಹುಡುಕಲು ಸಹಾಯ ಮಾಡಿ” ಎಂದು ರಮ್ಯಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.
ಇತ್ತೀಚೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದ ಚಾಂಪ್ ನಾಯಿಯ ಬಗ್ಗೆ ಮಾತನಾಡಿದ್ದರು. ರಮ್ಯಾ ಅತಿಯಾಗಿ ಪ್ರೀತಿಸುವ ನಾಯಿ ಚಾಂಪ್ಗೆ 16 ವರ್ಷ. ಅದಕ್ಕೆ ಹೃದಯ ಸಮಸ್ಯೆ ಇದೆಯಂತೆ. ಕಣ್ಣು ಸಹ ಪೂರ್ಣವಾಗಿ ಕಾಣುವುದಿಲ್ಲ. ಆ ನಾಯಿಯೆಂದರೆ ರಮ್ಯಾಗೆ ಬಹಳ ಇಷ್ಟ. ಇದರ ಹೊರತಾಗಿ ರಮ್ಯಾ ಬಳಿ ರಾಣಿ ಹೆಸರಿನ ನಾಯಿ ಒಂದಿದೆ. ಇದು ಬೀದಿನಾಯಿಯಾಗಿದ್ದು, ನಟಿ ರಮ್ಯಾ ಅದನ್ನು ರಕ್ಷಿಸಿ ಮನೆಗೆ ಕರೆತಂದಿದ್ದರು.
ಇದನ್ನೂ ಓದಿ:ಮದುವೆ ಆಗಿಲ್ಲ ಏಕೆ ಎಂದವರಿಗೆ, ಇಂಥಹಾ ಹುಡುಗನ ಹುಡುಕಿಕೊಡಿ ಎಂದ ರಮ್ಯಾ
ರಮ್ಯಾ ಗೋವಾನಲ್ಲಿದ್ದಾಗ ಯಾರೋ ಈ ನಾಯಿಯ ಮೇಲೆ ಕಾರು ಹತ್ತಿಸಿದ್ದರಂತೆ. ಆಗ ರಮ್ಯಾ ಅದನ್ನು ಸಂರಕ್ಷಿಸಿ ಅದಕ್ಕೆ ಚಿಕಿತ್ಸೆ ನೀಡಿ ಹೊರಗೆ ಬಿಟ್ಟಿದ್ದರು. ಆದರೆ ಆ ನಾಯಿ ಒಂದು ತಿಂಗಳ ಬಳಿಕ ಮತ್ತೆ ರಮ್ಯಾ ಅವರನ್ನೇ ಹುಡುಕಿ ಬಂತಂತೆ ಆಗಿನಿಂದ ಅದನ್ನು ರಮ್ಯಾ ಸಾಕಿಕೊಂಡಿದ್ದು ಅದಕ್ಕೆ ರಾಣಿ ಎಂದು ಹೆಸರಿಟ್ಟಿದ್ದಾರೆ. ಈ ಮೊದಲು ರಮ್ಯಾ ಬಳಿ ಬ್ರ್ಯಾಂಡಿ ಹೆಸರಿನ ನಾಯಿ ಇತ್ತು, ಅದು ತೀರಿ ಹೋಯಿತು. ಆ ನಾಯಿಯೆಂದರೆ ರಮ್ಯಾಗೆ ಬಹಳ ಪ್ರೀತಿ. ಆ ನಾಯಿಯನ್ನು ನಟ ಅಂಬರೀಶ್ ಅವರು ರಮ್ಯಾಗೆ ನೀಡಿದ್ದರು. ಆ ನಾಯಿ ತೀರಿಕೊಂಡಾಗ ತೀವ್ರವಾಗಿ ದುಖಃ ಪಟ್ಟಿದ್ದರಂತೆ ರಮ್ಯಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:52 pm, Sat, 6 May 23