ಯಾರು ಬಂದರೂ ಚಿತ್ರರಂಗ (Kannada Film Industry) ಬೇಡ ಎನ್ನುವುದಿಲ್ಲ. ಸಿನಿಮಾ ಕ್ಷೇತ್ರ ಎಲ್ಲರನ್ನೂ ಆಕರ್ಷಿಸುತ್ತದೆ. ಅದೇ ಕಾರಣದಿಂದ ಗಾಂಧಿನಗರಕ್ಕೆ ಪ್ರತಿದಿನ ಹೊಸಬರ ಎಂಟ್ರಿ ಆಗುತ್ತಲೇ ಇರುತ್ತದೆ. ಈಗ ಹೊಸಬರೇ ಸೇರಿಕೊಂಡು ಮಾಡಿರುವ ‘ರಣ ರಾಕ್ಷಸ’ ಸಿನಿಮಾ (Rana Rakshasa) ಸಿದ್ಧಗೊಂಡಿದೆ. ಈ ಸಿನಿಮಾದ ಕೆಲಸಗಳು ಪೂರ್ಣಗೊಂಡಿವೆ. ಅಲ್ಲದೇ ಸೆನ್ಸಾರ್ ಪ್ರಕ್ರಿಯೆ ಕೂಡ ಮುಗಿದಿದೆ. ಈ ಹಿನ್ನೆಲೆಯಲ್ಲಿ ಹೊಸ ಪೋಸ್ಟರ್ಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಿತ್ರತಂಡದವರು ಚಾಲನೆ ನೀಡಿದ್ದಾರೆ. ಈ ಸಿನಿಮಾ (Kannada Cinema) ಶೀಘ್ರದಲ್ಲೇ ಬಿಡುಗಡೆ ಆಗಲು ತಯಾರಿ ಮಾಡಿಕೊಂಡಿದೆ.
‘ರಣ ರಾಕ್ಷಸ’ ಸಿನಿಮಾದಲ್ಲಿ ಹೆಚ್.ಪಿ. ನರಸಿಂಹಸ್ವಾಮಿ ಅವರು ಹೀರೋ ಆಗಿ ನಟಿಸಿದ್ದಾರೆ. ನಿರ್ಮಾಣ ಕೂಡ ಅವರದ್ದೇ. ನಾಯಕ ಹಾಗೂ ನಿರ್ಮಾಪಕನಾಗಿರುವ ಅವರ ಜನ್ಮದಿನದ ಪ್ರಯುಕ್ತ ಹೊಸ ಪೋಸ್ಟರ್ ಅನಾವರಣ ಮಾಡಲಾಗಿದೆ. ಇದರೊಂದಿಗೆ ಪ್ರಚಾರಕ್ಕೆ ಚುರುಕು ಮುಟ್ಟಿಸಲಾಗಿದೆ. ಈ ವೇಳೆ ತಮ್ಮ ಸಿನಿಮಾದ ಜರ್ನಿ ಬಗ್ಗೆ ಹೆಚ್.ಪಿ. ನರಸಿಂಹಸ್ವಾಮಿ ಅವರು ಮಾತನಾಡಿದ್ದಾರೆ.
‘ನಮ್ಮ ತಂದೆ ರಂಗಭೂಮಿ ಕಲಾವಿದರು ಆದ್ದರಿಂದ ಅವರ ಬಳುವಳಿಯಿಂದ ನನಗೆ ಚಿಕ್ಕ ವಯಸ್ಸಲ್ಲೇ ನಟನೆಯ ಗೀಳು ಶುರುವಾಯಿತು. ಬಳಿಕ ಉದ್ಯಮದಲ್ಲಿ ಯಶಸ್ಸು ಪಡೆದೆ. ಬಿಸ್ನೆಸ್ ಕೈ ಹಿಡಿದು ಚಿತ್ರಮಂದಿರದ ಮಾಲೀಕನಾದೆ. ಆ ಎಲ್ಲ ಅನುಭವಗಳನ್ನು ಇಟ್ಟುಕೊಂಡು 4 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ. ಈಗ ನಾಯಕನಾಗಿ ಅಭಿನಯಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ’ ಎನ್ನುತ್ತ ಮತ್ತೆ ಚಿತ್ರರಂಗಕ್ಕೆ ಬಂದ ‘ಫ್ರೆಂಡ್ಸ್’ ಸಿನಿಮಾ ವಾಸು
ಮುರಳಿಪ್ರಸಾದ್ ಅವರು ‘ರಣ ರಾಕ್ಷಸ’ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸಂಗೀತ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಪುಣ್ಯ ಗೌಡ, ದಿಲೀಪ್, ದತ್ತ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಭಾರ್ಗವ ಅವರು ಸಂಕಲನ ಮಾಡಿದ್ದಾರೆ. ಹೆಸರುಘಟ್ಟ, ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ‘ಶ್ರೀಲಕ್ಷೀ ನರಸಿಂಹಸ್ವಾಮಿ ಎಂಟರ್‌ಟೈನ್‌ಮೆಂಟ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.
ಚಿತ್ರತಂಡ ಹೇಳಿಕೊಂಡಿರುವಂತೆ ‘ರಣ ರಾಕ್ಷಸ’ ಸಿನಿಮಾದಲ್ಲಿ ತಂದೆ ಹಾಗೂ ಮಗಳ ಬಾಂಧವ್ಯದ ಕತೆ ಇದೆ. ತಮ್ಮ ಎಲ್ಲ ಸಿನಿಮಾಗಳಲ್ಲಿ ಹೊಸಬರಿಗೆ ಅವಕಾಶ ನೀಡಿರುವುದಾಗಿ ನಿರ್ಮಾಪಕರು ಹೇಳಿದ್ದಾರೆ. ತಮ್ಮ ನಿರ್ಮಾಣದ ಇನ್ನುಳಿದ ಸಿನಿಮಾಗಳ ವಿವಿಧ ವಿಭಾಗಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ‘ರಣ ರಾಕ್ಷಸ’ ಸಿನಿಮಾದ ಬಿಡುಗಡೆ ಸಿದ್ಧತೆಯಲ್ಲಿ ಅವರು ನಿರತರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.