ರಿಷಬ್ ಶೆಟ್ಟಿ (Rishab Shetty) ಅವರು ನಟನಾಗಿ, ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಚಿತ್ರರಂಗಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಅವರ ನಿರ್ದೇಶನದ ‘ಕಾಂತಾರ’ ಚಿತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಅವರು ಗೋವಾದಲ್ಲಿ ನಡೆದ 54ನೇ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದರು. ಅವರಿಗೆ ಸ್ಪೆಷಲ್ ಜ್ಯೂರಿ ಅವಾರ್ಡ್ ಸಿಕ್ಕಿದೆ. ಈ ಕಾರ್ಯಕ್ರಮದಲ್ಲಿ ಅವರು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ಒಟಿಟಿ ಪ್ಲಾಟ್ಫಾರ್ಮ್ಗಳು ಕನ್ನಡ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೋರಿದ್ದಾರೆ.
‘ಒಟಿಟಿ ಪ್ಲಾಟ್ಫಾರ್ಮ್ಗಳು ಕನ್ನಡ ಚಿತ್ರರಂಗಕ್ಕೆ ಹೆಚ್ಚು ತೆರೆದುಕೊಂಡಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇಲ್ಲಿ ಸಬ್ಸ್ಕ್ರೈಬ್ಗಳು ಸಿಗುವುದಿಲ್ಲ ಎಂದು ಅವರು ಹೇಳುತ್ತಾರೆ. ಕೊರೊನಾ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಒಡೆತನದ ‘ಪರಂವಃ ಸ್ಟುಡಿಯೋಸ್’ ಹಾಗೂ ನನ್ನ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಸಾಕಷ್ಟು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದವು. ಇದರ ಹೊರತಾಗಿ ಹಲವು ನಿರ್ಮಾಣ ಸಂಸ್ಥೆಗಳು ಸಿನಿಮಾ ಮಾಡುತ್ತಿವೆ. ನಾವು ಚಿತ್ರೋತ್ಸವಗಳನ್ನು ಮಾಡುತ್ತಿದ್ದೇವೆ. ಆದಾಗ್ಯೂ ಅವರು ನಮ್ಮ ಸಿನಿಮಾಗಳು ತೆಗೆದುಕೊಳ್ಳುತ್ತಿಲ್ಲ’ ಎಂದು ಅಸಮಾಧಾನ ಹೊರಹಾಕಿದ್ದಾರೆ ರಿಷಬ್ ಶೆಟ್ಟಿ.
‘ಅಂತಾರಾಷ್ಟ್ರೀಯ ಸಿನಿಮೋತ್ಸವದವದರ ಬಳಿ ಹಾಗೂ ಅದರ ಸ್ಪಾನ್ಸರ್ಗಳ ಬಳಿ ನಮ್ಮ ಸಿನಿಮಾಗಳನ್ನು ಗುರುತಿಸುವಂತೆ ಕೋರುತ್ತೇನೆ. ಥಿಯೇಟರ್ನಲ್ಲಿ ಹೆಚ್ಚು ಮಾನ್ಯತೆ ಸಿಗದೇ ಇರುವ ಸಿನಿಮಾಗಳನ್ನು ಒಟಿಟಿ ಪ್ಲಾಟ್ಫಾರ್ಮ್ಗಳು ತೆಗೆದುಕೊಳ್ಳಬೇಕು’ ಎಂದು ಅವರು ಬೇಡಿಕೆ ಇಟ್ಟಿದ್ದಾರೆ.
ಒಟಿಟಿ ಪ್ಲಾಟ್ಫಾರ್ಮ್ಗಳು ಕನ್ನಡ ಚಿತ್ರಗಳಿಗೆ ಹೆಚ್ಚಿನ ಹಣ ನೀಡುತ್ತಿಲ್ಲ, ಕೆಲ ಸಿನಿಮಾಗಳನ್ನು ಖರೀದಿ ಮಾಡಲು ಮುಂದೆ ಬರುತ್ತಿಲ್ಲ ಎನ್ನುವ ಆರೋಪ ಮೊದಲಿನಿಂದಲೂ ಇದೆ. ವಿಮರ್ಶಕರಿಂದ ಮೆಚ್ಚುಗೆ ಪಡೆದ ಚಿತ್ರಗಳಿಗೆ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಜಾಗ ಸಿಕ್ಕಿಲ್ಲ. ಈ ಬಗ್ಗೆ ರಿಷಬ್ ಧ್ವನಿ ಎತ್ತಿದ್ದಾರೆ.
ಇದನ್ನೂ ಓದಿ: ‘ಈ ಪ್ರಶಸ್ತಿಯನ್ನು ಶಂಕರ್ ನಾಗ್ಗೆ ಅರ್ಪಿಸುತ್ತೇನೆ’; ಭಾವುಕರಾಗಿ ಪತ್ರ ಬರೆದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಅವರು ‘ಕಾಂತಾರ ಚಾಪ್ಟರ್ 1’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇ್ದಾರೆ. ಈ ಚಿತ್ರದ ಫಸ್ಟ್ ಲುಕ್ ಟೀಸರ್ ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡಿದೆ. ಒಂದು ದಿನದಲ್ಲಿ 1.2 ಕೋಟಿ ಬಾರಿ ಇದು ವೀಕ್ಷಣೆ ಕಂಡಿದೆ. ರಿಷಬ್ ಅವರು ಸಖತ್ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಕನ್ನಡ ಸೇರಿ ಏಳು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ