ಬೆಂಗಳೂರು: ‘ಪತಿ ಬೇಕು ಡಾಟ್ ಕಾಂ’ ಸಿನಿಮಾದ ಹಣಕಾಸು ವಿವಾದಕ್ಕೆ ಸಂಬಂಧಿಸಿ ನಿರ್ದೇಶಕನಿಗೆ ಬೆದರಿಸಿ ಚೆಕ್ಗಳಿಗೆ ಸಹಿ ಪಡೆದ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಠಾಣೆ ಪಿಎಸ್ಐ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ.
ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಪೊಲೀಸ್ ಆಯುಕ್ತರ ಮೂಲಕ PSI ಮಂಜುನಾಥ ಹಾಗೂ ಕಾನ್ಸ್ಟೇಬಲ್ ಕೇಶವ್ ವಿರುದ್ಧ ವಾರಂಟ್ ಜಾರಿಗೊಳಿಸಲು ಆದೇಶ ನೀಡಿದೆ. PSI ಮಂಜುನಾಥ ಪತಿ ಬೇಕು ಡಾಟ್ ಕಾಂ ಸಿನಿಮಾಗೆ ಬಂಡವಾಳ ಹೂಡಿದ್ದರು. ಸಿನಿಮಾ ನಷ್ಟ ಅನುಭವಿಸಿದ್ದರಿಂದ ನಿರ್ದೇಶಕ ರಾಕೇಶ್ಗೆ ಹಣ ಹಿಂದಿರುಗಿಸಲು ಒತ್ತಡ ಹೇರಿದ್ದಾರೆ.
ನೆಲಮಂಗಲ ಪೊಲೀಸ್ ಠಾಣೆಗೆ ಕರೆಸಿಕೊಂಡು ಬೆದರಿಸಿ ಚೆಕ್ಗೆ ಸಹಿ ಪಡೆದಿದ್ದರು. ಹೀಗಾಗಿ ಪೊಲೀಸರ ವಿರುದ್ಧ ರಾಕೇಶ್ ಖಾಸಗಿ ದೂರು ಸಲ್ಲಿಸಿದ್ದರು. ಆದರೆ ಸಮನ್ಸ್ ನೀಡಿದರೂ ಪೊಲೀಸರು ಕೋರ್ಟ್ಗೆ ಹಾಜರಾಗಿರಲಿಲ್ಲ. ವಾರಂಟ್ ಜಾರಿಗೊಳಿಸುವಂತೆ ವಕೀಲ ವೇದಮೂರ್ತಿ ವಾದ ಮಂಡಿಸಿದ್ದರು. ಸಿವಿಲ್ ಕೇಸ್ನಲ್ಲಿ ಪೊಲೀಸರ ಹಸ್ತಕ್ಷೇಪಕ್ಕೆ ಕೋರ್ಟ್ ಗರಂ ಆಗಿತ್ತು. ಸದ್ಯ ಈಗ ಎಸಿಎಂಎಂ ಕೋರ್ಟ್ ಜಡ್ಜ್ ಬಾಲಗೋಪಾಲಕೃಷ್ಣ 2021ರ ಜನವರಿ 29ರೊಳಗೆ ವಾರಂಟ್ ಜಾರಿಗೆ ಆದೇಶಿಸಿದ್ದಾರೆ.