‘ಲೂಸಿಯಾ’ ಸಿನಿಮಾ ಮೂಲಕ ಹೊಸ ಅಲೆ ಎಬ್ಬಿಸಿದ್ದ ನಿರ್ದೇಶಕ ಪವನ್ ಕುಮಾರ್ ತಮ್ಮ ಇನ್ನೋವೇಟಿವ್ ಐಡಿಯಾಗಳ ಮೂಲಕ ಆಗಗ್ಗೆ ಗಮನ ಸೆಳೆಯುತ್ತಿರುತ್ತಾರೆ. ತಂತ್ರಜ್ಞಾನವನ್ನು ಸಿನಿಮಾದಲ್ಲಿ ಮತ್ತು ಸಿನಿಮಾ ಮಾರುಕಟ್ಟೆಯಲ್ಲಿ ಪ್ರಬಲವಾಗಿ ಬಳಸುವ ಕನ್ನಡದ ಬೆರಳೆಣಿಕೆ ನಿರ್ದೇಶಕರಲ್ಲಿ ಪವನ್ ಕುಮಾರ್ ಮೊದಲಿಗರು. ಪ್ರಸ್ತುತ, ಒಟಿಟಿಗಳು ಕನ್ನಡ ಸಿನಿಮಾಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಹೀಗಿರುವಾಗ ಪವನ್ ಸಲಹೆಯೊಂದನ್ನು ನೀಡಿದ್ದಾರೆ. ನಾವೇಕೆ ನಮ್ಮ ಸಿನಿಮಾಗಳನ್ನು ಒಟಿಟಿಗಳಿಗೆ ಮಾರಬೇಕು ಅವರ ಏಕೆ ಸಿನಿಮಾ ಕೊಳ್ಳುವಂತೆ ಅಂಗಲಾಚಬೇಕು ಅದರ ಬದಲಿಗೆ ಯೂಟ್ಯೂಬ್ಗೆ ಸಿನಿಮಾ ಹಾಕೋಣ ಎಂದಿದ್ದಾರೆ. ಮಾತ್ರವಲ್ಲ, ಇದರಿಂದ ಒಟಿಟಿಗಿಂತಲೂ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ಸಹ ಹೇಳಿದ್ದಾರೆ.
‘ಇತ್ತೀಚೆಗಷ್ಟೆ ಕನ್ನಡದ ಒಂದು ಸಿನಿಮಾ ಬಿಡುಗಡೆ ಆಯ್ತು. ನಾನೂ ಸಹ ಆ ಸಿನಿಮಾವನ್ನು ಬೆಂಬಲಿಸಿದ್ದೆ, ದೊಡ್ಡ ನಟರ ಸಿನಿಮಾ ಅಲ್ಲದ ಕಾರಣ ಚಿತ್ರಮಂದಿರದಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಒಟಿಟಿಗಳವರು ಸಹ ಯಾರೂ ಅದನ್ನು ತೆಗೆದುಕೊಳ್ಳಲಿಲ್ಲ. ನಿಜಕ್ಕೂ ಅದೊಂದು ನೋಡಬೇಕಾಗಿರುವ ಸಿನಿಮಾ. ಇಂಥಹಾ ಸಿನಿಮಾ ಮಾಡುವವರಿಗೆ ನನ್ನ ಸಲಹೆ ಏನೆಂದರೆ ನೀವೇಕೆ ಒಟಿಟಿಗಳಿಗೆ ಮಾರಬೇಕೆಂದು ಹಠಪಡುತ್ತೀರಿ. ನಿಮ್ಮ ಸಿನಿಮಾಗಳನ್ನು ನೇರವಾಗಿ ಯೂಟ್ಯೂಬ್ನಲ್ಲಿ ಹಾಕಿ’ ಎಂದಿದ್ದಾರೆ. ಅಲ್ಲಿಂದ ಲಾಭ ಮಾಡುವ ದಾರಿಯನ್ನೂ ಅವರೇ ಹೇಳಿದ್ದಾರೆ.
‘ಯೂಟ್ಯೂಬ್ನಲ್ಲಿ ಸಿನಿಮಾ ಹಾಕಿ, ಅಲ್ಲಿ ನಿಮ್ಮ ಕ್ಯೂ ಆರ್ ಕೋಡ್ ಅನ್ನು ಸಹ ಸೇರಿಸಿ. ಯಾರ್ಯಾರು ಸಿನಿಮಾ ನೋಡುತ್ತಾರೋ ಅವರಿಗೆ ಆ ಸಿನಿಮಾದ ಮೌಲ್ಯ ಎಷ್ಟು ಅನಿಸುತ್ತದೆಯೋ ಅಷ್ಟು ಹಣ ಹಾಕಲಿ. ಒಬ್ಬರು ಹತ್ತು ಹಾಕಬಹುದು, ಒಬ್ಬರು ನೂರು ಸಹ ಹಾಕಬಹುದು. ಕನ್ನಡದಲ್ಲಿ ಇತ್ತೀಚೆಗೆ ಬಂದ ಆ ಒಂದು ಸಣ್ಣ ಸಿನಿಮಾಕ್ಕೆ 30 ಲಕ್ಷ ಬಂಡವಾಳ ಹೂಡಲಾಗಿದೆ. ಹಾಗಿದ್ದರೆ ಆ ಬಂಡಳವಾವನ್ನು ಆತ ವಾಪಸ್ ಪಡೆಯುವುದು ಹೇಗೆ?. ಅದಕ್ಕೆ ಇರುವ ದಾರಿಯೆಂದರೆ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿ ಅದರಿಂದ ಹಣ ಗಳಿಸುವುದು’ ಎಂದಿದ್ದಾರೆ ಪವನ್.
ಇದನ್ನೂ ಓದಿ:‘ಲೂಸಿಯಾ’ ಸಿನಿಮಾಗೆ 10 ವರ್ಷ; ಸೆ.6ಕ್ಕೆ ಚಿತ್ರಮಂದಿರದಲ್ಲಿ ಮರು ಬಿಡುಗಡೆ
ತಮ್ಮದೇ ಸಿನಿಮಾದ ಉದಾಹರಣೆ ನೀಡಿರುವ ಪವನ್ ಕುಮಾರ್, ‘ನಾನು ನಿರ್ದೇಶಿಸಿದ ‘ಧೂಮಂ’ ಸಿನಿಮಾ ಚಿತ್ರಮಂದಿರದಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಕೊನೆಗೆ ಸಿನಿಮಾದ ಕನ್ನಡ ಮತ್ತು ಮಲಯಾಳಂ ಆವೃತ್ತಿಯನ್ನು ನಾವು ಒಂದು ತಿಂಗಳ ಹಿಂದೆ ಅಷ್ಟೆ ಯೂಟ್ಯೂಬ್ನಲ್ಲಿ ಉಚಿತ ವೀಕ್ಷಣೆಗೆ ಹಾಕಿದೆವು. ಮಲಯಾಳಂ ಆವೃತ್ತಿಯನ್ನು 20 ಲಕ್ಷ ಜನ ನೋಡಿದ್ದಾರೆ. ಕನ್ನಡ ಆವೃತ್ತಿಯನ್ನು ಸುಮಾರು ನಾಲ್ಕು ಜನ ನೋಡಿದ್ದಾರೆ. ಊಹಿಸಿ ಒಂದೊಮ್ಮೆ ಕ್ಯೂಆರ್ ಕೋಡ್ ಸಮೇತ ಸಿನಿಮಾ ಹಾಕಿ ಒಬ್ಬರು 100 ರೂಪಾಯಿ ಹಾಕಿದ್ದರೆ ನಮಗೆ 24 ಕೋಟಿ ಗಳಿಕೆ ಆಗಿರುತ್ತಿತ್ತು. ಒಂದು ಭರ್ಜರಿ ಸಿನಿಮಾವನ್ನು ಅದರಿಂದ ಮಾಡಬಹುದಿತ್ತು. ಆದರೆ ಹೊಂಬಾಳೆಗೆ ಕ್ಯೂ ಆರ್ ಕೋಡ್ ಅವಶ್ಯಕತೆ ಇರಲಿಲ್ಲ ಹಾಗಾಗಿ ಅವರು ಹಾಕಲಿಲ್ಲ’ ಎಂದಿದ್ದಾರೆ ಪವನ್ ಕುಮಾರ್.
ಈಗಾಗಲೇ ನಾನು ಕೆಲವು ಸಿನಿಮಾ ನಿರ್ದೇಶಕರ ಬಳಿ ಸಿನಿಮಾವನ್ನು ಯೂಟ್ಯೂಬ್ಗೆ ಹಾಕುವ ಬಗ್ಗೆ ಮಾತನಾಡಿದ್ದೇನೆ. ಕೆಲವು ನಿರ್ದೇಶಕರು ಇದಕ್ಕೆ ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕೆಲವರು ಸಿನಿಮಾಗಳನ್ನು ಯೂಟ್ಯೂಬ್ಗೆ ಹಾಕಲಿದ್ದಾರೆ. ದಯವಿಟ್ಟು ನೋಡಿ ನಿಮಗೆ ಇಷ್ಟವಾದರೆ ನಿಮ್ಮ ಅನುಕೂಲಕ್ಕೆ ತಕ್ಕಷ್ಟು ಹಣ ಹಾಕಿ. ಆ ಮೂಲಕ ನಿಮ್ಮ ಸಿನಿಮಾಗಳನ್ನು ನೋಡುವ ಪ್ರೇಕ್ಷಕರು ಇದ್ದೇವೆ ಎಂಬುದನ್ನು ನಿರ್ದೇಶಕರಿಗೆ ತೋರಿಸಿ, ಅವರು ಮತ್ತೆ ಸಿನಿಮಾ ಮಾಡಲು ಹುರುಪು ನೀಡಿ’ ಎಂದಿದ್ದಾರೆ ಪವನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ